ಸಾರಾಂಶ
ನಿರ್ವಹಣೆ ಕೊರತೆ ಉಕ್ಕಿ ಹರಿಯುತ್ತಿರುವ ಮ್ಯಾನ್ ಹೋಲ್‌ಗಳು: ದುರ್ನಾತಕ್ಕೆ ನಾಗರೀಕರ ಹಿಡಿ ಶಾಪಬೀರೂರು ಎನ್.ಗಿರೀಶ್
ಕನ್ನಡಪ್ರಭ ವಾರ್ತೆ, ಬೀರೂರುಪುರಸಭೆಯ ದಿವ್ಯ ನಿರ್ಲಕ್ಷದಿಂದ ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ನೆನೆಗುದಿಗೆ ಬಿದ್ದು ದುರ್ನಾತ ಬೀರಲಾರಂಭಿಸಿದೆ. ಒಳಚರಂಡಿ ವ್ಯವಸ್ಥೆ ಸಂಪೂರ್ಣ ಸುಧಾರಣೆಗಾಗಿ ಸರ್ಕಾರ 2014ರಲ್ಲಿ ಒಟ್ಟು23.54ಕೋಟಿ ರು. ಬಿಡುಗಡೆ ಮಾಡಿ ಪಟ್ಟಣದಾದ್ಯಂತ ಯುಜಿಡಿ ಕಾಮಗಾರಿ ನಡೆಸಲಾಯಿತು. ಅವೈಜ್ಞಾನಿಕ ಕಾಮಗಾರಿ ಹಿನ್ನೆಲೆಯಲ್ಲಿ ಮಲಿನ ನೀರುಪಟ್ಟಣದ ರಸ್ತೆಗಳಲ್ಲಿ ಹರಿದು ಬೀರುತ್ತಿರುವ ದುರ್ನಾತಕ್ಕೆ ನಾಗರಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
ಯುಜಿಡಿ ಕಾಮಗಾರಿಯಲ್ಲಿ ಗುರುತ್ವಾಕರ್ಷಣೆ ಮೂಲಕ ಒಳಚರಂಡಿ ನೀರು ಸಾಗುವ ಪರಿಣಾಮ ಪಟ್ಟಣ ವ್ಯಾಪ್ತಿಯಲ್ಲಿ ಮಾರ್ಗದ ಕ್ಯಾಂಪಿನಿಂದ ಶಿವಾಜಿ ನಗರದವರೆಗೂ 2165 ಆಳುಗುಂಡಿಗಳನ್ನು ನಿರ್ಮಿಸಿ 56461 ಮೀ. ಕೊಳವೆಗಳನ್ನು ಅಳವಡಿಸಲಾಗಿದೆ. ಪ್ರತಿಮನೆಯಿಂದ ತ್ಯಾಜ್ಯನೀರು ಮ್ಯಾನ್ ಹೋಲ್ ಗಳ ಮೂಲಕ ಯಗಟಿ ರಸ್ತೆಯ ಟ್ರೀಟ್ ಮೆಂಟ್ ಪ್ಲಾಟ್ ಗೆ ಹೋಗುವಂತೆ ಮಾಡಲಾಯಿತು.ಬೀರೂರು ಪಟ್ಟಣವನ್ನು 2 ಜೋನ್ ಗಳಾಗಿ ವಿಗಂಡಿಸಿ, ಜೋನ್ 1ರ ನೀರು ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಹಾಗೂ ಜೋನ್ 2ರಲ್ಲಿನ ನೀರು ಸೆಪ್ಟಿಕ್ ಟ್ಯಾಂಕ್ ಸೇರುವಂತೆ ನಕ್ಷೆ ತಯಾರಿಸಿತ್ತು. ಆದರೆ ಎಸ್.ಆರ್.ಲಕ್ಷ್ಮಯ್ಯ ಆಶ್ರಯ ಬಡಾವಣೆಗೆ ಹಕ್ಕುಪತ್ರ ಪಡೆದವರು ಕೋರ್ಟ ಮೆಟ್ಟಿಲೇರಿದ್ದರಿಂದ ಕಾಮಗಾರಿ ನಡೆಯಲಿಲ್ಲ. ರೈಲ್ವೆ ಇಲಾಖೆ ಅನುಮತಿ ನೀಡದ ಕಾರಣ ಭಗವತ್ ನಗರದಲ್ಲಿ ಸೆಪ್ಟಿಕ್ ಟ್ಯಾಂಕ್ ನಿರ್ಮಾಣವಾಗಿಲ್ಲ.
ಯುಜಿಡಿ ಕಾಮಗಾರಿ ಕೇಂದ್ರ ಸರ್ಕಾರದ ಯುಐಡಿಎಸ್ಎಂಟಿ ಅಡಿ ಅನುಷ್ಠಾನಗೊಂಡ ಹಿನ್ನಲೆಯಲ್ಲಿ ಒಳಚರಂಡಿ ಮಂಡಳಿ ಅಧಿಕಾರಿಗಳು ಇರುವ ಹಣದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ಪುರಸಭೆಗೆ 2018ರಲ್ಲಿ ಮುಂದಿನ ನಿರ್ವಹಣೆ ಗಾಗಿ ಹಸ್ತಾಂತರಿಸಿದರು.ಯುಜಿಡಿ ನಿರ್ವಹಣೆ ಕುರಿತು ಅಂದಿನ ಅಧ್ಯಕ್ಷ ಮತ್ತು ಸದಸ್ಯರು ಸಭೆಯಲ್ಲಿ ಚರ್ಚಿಸಿ ಪ್ರತಿ ಮನೆ ಯುಜಿಡಿ ಸಂಪರ್ಕ ನೀಡಲು ಪುರಸಭೆಗೆ ಒಂದು ಸಾವಿರ ನಿರ್ವಹಣೆ ವೆಚ್ಚ ಪಾವತಿಸಿಕೊಂಡು ಯುಜಿಡಿ ಸಂಪರ್ಕ ನೀಡಲಾಯಿತು. ಈ ಸಂದರ್ಭದಲ್ಲಿ ಖಾಸಗಿ ಗುತ್ತಿಗೆದಾರರು ಸಹ ಯುಜಿಡಿ ಸಂಪರ್ಕ ಮಾಡಿಕೊಟ್ಟರು. ಅನೇಕರು ಪ್ಲಂಬರ್ ಗಳ ಸಹಾಯದಿಂದ ಅವರವರೆ ತಮ್ಮ ಮನೆಗಳಿಗೆ ಸಂಪರ್ಕ ತೆಗೆದುಕೊಂಡರು.
ಎಡವಿದ ಪುರಸಭೆ: ಒಳಚರಂಡಿ ಮಂಡಳಿ ಇಂಜಿನಿಯರ್ ಗಳು ಒಂದು ಮ್ಯಾನ್ ಹೋಲ್ ಗೆ ಇಂತಿಷ್ಟು ಪ್ರಮಾಣದ ಗುಂಡಿಗಳು ಮತ್ತಿತರ ನಕ್ಷೆಗಳನ್ನು ನೀಡಿ ಇದೇ ರೀತಿ ಯುಜಿಡಿ ಸಂಪರ್ಕ ತೆಗೆದುಕೊಳ್ಳಬೇಕು ಎಂದು ಪುರಸಭೆಗೆ ತಿಳಿಸಿದ್ದರು. ಆದರೆ ಪುರಸಭೆ ಸಾರ್ವಜನಿಕರು ಯುಜಿಡಿ ಸಂಪರ್ಕ ಪಡೆಯುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸದ ಪರಿಣಾಮ ಕೊಳಚೆ ನೀರು ಸರಾಗವಾಗಿ ಹರಿಯುವಲ್ಲಿ ವಿಫಲವಾಗಿರುವುದು ಗಮನಕ್ಕೆ ಬರಲಿಲ್ಲ.ಟ್ರೀಟ್ ಮೆಂಟ್ ಪ್ಲಾಂಟ್ ಅವ್ಯವಸ್ಥೆ: ಯಗಟಿ ರಸ್ತೆಯಲ್ಲಿ ಯುಜಿಡಿ ಸಂಪೂರ್ಣ ಕೊಳಚೆ ನೀರು ಸೇರುವಂತೆ 3 ಟ್ರೀಟ್ ಮೆಂಟ್ ಪ್ಲಾಂಟ್ ಮಾಡಲಾಗಿದೆ. ಆದರೆ ಪುರಸಭೆಯವರು ಇಲ್ಲಿ ಯಾವುದೇ ಸುಧಾರಣೆ ಮಾಡದೆ ಸರಿಯಾಗಿ ಕೊಳಚೆ ನೀರು ಹರಿಯುತ್ತಿಲ್ಲ. ಮ್ಯಾನ್ ಹೋಲ್‌ಗಳು ಕಟ್ಟಿ ತ್ಯಾಜ್ಯ ನೀರು ಉಕ್ಕಿ ಹರಿಲಾರಂಬಿಸಿರುವುದು ಒಂದೆಡೆಯಾದರೆ 6 ಎಕರೆ ಜಾಗದ ಸುತ್ತಮುತ್ತ ಜಾಲಿಗಿಡಗಳು ಬೆಳೆದು ಟ್ರೀಟ್ ಮೆಂಟ್ ಪ್ಲಾಂಟ್ ನೆ ಮುಚ್ಚಿದ್ದು. ಇಲ್ಲೆ ಇರುವ ಪ್ಲಾಂಟ್ ನ ಲ್ಯಾಬ್ ಕೊಠಡಿ ನಿರ್ವಹಣೆ ಯಿಲ್ಲದೆ ಕುಡುಕರ ತಾಣವಾಗಿದೆ. ಪುರಸಭೆ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿರದೆ ಸಮಸ್ಯೆ ತಲೆ ದೋರಿದ್ದು ನಾಗರಿಕರು ಪುರಸಭೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.ಉಳಿದ ಕಾಮಗಾರಿಗೆ 2 ಕೋಟಿ :
ಪಟ್ಟಣದ ಭಾಗವತ್ ನಗರ, ಎಸ್.ಆರ್.ಲಕ್ಷ್ಮಯ್ಯ ಬಡಾವಣೆಗಳಲ್ಲಿ ಮತ್ತೆ ಯುಜಿಡಿ ಕಾಮಗಾರಿ ಮಾಡಬೇಕಾದರೆ ಭೂ ಸ್ವಾದೀನ ಮಾಡಿ, ಸೆಪ್ಟಿಕ್ ಟ್ಯಾಂಕ್ ನಿರ್ಮಿಸಲು ಅಂದಾಜು 2 ಕೋಟಿ ರು. ಬೇಕಾಗುತ್ತದೆ ಎನ್ನುವ ಮಾಹಿತಿ ಇದೆ. ಇಂತಹ ಯೋಜನೆಗಳನ್ನು ಸಮರ್ಪಕವಾಗಿ ನಡೆಸಲು ಪುರಸಭೆಗೆ ಇಚ್ಛಾಶಕ್ತಿ ಇರದೆ ಒಳಚರಂಡಿ ವ್ಯವಸ್ಥೆ ಅಧೋಗತಿ ತಲುಪಿದೆ. ಕಾಮಗಾರಿ ಮುಗಿದು 5 ವರ್ಷಗಳಾದರೂ ಸಮರ್ಪಕವಾಗದಿದ್ದರೆ ಹೇಗೆ? ಜನ ಹೊಸ ಯೋಜನೆಗಳ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟಿರುತ್ತಾರೆ. ಆದರೆ ಅವು ಹೀಗಾದರೆ ಏನಾಗುತ್ತದೆ ಎಂಬುದಕ್ಕೆ ನಿದರ್ಶನ ಎನ್ನುತ್ತಾರೆ ಮಲ್ಲಿಕಾರ್ಜುನ್.--ಬಾಕ್ಸ್--
ಸದ್ಯ ಯುಜಿಡಿ ಮಿಸ್ಸಿಂಗ್ ಲಿಂಕ್‌ಗಳ ನಿರ್ವಹಣೆಗೆ ಎಸ್ಎಫ್ ಸಿ ಯೋಜನೆಯಡಿ 5ಲಕ್ಷದ ಟೆಂಡರ್ ಕರೆಯಲಾಗಿದೆ. ಕೂಡಲೆ ಕಾಮಗಾರಿ ನಿರ್ವಹಿಸಿದರೆ ಮ್ಯಾನ್ ಹೋಲ್ ಗಳು ಸರಾಗವಾಗಿ ಹರಿಯುತ್ತವೆ. ಭಾಗವತ್ ನಗರ ಮತ್ತಿತರ ಕಡೆ ಸೆಪ್ಟಿಂಕ್ ಮಾಡಿಸಲು ಶಾಸಕರೊಂದಿಗೆ ಚರ್ಚಿಸಿ ಸರ್ಕಾರದಿಂದ ಅನುದಾನ ಕೋರಲಾಗುವುದು.ವಿ.ಡಿ.ಶಾಂತಲ
ಪುರಸಭೆ ಮುಖ್ಯಾಧಿಕಾರಿ.10 ಬೀರೂರು1
ಬೀರೂರು ಪಟ್ಟಣದ ಯಗಟಿ ರಸ್ತೆಯಲ್ಲಿರುವ ಯುಜಿಡಿ ಟ್ರೀಟ್ ಮೆಂಟ್ ಪ್ಲಾಂಟ್ ನಲ್ಲಿ ಜಾಲಿಗಿಡಗಳು ಬೆಳೆದಿರುವುದು.10ಬೀರೂರು2
ಮಾರ್ಗದ ಕ್ಯಾಂಪಿನಲ್ಲಿ ಮ್ಯಾನ್ ಹೋಲ್ ಹುಕ್ಕಿಹರಿಯುತ್ತಿರುವುದು.10 ಬೀರೂರು3
ಎಸ್.ಟಿ.ಪಿ ಟ್ರೀಟ್ ಮೆಂಟ್ ಪ್ಲಾಂಟ್ ನ ಲ್ಯಾಬ್ ಕೊಠಡಿ ಪಾಳು ಬಿದ್ದಿರುವುದು.