ನಗರಸಭೆ ಕೌನ್ಸಿಲ್ ಸುಪ್ರೀಮೋ ಅಥವಾ ಎಂಎಲ್ಎನೋ

| Published : Feb 19 2025, 12:48 AM IST

ಸಾರಾಂಶ

ಮಂಗಳವಾರ ನಡೆದ ಚಿತ್ರದುರ್ಗ ಸಾಮಾನ್ಯ ಸಭೆಯಲ್ಲಿ ರಸ್ತೆ ಅಗಲೀಕರಣದ ವಿಚಾರವಾಗಿ ನಮ್ಮನ್ನು ಕತ್ತಲಲ್ಲಿ ಇಡಲಾಗಿದೆ ಎಂದು ಆರೋಪಿಸಿ ಸದಸ್ಯರು ಪೌರಾಯುಕ್ತೆ ರೇಣುಕಾ ಅವರ ಮೇಲೆ ಮುಗಿ ಬಿದ್ದರು.

ರಸ್ತೆ ಅಗಲೀಕರಣ ಏಕ ಪಕ್ಷೀಯ ತೀರ್ಮಾನಕ್ಕೆ ಆಕ್ಷೇಪ । ಶಾಸಕ ವೀರೇಂದ್ರ ಪಪ್ಪಿ ವಿರುದ್ಧ ಸದಸ್ಯರ ಪರೋಕ್ಷ ವಾಗ್ದಾಳಿ ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗ ನಗರದ ಅಭಿವೃದ್ಧಿ ಚಟುವಟಿಕೆ ವಿಚಾರದಲ್ಲಿ ನಗರಸಭೆ ಕೌನ್ಸಿಲ್ ನಿರ್ಣಯ ಸುಪ್ರೀಮೋ ಅಥವಾ ಎಂಎಲ್ಎ ಅಭಿಪ್ರಾಯವೋ..

ಮಂಗಳವಾರ ನಡೆದ ಚಿತ್ರದುರ್ಗ ನಗರಸಭೆ ಸಾಮಾನ್ಯ ಸಭೆಯಲ್ಲಿ ನಾನಾ ನೀನಾ ಎಂಬ ಸಂವಿಧಾನಾತ್ಮಕ ಅಂಶಗಳು ಸಭೆಯುದ್ದಕ್ಕೂ ಮಾರ್ದನಿಸಿತು. ಪಕ್ಷಾತೀತವಾಗಿ ಸದಸ್ಯರು ಶಾಸಕ ವೀರೇಂದ್ರ ಪಪ್ಪಿ ಮೇಲೆ ಪರೋಕ್ಷ ವಾಗ್ದಾಳಿ ನಡೆಸಿದರು. ರಸ್ತೆ ಅಗಲೀಕರಣದ ವಿಚಾರದಲ್ಲಿ ಏಕ ಪಕ್ಷೀಯ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆರೋಪಗಳ ಮಳೆಗರೆದರು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಗೊಪ್ಪೆ ಮಂಜುನಾಥ್, ಕಟ್ಟಡಗಳ ಅಳತೆ ಮಾಡಿ 21 ಮೀಟರ್‌ಗೆ ಕೆಂಪು ಮಾರ್ಕ್ ಹಾಕಲು ಯಾರು ಹೇಳಿದರು. ಮುಖ್ಯರಸ್ತೆ ಕಟ್ಟಡಗಳು ನಗರಸಭೆ ವ್ಯಾಪ್ತಿಗೆ ಬರುತ್ತವೆಯೇ ಇಲ್ಲವೋ, ಈ ವಿಚಾರದಲ್ಲಿ ಕೌನ್ಸಿಲ್ ತೀರ್ಮಾನ ತೆಗೆದುಕೊಳ್ಳುವಂತಿಲ್ಲವಾ ಎಂಬಿತ್ಯಾದಿ ಪ್ರಶ್ನೆಗಳ ಹರವಿದರು.

ಈ ಮಾತಿಗೆ ಪ್ರತಿಕ್ರಿಯಿಸಿದ ಪೌರಾಯುಕ್ತೆ ರೇಣುಕಾ, ನಗರಸಭೆ ಕೌನ್ಸಿಲ್ ನಿರ್ಣಯ ಕೈಗೊಳ್ಳದ ಹೊರತು ಏನೂ ಮಾಡಲು ಬರುವುದಿಲ್ಲ, ಹಾಗಾಗಿಯೇ ರಸ್ತೆ ಒತ್ತುವರಿ ತೆರವು ವಿಷಯವ ಸಭೆಯ ಗಮನಕ್ಕೆ ಏತರಲಾಗಿದೆ ಎಂದರು. ಪೌರಾಯುಕ್ತರ ಮಾತು ಗೊಪ್ಪೆ ಮಂಜುನಾಥ್‌ರಲ್ಲಿ ಕೋಪ ತರಿಸಿತು. ಒತ್ತುವರಿ ತೆರವೋ ಅಥವಾ ರಸ್ತೆ ಅಗಲೀಕರಣವೋ ಮೊದಲು ಸ್ಪಷ್ಟಪಡಿಸಿ. ಒತ್ತುವರಿ ಬೇರೆ, ತೆರವು ಬೇರೆ ಎಂದು ಏರು ದನಿಯಲ್ಲಿ ಪ್ರಶ್ನಿಸಿದರು.

ಸದಸ್ಯ ದೀಪು ಮಾತನಾಡಿ, ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಶಾಸಕರು ನಗರಸಭೆಯಲ್ಲಿ ನಡೆಸಿದ ಸಭೆಗೆ ಸದಸ್ಯರಿಗೆ ಆಹ್ವಾನವಿರಲಿಲ್ಲ. ಕೆಲ ಸದಸ್ಯರು ಸಭೆಗೆ ಹೋಗಲು ಮುಂದಾದಾಗ ಅವರನ್ನು ತಡೆದು ಹೊರ ಕಳಿಸಲಾಯಿತು. ಸದಸ್ಯರನ್ನು ಒಳಗೆ ಬಿಡಲ್ಲ ಎಂದರೆ ಏನರ್ಥ. ನಗರಸಭೆ ಸದಸ್ಯರ ಕತ್ತಲಲ್ಲಿ ಇಟ್ಟು ಸಭೆ ನಡೆಸಿದ ಉದ್ದೇಶ ಸ್ಪಷ್ಟವಾಗುತ್ತಿಲ್ಲ. ಕೌನ್ಸಿಲ್ ಒಪ್ಪಿಗೆ ಪಡೆಯದೇ ಹೇಗೆ ಗೋಡೆಗಳ ಮೇಲೆ ಮಾರ್ಕ್ ಮಾಡಿದಿರಿ ಎಂದರು.

ಮಧ್ಯ ಪ್ರವೇಶಿಸಿ ಮಾತನಾಡಿದ ಸದಸ್ಯ ಜೈನುದ್ದೀನ್, ಕಳೆದ ಒಂದುವರೆ ತಿಂಗಳಿಂದ ನಗರಸಭೆಯಲ್ಲಿ ನೌಕರರಾರೂ ಕೆಲಸ ಮಾಡಿಲ್ಲ. ಎಲ್ಲರೂ ಕಟ್ಟಡಗಳ ಮೇಲೆ ಮಾರ್ಕಿಂಗ್ ಮಾಡಲು ಹೋಗಿದ್ದಾರೆ. ಸಾರ್ವಜನಿಕರು ಕೆಲಸವಾಗದೆ ಶಪಿಸಿ ವಾಪಾಸ್ಸು ಹೋಗಿದ್ದಾರೆ. ಕೌನ್ಸಿಲ್ ನಿರ್ಣಯ ಆಗದೆ ಮಾರ್ಕ್ ಮಾಡೋಕೆ ನೌಕರರ ಏಕೆ ಕಳಿಸಿಬೇಕಿತ್ತು ಎಂದು ಪ್ರಶ್ನಿಸಿದರು.

ಚಳ್ಳಕೆರೆ ವೃತ್ತದಿಂದ ಗಾಂಧಿ ವೃತ್ತದ ಮಾರ್ಗವಾಗಿ, ಕನಕ ವೃತ್ತದವರೆಗೂ ಅಗಲೀಕರಣ ಮಾಡಿದರೆ 400 ಕೋಟಿ ಹಣ ಬೇಕಾಗುತ್ತದೆ, ಇಷ್ಟೊಂದು ಹಣ ನಗರಸಭೆಯಲ್ಲಿ ಎಲ್ಲಿದೆ? 21 ಮೀಟರ್ ಗಳವರೆಗೆ ತೆರವು ಮಾಡುವ ಉದ್ದೇಶ ಇದ್ದರೆ ಕಟ್ಟಡ ಕಟ್ಟಲು ಅನುಮತಿ ಏಕೆ ಕೊಟ್ಟಿರಿ. ಅಗಲೀಕರಣಕ್ಕೆ ಸರ್ಕಾರ ದುಡ್ಡು ಕೊಡುತ್ತದೆಯೇ ಮಾಹಿತಿ ಕೊಡಿ ಎಂದು ಸದಸ್ಯ ಶ್ರೀನಿವಾಸ್ ಆಗ್ರಹಿಸಿದರು.

ತೆರವು ಕಾರ್ಯಾಚರಣೆಗೆ ಸರ್ಕಾರದಿಂದ ಯಾವುದೇ ರೀತಿಯ ಹಣ ಕೊಡುವುದಿಲ್ಲವೆಂದು ಪೌರಾಡಳಿತ ನಿರ್ದೇಶಕರು ಈಗಾಗಲೇ ಸುತ್ತೋಲೆ ಹೊರಡಿಸಿದ್ದಾರೆ. ಹಾಗಾಗಿ ಏನೇ ತೆರವು ಗೊಳಿಸಿದರೂ ಅದರ ವೆಚ್ಚ ನಗರಸಭೆಯೇ ಭರಿಸಬೇಕಾಗುತ್ತದೆ. ಹಾಗೊಂದು ವೇಳೆ ನಗರಸಭೆ ಅನುದಾನಕ್ಕಾಗಿ ಸರ್ಕಾರವನ್ನು ಕೋರಬಹುದು ಎಂದು ಪೌರಾಯುಕ್ತೆ ರೇಣುಕಾ ಹೇಳಿದರು.ರಸ್ತೆ ಅಗಲೀಕರಣಕ್ಕೆ ಮಾರ್ಕ್ ಮಾಡಿರುವುದರಿಂದ ಜನ ನಮ್ಮನ್ನು ಬಿಡುತ್ತಿಲ್ಲ, ಬೆಳಗ್ಗೆ 6 ಗಂಟೆಯಿಂದ ರಾತ್ರಿ 10ರ ವರೆಗೂ ಯಾವಾಗ, ಎಷ್ಟು ಮೀಟರ್ ಎಂಬಿತ್ಯಾದಿ ಪ್ರಶ್ನೆ ಕೇಳುತ್ತಿದ್ದಾರೆ. ಅಗಲೀಕರಣದ ಪ್ರಸ್ತಾಪವಾದ ನಂತರ ಯಾರೂ ಕಂದಾಯ ಕಟ್ಟುತ್ತಿಲ್ಲ, ನಗರಸಭೆಗೆ 2 ಕೋಟಿ ನಷ್ಟವಾಗಿದೆ. ಇದಕ್ಕೆ ಯಾರು ಹೊಣೆ ಎಂದು ಗೊಪ್ಪೆ ಮಂಜುನಾಥ್ ಪ್ರಶ್ನಿಸಿದರು.

ರಸ್ತೆ ಅಗಲೀಕರಣದ ವಿಚಾರದಲ್ಲಿ ಪೌರಾಯುಕ್ತರು ಸ್ಪಷ್ಟ ಮಾಹಿತಿ, ದಾಖಲಾತಿಗಳ ಕೌನ್ಸಿಲರಿಗೆ ನೀಡಿಲ್ಲ. ಹಾಗಾಗಿ ಈ ಬಗ್ಗೆ ಚರ್ಚೆ ಬೇಡ ಎನಿಸುತ್ತದೆ. ದಾಖಲಾತಿ ನೀಡಿದ ನಂತರ ಆಲೋಚಿಸೋಣ. ವಿಷಯ ಇಲ್ಲಿಗೆ ಕೈ ಬಿಡೋಣವೆಂದು ಸ್ಥಾಯಿ ಸಮಿತಿ ಅಧ್ಯಕ್ಷ ನಸ್ರುಲ್ಲಾ ಹೇಳಿದಾಗ ಸಭೆ ಅನುಮೋದಿಸಿತು. ಅಧ್ಯಕ್ಷ ಸುನಿತಾ ಬಿ.ಎನ್. ಅಧ್ಯಕ್ಷತೆ ವಹಿಸಿದ್ದರು.