ಸಾರಾಂಶ
ಹಳೇ ವಿಚಾರಗಳನ್ನೇ ಪುನಃ ಪ್ರತಿಪಾದಿಸಿದ ಸದಸ್ಯರು । ಮುಖ್ಯಾಧಿಕಾರಿ ಮೇಲೆ ಹಣ ಖರ್ಚಿನ ಆರೋಪಕನ್ನಡಪ್ರಭ ವಾರ್ತೆ ಹೊಸದುರ್ಗ
ಪಟ್ಟಣದ ಸಮಸ್ಯೆಗಳಿಗೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿ ನಡೆಯಬೇಕಾದ ಸಾಮಾನ್ಯಸಭೆ ಕೆಲ ಹಿರಿಯ ಸದಸ್ಯರ ವೈಯಕ್ತಿಕ ಪ್ರತಿಷ್ಠೆಗಳಿಗೆ ಬಲಿಯಾಯಿತು.3ನೇ ಬಾರಿ ಮುಂದೂಡಿದ ಸಭೆಯಾಗಿದ್ದ, ಈ ಸಭೆಯಲ್ಲಿಯೂ ಅಜೆಂಡಾದಂತೆ ಸಭೆ ನಡೆಯದೆ ಈ ಹಿಂದೆ ಯಾವ ವಿಚಾರಗಳಿಗಾಗಿ ಸಭೆಯನ್ನು ಮುಂದೂಡಲಾಗಿತ್ತೋ ಅದೇ ವಿಚಾರಗಳನ್ನೇ ಸದಸ್ಯರು ಪುನಃ ಪ್ರತಿಪಾದಿಸುವ ಮೂಲಕ ಕಾಲಹರಣ ಮಾಡಿದರು.
ಸಭೆಯಲ್ಲಿ ಸದಸ್ಯ ರಾಮಚಂದ್ರಪ್ಪ 2ನೇ ಅವಧಿಗೆ ಅಧ್ಯಕ್ಷರ ಆಯ್ಕೆಯಾದ ನಂತರ ಮುಖ್ಯಾಧಿಕಾರಿ ಗಳು ಅಧ್ಯಕ್ಷರ ಗಮನಕ್ಕೆ ಬಾರದೇ ಹಣ ಖರ್ಚು ಹಾಕುತ್ತಿದ್ದಾರೆ. ಮುಖ್ಯಾಧಿಕಾರಿಗಳು ತಮ್ಮ ಗಮನಕ್ಕೆ ಏನನ್ನೂ ತರುತ್ತಿಲ್ಲ ಎಂದು ಅಧ್ಯಕ್ಷರೇ ಹೇಳುತ್ತಿದ್ದಾರೆ. ಇನ್ನು ಸದಸ್ಯರಿಗೆ ಯಾವುದೇ ಮಾಹಿತಿಯನ್ನು ಮುಖ್ಯಾಧಿಕಾರಿಗಳು ನೀಡುತ್ತಿಲ್ಲ. ಈ ಬಗ್ಗೆ ಸರಿಯಾದ ಉತ್ತರ ನೀಡದೆ ಸಭೆ ಮುಂದುವರೆಸುವುದು ಅಗತ್ಯವಿಲ್ಲ ಎಂದು ಹೇಳಿದರು.ಇದಕ್ಕೆ ಸದಸ್ಯೆ ಡಾ.ಸ್ವಾತಿ ಪ್ರದೀಪ್ ಆಕ್ಷೇಪ ವ್ಯಕ್ತಪಡಿಸಿ, ಇದೇ ವಿಚಾರವಾಗಿ ಕಳೆದ 2 ಸಭೆಗಳನ್ನು ಮುಂದೂಡಲಾಗಿದೆ. ಪದೇ ಪದೇ ಕೇಳಿದ್ದೇ ಪ್ರಶ್ನೆಯನ್ನು ಮತ್ತೆ ಯಾಕೆ ಕೇಳುತ್ತೀರಾ ಗಂಭೀರವಾದ ವಿಷಯಗಳ ಬಗ್ಗೆ ಚರ್ಚೆಯಾಗಬೇಕಿದೆ ಸಭೆ ನಡೆಯಲು ಎಲ್ಲಾ ಸದಸ್ಯರು ಅವಕಾಶ ಮಾಡಿಕೊಡಿ ಎಂದರು.
ಇದಕ್ಕೆ ಸದಸ್ಯ ರಾಮಚಂದ್ರಪ್ಪ ಮಾತನಾಡಿ, ನಾನೇನು ನನ್ನ ವಯ್ಯಕ್ತಿಕ ವಿಚಾರವನ್ನು ಪ್ರಸ್ತಾಪಿಸುತ್ತಿಲ್ಲ. ಇದು ಅಧ್ಯಕ್ಷರು ಹಾಗೂ ಸದಸ್ಯರ ಗೌರವದ ಪ್ರಶ್ನೆ. ಸುಮ್ಮನೆ ಹೇಗೆ ಬಿಡಲಿ ಎಂದಾಗ ಕೆಲ ಹೊತ್ತು ಸದಸ್ಯರ ನಡುವೆಯೇ ವಾದ ಪ್ರತಿವಾದ ನಡೆದು ಸಭೆ ಗದ್ದಲದ ಗೂಡಾಯಿತು.ಸದಸ್ಯೆ ಗಿರೀಶ್ ಮಾತನಾಡಿ, ಪುರಸಭೆಯಲ್ಲಿ ಅಧಿಕಾರಿಗಳು ಸದಸ್ಯರ ಅಹವಾಲುಗಳನ್ನೇ ಕೇಳುತ್ತಿಲ್ಲ ಇನ್ನೂ ಸದಸ್ಯರಿಗೇ ಏಕ ವಚನದಲ್ಲಿ ಮಾತನಾಡುವ ಹಂತಕ್ಕೆ ಬಂದಿದ್ದಾರೆ. ಇನ್ನೂ ನಮ್ಮ ಗೌರವವನ್ನು ನಾವೇ ಕಳೆದುಕೊಳ್ಳುವಂತಾಗಿದೆ, ಇದು ನಮ್ಮ ದೌರ್ಬಾಗ್ಯ ಎಂದರು. ಪುರಸಭೆಯ ಆರೋಗ್ಯಾಧಿಕಾರಿ ಕೇವಲ ಬಿಲ್ ಬರೆಯುವುದಕ್ಕೆ ಸೀಮಿತವಾಗಿದ್ದಾರೆ. ಹೊಸ ಯಂತ್ರಗಳಿಗೆ ರೀಪೇರಿ ಎಂದು ಲಕ್ಷಾಂತರ ಹಣ ಖರ್ಚು ಹಾಕಲಾಗಿದೆ. ಪಟ್ಟಣದ ಹಸಿಕಸವನ್ನು ಎತ್ತುತ್ತಿಲ್ಲ ಎಲ್ಲೆಂದರಲ್ಲೇ ಬಿಡಲಾಗುತ್ತಿದೆ. ಕಳೆದ 6 ತಿಂಗಳಲ್ಲಿ ಕಸ ವಿಲೇವಾರಿಯಿಂದ ಎಷ್ಟು ಹಣ ಬಂದಿದೆ ಎಷ್ಟು ಖರ್ಚು ಮಾಡಿದ್ದಾರೆ ಮಾಹಿತಿ ಕೊಡಿ ಎಂದು ಆರೋಗ್ಯಾಧಿಕಾರಿಯ ವಿರುದ್ಧ ಹರಿಹಾಯ್ದರು.
ಸದಸ್ಯ ಮಂಜುನಾಥ್ ಮಾತನಾಡಿ, ಪಟ್ಟಣಕ್ಕೆ ಕುಡಿಯುವ ನೀರನ್ನು ಕೆಲ್ಲೋಡು ಬ್ಯಾರೇಜ್‌ನಿಂದ ತರಲಾಗುತ್ತಿದೆ. ಆದರೆ ಬ್ಯಾರೇಜ್‌ಗೆ ಕೆಲ್ಲೋಡು ಗ್ರಾಮದ ಕೊಳಚೆ ನೀರನ್ನು ಬಿಡಲಾಗುತ್ತಿದ್ದು ಪಟ್ಟಣದ ಜನ ಕೊಳಚೆ ಮಿಶ್ರಿತ ನೀರು ಕುಡಿಯುವಂತಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಮುಖ್ಯಾಧಿಕಾರಿಯನ್ನು ಒತ್ತಾಯಿಸಿದರು.ಸದಸ್ಯ ಶ್ರೀನಿವಾಸ್ ಮಾತನಾಡಿ, ನಾವೇ ಆಯ್ಕೆ ಮಾಡಿರುವ ಅಧ್ಯಕ್ಷರಿಗೆ ಅಧಿಕಾರ ನಡೆಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಕಾಣುತ್ತಿದೆ. ಯಾವುದಕ್ಕೂ ಅವರು ಪ್ರತಿಕ್ರಿಯಿಸುವುದಿಲ್ಲ. ಕಳೆದ ಸಭೆಯಿಂದಲೂ ಪಟ್ಟಣದ ಮುಖ್ಯ ರಸ್ತೆಯ ಪಾದಚಾರಿ ಮಾರ್ಗವನ್ನು ವರ್ತಕರು ಒತ್ತುವರಿ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಬಾಡಿಗೆಯನ್ನೂ ನೀಡಿದ್ದಾರೆ ಪಾದಚಾರಿ ಮಾರ್ಗವನ್ನು ತೆರವುಗೊಳಿಸುವಂತೆ ಹೇಳಿದರೂ ಯಾಕೇ ತೆರವುಗೊಳಿಸಿಲ್ಲ ಎಂದು ಮುಖ್ಯಾಧಿಕಾರಿಯನ್ನು ಪ್ರಶ್ನಿಸಿದರು.
ಸದಸ್ಯ ಶಂಕರಪ್ಪ ಮಾತನಾಡಿ, ಇ-ಸ್ವತ್ತು ನೀಡುವಲ್ಲಿ ಮುಖ್ಯಾಧಿಕಾರಿ ಕಾನೂನು ಉಲ್ಲಂಘನೆ ಮಾಡಿ ಬ್ರಷ್ಠಾಚಾರ ಮಾಡಿದ್ದಾರೆ ಎಂದು ಆರೋಪಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ತಿಮ್ಮರಾಜು ನೀನು ತಂದ ನಿವೇಶನಗಳಿಗೆ ಇ-ಸ್ವತ್ತು ಮಾಡಿಕೊಟ್ಟಾಗ ಕಾನೂನು ಉಲ್ಲಂಘನೆ ಆಗಿರಲಿಲ್ಲವಾ ಎಂದು ಪ್ರಶ್ನಿಸಿ, ಇತಿಮಿತಯಲ್ಲಿಯೇ ನಾನು ಕೆಲಸ ಮಾಡಿದ್ದೇನೆ ಎಲ್ಲವನ್ನು ಅಧ್ಯಕ್ಷರ ಗಮನಕ್ಕೆ ತಂದೇ ಕೆಲಸ ಮಾಡಿದ್ದೇನೆ ಸುಖಾ ಸುಮ್ಮನೆ ಆರೋಪ ಮಾಡಿಬೇಡಿ ಎಂದರು.
ಸಭೆಯಲ್ಲಿ ಉಪಾಧ್ಯಕ್ಷೆ ಗೀತಾ ಸೇರಿದಂತೆ ಸದಸ್ಯರು ಹಾಗೂ ಪುರಸಭೆ ಸಿಬ್ಬಂದಿ ಹಾಜರಿದ್ದರು.ಹೊಸದುರ್ಗ ಪಟ್ಟಣದಲ್ಲಿ ನಡೆಯುತ್ತಿರುವ ನಗರೋತ್ತಾನದ ಕೆಲಸಗಳ ಬಳಿ ಪುರಸಭೆಯ ಯಾವೋಬ್ಬ ಅಧಿಕಾರಿಗಳು ಭೇಟಿ ನೀಡುತ್ತಿಲ್ಲ. ಕೆಲಸಗಳ ಗುಣಮಟ್ಟ ಸರಿಯಿಲ್ಲ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಸದಸ್ಯರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕೆಲಸದ ಬಗ್ಗೆ ಸಲಹೆ ನೀಡಿದರೆ ಗುತ್ತಿಗೆದಾರರು ಸ್ಪಂದಿಸುವುದಿಲ್ಲ. ಅಧಿಕಾರಿಗಳು ಕೆಲಸದ ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟ ಕಾಯ್ದುಕೊಳ್ಳಬೇಕು.