ಬಹುಕಾಲದ ಬೇಡಿಕೆ ಕೊನೆಗೂ ಇಂಡಿ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೆರಿದೆ. ಡಿ.23 ರಂದು ನಗರಸಭೆ ಹಾಗೂ ನಗರ ಯೋಜನಾ ಪ್ರಾಧಿಕಾರ ಕಚೇರಿಗಳ ಕಾರ್ಯಾರಾಂಭ ಕಾರ್ಯಕ್ರಮ ನಡೆಯಲಿದೆ.

ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

ಬಹುಕಾಲದ ಬೇಡಿಕೆ ಕೊನೆಗೂ ಇಂಡಿ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೆರಿದೆ. ಡಿ.23 ರಂದು ನಗರಸಭೆ ಹಾಗೂ ನಗರ ಯೋಜನಾ ಪ್ರಾಧಿಕಾರ ಕಚೇರಿಗಳ ಕಾರ್ಯಾರಾಂಭ ಕಾರ್ಯಕ್ರಮ ನಡೆಯಲಿದೆ.

55 ವರ್ಷಗಳ ನಂತರ ಇಂಡಿ ಪುರಸಭೆಯಿಂದ ನಗರಸಭೆಯಾಗಿದೆ. 1967ರಲ್ಲಿ ಟೌನ್ ಪಂಚಾಯತ್‌ಗೆ ಒಳಪಟ್ಟಿತ್ತು ಇಂಡಿ ಪಟ್ಟಣ , 19 ಸದಸ್ಯರನ್ನು ಒಳಗೊಂಡಿತ್ತು. ಹಲವು ತಾಂಡಾಗಳು ಹೊರತುಡಿಸಿ 12 ಸಾವಿರ ಜನಸಂಖ್ಯೆ ಹೊಂದಿತ್ತು, ಪಟ್ಟಣದ ಚಾವಡಿಯಲ್ಲಿ ಕಚೇರಿ ನಡೆಯುತ್ತಿತ್ತು . 1973-74 ರಲ್ಲಿ ಪುರಸಭೆಯಾಗಿ ಪರಿವರ್ತನೆ ಹೊಂದಿದಾಗ 15 ಸದಸ್ಯ ಬಲ ಹೊಂದಿ, ಸುಮಾರು 15 ಸಾವಿರ ಜನಸಂಖ್ಯೆ ಹೊಂದಿದ್ದರೆ, ನಂತರ 1996ರಲ್ಲಿ ಗ್ರೇಡ್ 1 ಪುರಸಭೆಯಾದಾಗ 25 ರಿಂದ 30 ಸಾವಿರ ಜನಸಂಖ್ಯೆ ಇಂಡಿ ಪಟ್ಟಣದಲ್ಲಿತ್ತು 23 ಸದಸ್ಯ ಬಲ ಪುರಸಭೆ ಹೊಂದಿತ್ತು. ಸದ್ಯ 2025ರಲ್ಲಿ ನಗರ ಸಭೆಯಾಗಿದ್ದರಿಂದ, 31 ಸದಸ್ಯ ಬಲದೊಂದಿಗೆ, 51 ಸಾವಿರ ಜನಸಂಖ್ಯೆ ಹೊಂದಿದೆ ಎಂದು ಹೇಳಲಾಗುತ್ತದೆ. ನಗರಸಭೆಯಾಗಲು ಬೇಕಾದ ಮೊದಲ ಅರ್ಹತೆಯಾದ ಜನಸಂಖ್ಯೆ 50 ಸಾವಿರವನ್ನು ಮೀರಿದೆ.

ಪುರಸಭೆ ಮುಖ್ಯಾಧಿಕಾರಿ ಹುದ್ದೆಯಿಂದ ಪೌರಾಯುಕ್ತ ಹುದ್ದೆಯಾಗಿ ಮಾರ್ಪಟ್ಟಿದೆ. ಈಗ ಇರುವ 23 ವಾರ್ಡ್‌ಗಳು ಜನಸಾಂದ್ರತೆಗೆ ಅನುಗುಣವಾಗಿ 31 ವಾರ್ಡ್‌ಗಳಾಗಲಿದ್ದು, ನಗರ ಸಭೆ ವ್ಯಾಪ್ತಿ -27.38 ಚದರ ಕಿ.ಮೀ ವ್ಯಾಪಿಸಿದೆ. ಇಂಡಿಗೆ ಪ್ರತ್ಯೇಕ ನಗರ ಯೋಜನಾ ಪ್ರಾಧಿಕಾರ

ಇಂಡಿಗೆ ಪ್ರತ್ಯೇಕ ನಗರ ಯೋಜನಾ ಪ್ರಾಧಿಕಾರ ಮಂಜೂರು ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಡಿ.23ರಂದು ಕಚೇರಿ ಉದ್ಘಾಟನೆ ನಡೆಯಲಿದೆ. ಹೀಗಾಗಿ ಅಭಿವೃದ್ಧಿಯ ಹೊಸದಿಕ್ಕಿನತ್ತ ಇಂಡಿ ಮುಖ ಮಾಡಿದೆ. ಈ ಮೊದಲು ಲೇಔಟ್ ನಕ್ಷೆ ಸೇರಿದಂತೆ ಜಮೀನು ಅಭಿವೃದ್ಧಿಗೆ ವಿಜಯಪುರದಲ್ಲಿರುವ ಯೋಜನಾ ಪ್ರಾಧಿಕಾರಕ್ಕೆ ಹೋಗಬೇಕಿತ್ತು. ಆದರೆ ಇಂದು ಸರ್ಕಾರ ಪ್ರತ್ಯೇಕ ಯೋಜನಾ ಪ್ರಾಧಿಕಾರ ಮಂಜೂರು ಮಾಡಿರುವುದರಿಂದ ಇಂಡಿ ಯೋಜನಾ ಪ್ರಾಧಿಕಾರ ಪ್ರತ್ಯೇಕ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದೆ.

ಇಂಡಿಗೆ ನಗರ ಯೋಜನಾ ಪ್ರಾಧಿಕಾರ ಮಂಜೂರು ಆಗಿರುವುದರಿಂದ, ವಿಜಯಪುರಕ್ಕೆ ಅಲೆದಾಡುವುದು ತಪ್ಪಿದಂತಾಗಿದೆ.

ಈ ಮೊದಲು ಕಟ್ಟಡ ಪರವಾನಗಿ, ವಿನ್ಯಾಸ ಅನುಮೋದನೆಗೆ ಪುರಸಭೆಯಲ್ಲಿ ಅರ್ಜಿ ಸಲ್ಲಿಸಿ, ಪ್ರಸ್ತಾವನೆ ತಯಾರಿಸಿ, ವಿಜಯಪುರದ ಟೌನ್‌ ಪ್ಲ್ಯಾನ್‌ ಕಚೇರಿಗೆ ಸಲ್ಲಿಸಬೇಕಾಗುತ್ತಿತ್ತು. ಆದರೆ ಸದ್ಯ ಹಾಗಲ್ಲ ಕಟ್ಟಡ ಪರವಾನಿಗೆ, ವಿನ್ಯಾಸ ಅನುಮೋದನೆ ಇಂಡಿಯ ಯೋಜನಾ ಪ್ರಾಧಿಕಾರದಲ್ಲಿಯೇ ದೊರೆಯಲಿದೆ.

ಒಂದು ನಿವೇಶನದಲ್ಲಿ ಭಾಗ ಮಾಡುವುದು, ಭಾಗವಾಗಿರುವ ನಿವೇಶನ ಒಂದುಗೂಡಿಸುವುದು,ಎನ್‌ಎ(ಬಿನ್‌ಶೆತ್ಕಿ) ಅಭಿಪ್ರಾಯವೂ ಇಲ್ಲಿಯೇ ದೊರೆಯಲಿದೆ. ಇದರಿಂದ ಸಾರ್ವಜನಿಕರು ವಿಜಯಪುರದ ಕಚೇರಿಗೆ ಅಲೆದಾಡುವುದು ತಪ್ಪಿದಂತಗಾಗಿದೆ.

ಈ ಪ್ರಾಧಿಕಾರಕ್ಕೆ ಒರ್ವ ಅಧ್ಯಕ್ಷ, ಸಹಾಯಕ ನಿರ್ದೇಶಕರು (ಸದಸ್ಯ ಕಾರ್ಯದರ್ಶಿ), ಪುರಸಭೆಯ ಓರ್ವ ಸದಸ್ಯ ನೇಮಕ, ಪುರಸಭೆ ಮುಖ್ಯಾಧಿಕಾರಿ ಸದಸ್ಯ ಕಾರ್ಯದರ್ಶಿ, ಇಬ್ಬರು ಸರ್ಕಾರದಿಂದ ನಾಮ ನಿರ್ದೇಶನಗೊಂಡ ಅಧಿಕಾರೇತರ ಸದಸ್ಯರು ನೇಮಕವಾಗುತ್ತಾರೆ. ಈ ಯೋಜನಾ ಪ್ರಾಧಿಕಾರದಿಂದ ವಿನ್ಯಾಸ ರಚನೆ, ಮಾಸ್ಟರ್‌ ಪ್ಲ್ಯಾನ್‌ ಇಂಪ್ಲಿಮೆಂಟ್‌, ರಿಂಗ್‌ ರಸ್ತೆ ಅಭಿವೃದ್ಧಿ, ನಾಗರಿಕ ಸೌಲಭ್ಯ ಒದಗಿಸುವ ಕಾರ್ಯ ಪ್ರಾಧಿಕಾರದಿಂದ ನಡೆಯಲಿದೆ. ಇಂಡಿ ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಇಂಡಿ, ಚಿಕ್ಕಬೇವನೂರ, ಮಾವಿನಹಳ್ಳಿ, ಇಂಗಳಗಿ, ರೂಗಿ ಕಂದಾಯ ಗ್ರಾಮಗಳನ್ನು ಸೇರ್ಪಡೆ ಮಾಡಲಾಗಿದೆ.

ಯೋಜನಾ ಪ್ರಾಧಿಕಾರದ ಅಧ್ಯಕ್ಷರು ಪ್ರಾಧಿಕಾರದ ಮುಖ್ಯಸ್ತರಾಗಿದ್ದು ಸರ್ಕಾರದಿಂದ ನೇಮಕಗೊಂಡಿರುತ್ತಾರೆ. ಸದಸ್ಯ ಕಾರ್ಯದರ್ಶಿರವರು ಕಚೇರಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದು ಕಚೇರಿಯ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸುತ್ತಾರೆ. ವ್ಯವಸಾಯ ಭೂಮಿಯನ್ನು ವ್ಯವಸಾಯೇತರ ಉದ್ದೇಶಗಳಿಗಾಗಿ ಭೂ ಪರಿವರ್ತಿಸುವ ಮೊದಲು ಕಂದಾಯ ಇಲಾಖೆಗೆ ತಾಂತ್ರಿಕ ಅಭಿಪ್ರಾಯ ನೀಡುವುದು ಯೋಜನಾ ಪ್ರಾಧಿಕಾರದ ಕಾರ್ಯವಾಗಿದೆ. ಅಭಿವೃದ್ಧಿಗೆ ಅನುಕೂಲ

ಈಗ ಇರುವ ಪುರಸಭೆ ಮುಖ್ಯಾಧಿಕಾರಿ ಹುದ್ದೆಯ ಹೆಸರು ಪೌರಾಯುಕ್ತ ಎಂದು ಬದಲಾಗುತ್ತದೆ. ಪುರಸಭೆಗೆ ಮೂವರು ಹೆಚ್ಚುವರಿ ಎಂಜಿನಿಯರ್‌ಗಳು ಬರಲಿದ್ದಾರೆ. ಒಬ್ಬ ಎಇಇ ಬರುತ್ತಾರೆ. ಹೀಗಾಗಿ ಹೆಚ್ಚಿನ ಅಧಿಕಾರಿಗಳು ಬರಲಿದ್ದಾರೆ. ಅಭಿವೃದ್ಧಿ ದೃಷ್ಟಿಯಿಂದ ಅನುಕೂಲಕರ.

ನಗರಸಭೆಯಾಗಿದ್ದರಿಂದ ನಗರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬರಲಿದೆ. ಇಂಡಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಿಎಂ, ಡಿಸಿಎಂ, ಸಚಿವರು ಸಾಕಷ್ಟು ಸಹಾಯ ಮಾಡಿದ್ದಾರೆ. ತಾಲೂಕಿನ ಜನತೆಯ ಪರವಾಗಿ ಅಭಿನಂದಿಸುತ್ತೇನೆ. ನಗರ ಯೋಜನಾ ಪ್ರಾಧಿಕಾರ ಕಚೇರಿಯೂ ಕಾರ್ಯಾರಂಭ ಮಾಡಲಿದೆ. ಇದರಿಂದ ಈ ಕಚೇರಿ ಕೆಲಸಗಳಿಗೆ ಸಾರ್ವಜನಿಕರು ವಿಜಯಪುರಕ್ಕೆ ಹೋಗುವುದು ತಪ್ಪಿದೆ. ರಾಜ್ಯದಲ್ಲಿ ನಮ್ಮದೇ ಸರ್ಕಾರ ಆಡಳಿತದಲ್ಲಿರುವುದರಿಂದ ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ. ಕೊಟ್ಟ ಮಾತಿನಂತೆ ನಾನು ನಡೆಯುತ್ತಿದ್ದೇನೆ. ಇಂಡಿಯನ್ನು ನಗರಸಭೆಯನ್ನಾಗಿ ಮಾಡಿದ್ದೇನೆ. ಜಿಲ್ಲೆಯಾಗುವ ಎಲ್ಲ ಅರ್ಹತೆ ಈಗ ಇಂಡಿಗೆ ಬಂದಿದೆ. ಮುಂದೆ ಜಿಲ್ಲಾ ವಿಂಗಡಣೆಯಾಗುವ ಸಂದರ್ಭ ಬಂದರೆ ಆ ಸರದಿಯಲ್ಲಿ ನಮ್ಮ ಇಂಡಿ ಪ್ರಥಮ ಸ್ಥಾನದಲ್ಲಿರುತ್ತದೆ.

- ಯಶವಂತರಾಯಗೌಡ ಪಾಟೀಲ, ಶಾಸಕರು ಇಂಡಿ.