ಸಾರಾಂಶ
ಪುರಸಭಾ ಸದಸ್ಯ ರವಿ ಕೊಲೆ ಪ್ರಕರಣದ ಆರೋಪಿಯಾಗಿದ್ದ ಕಾರ್ತಿಕ್ ಅಲಿಯಾಸ್ ಜಿಕೆ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಮೈಸೂರಮ್ಮನ ದೊಡ್ಡಿ ಬಳಿ ಸೆರೆ ಹಿಡಿದಿದ್ದಾರೆ.
ಕನ್ನಡಪ್ರಭ ವಾರ್ತೆ ಆನೇಕಲ್
ಪುರಸಭಾ ಸದಸ್ಯ ರವಿ ಕೊಲೆ ಪ್ರಕರಣದ ಆರೋಪಿಯಾಗಿದ್ದ ಕಾರ್ತಿಕ್ ಅಲಿಯಾಸ್ ಜಿಕೆ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಮೈಸೂರಮ್ಮನ ದೊಡ್ಡಿ ಬಳಿ ಸೆರೆ ಹಿಡಿದಿದ್ದಾರೆ.ಇದೇ ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳಾಗಿದ್ದ ಹರೀಶ್ ಮತ್ತು ವಿನಯ್ ಬೆಂಗಳೂರಿನ ನ್ಯಾಯಾಲಯಕ್ಕೆ ಶರಣಾಗಿದ್ದರು. ಇತ್ತೀಚೆಗೆ ಪುರಸಭಾ ಸದಸ್ಯ ರವಿ ಮೇಲೆ ಹಗೆ ಸಾಧಿಸುತ್ತಿದ್ದ ಕಾರ್ತಿಕ್, ಕೊಲೆ ಮಾಡುವುದಾಗಿ ಕೆಲವರ ಬಳಿ ಹೇಳಿಕೊಂಡಿದ್ದ ಎನ್ನಲಾಗಿದೆ. ರವಿ ರಾತ್ರಿ ಮನೆಗೆ ಮರಳುವಾಗ ರಸ್ತೆಯಲ್ಲಿ ಅಡ್ಡಹಾಕಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲ್ಲಲಾಗಿತ್ತು. ಬಳಿಕ ಆರೋಪಿ ಕಾರ್ತಿಕ್ ಆನೇಕಲ್ ಗಡಿ ಭಾಗದಲ್ಲಿ ತಲೆತಪ್ಪಿಸಿಕೊಂಡು ಓಡಾಡುತ್ತಿದ್ದ. ಆತನ ಬಂಧನಕ್ಕೆ ಎರಡು ಪೊಲೀಸ್ ತಂಡಗಳು ಬಲೆ ಬೀಸಿದ್ದವು.
ಮೈಸೂರಮ್ಮನ ದೊಡ್ಡಿಯಲ್ಲಿ ತಲೆಮರಿಸಿಕೊಂಡಿರುವ ಖಚಿತ ಮಾಹಿತಿ ಮೇರೆಗೆ ಆನೇಕಲ್ ಇನ್‌ಸ್ಪೆಕ್ಟರ್ ತಿಪ್ಪೇಸ್ವಾಮಿ ಮತ್ತು ತಂಡ ತೆರಳಿದಾಗ ಕಾರ್ತಿಕ್ ತನ್ನ ಬೈಕ್‌ನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ. ಹಿಡಿಯಲು ಮುಂದೆ ಬಂದ ಪೊಲೀಸ್ ಪೇದೆ ಸುರೇಶ್ ಮೇಲೆ ಹಲ್ಲೆ ನಡೆಸಿದ. ತಕ್ಷಣ ಇನ್‌ಸ್ಪೆಕ್ಟರ್ ಎಚ್ಚರಿಕೆ ನೀಡಿ ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದರು. ಆದರೂ ಕಾರ್ತಿಕ್ ಕಿವಿಗೊಡದೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದರು. ಬಳಿಕ ಆತನನ್ನು ಸಮೀಪದ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್‌ಪಿ ಕೆ.ಎನ್.ನಾಗರಾಜ್ ತಿಳಿಸಿದರು.ಕೊಲೆ ಆರೋಪಿ ಕಾರ್ತಿಕ್ ಮೇಲೆ ಕುಂಬಳಗೋಡು, ಬನ್ನೇರುಘಟ್ಟ, ಸೂರ್ಯನಗರ, ಆನೇಕಲ್ ಠಾಣೆಗಳಲ್ಲಿ ಹಲವು ಕೊಲೆ ಪ್ರಕರಣಗಳಿವೆ. ಈತನ ಹಿಂಬಾಲಕರು ಹಾಗೂ ರೌಡಿಶೀಟರ್‌ಗಳು ಯಾರೇ ಇದ್ದರೂ ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಹೆಡೆ ಮುರಿ ಕಟ್ಟಿ ತರಲಾಗುವುದು. ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ಯಾವುದೇ ಘಟನೆಯನ್ನು ಸಹಿಸಿಕೊಳ್ಳುವುದಿಲ್ಲ. ಅಧೀನ ಅಧಿಕಾರಿಗಳಿಗೂ ದಿಟ್ಟ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದರು.ಡಿವೈಎಸ್ಪಿ ಮೋಹನ್, ಇನ್‌ಸ್ಪೆಕ್ಟರ್‌ಗಳಾದ ಮಂಜುನಾಥ್, ನವೀನ್, ಎಸ್‌ಐಗಳಾದ ಪ್ರದೀಪ್, ಸಿದ್ದನಗೌಡ, ಮುರಳಿ ಇದ್ದರು.