ಸಾರಾಂಶ
ಮರಿಯಮ್ಮನಹಳ್ಳಿ: ಪೌರಕಾರ್ಮಿಕರು ಪ್ರತಿನಿತ್ಯ ಬಿಸಿಲು, ಮಳೆ, ಚಳಿಯನ್ನು ಲೆಕ್ಕಿಸದೇ ಪಟ್ಟಣದ ಸ್ವಚ್ಛತೆ ನಡೆಸುವ ಮೂಲಕ ಪಟ್ಟಣ ಪರಿಸರ ಸುಂದರವಾಗಿ ಕಾಣಲು ಕಾರಣೀಭೂತರಾಗಿದ್ದಾರೆ ಎಂದು ಪಪಂ ಅಧ್ಯಕ್ಷ ಆದಿಮನಿ ಹುಸೇನ್ ಬಾಷಾ ಹೇಳಿದರು.ಇಲ್ಲಿನ ಪಪಂ ಕಚೇರಿ ಆವರಣದಲ್ಲಿ ರಾಜ್ಯ ಪೌರ ನೌಕರರ ಸಂಘ, ಪಪಂ ಕಾರ್ಯಾಲಯದಿಂದ ಮಂಗಳವಾರ 14ನೇ ವರ್ಷದ ಪೌರ ಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೌರಕಾರ್ಮಿಕರು ಕೆಲಸ ನಿರ್ವಹಿಸುವಾಗ ಚರಂಡಿಯಲ್ಲಿ ಗಾಜು, ತುಕ್ಕು ಹಿಡಿದ ಸಿರಿಂಚ್‌ಗಳು ಇರುತ್ತವೆ. ಕೆಲವರು ಶೌಚಾಲಯದ ನೀರನ್ನು ಸಹ ಚರಂಡಿಗೆ ಬಿಟ್ಟಿರುತ್ತಾರೆ. ಅದೆನ್ನೆಲ್ಲ ಪೌರಕಾರ್ಮಿಕರು ಸ್ವಚ್ಛಗೊಳಿಸುತ್ತಾರೆ. ಪೌರಕಾರ್ಮಿಕರು ಯಾವಾಗಲೂ ಶ್ರಮಿಜೀವಿಗಳು ಅವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.ಊರು ಸುಂದರವಾಗಿ, ಚೆನ್ನಾಗಿ ಕಾಣಬೇಕು ಎಂದರೆ ಊರಲ್ಲಿ ಸ್ವಚ್ಛತೆ ಇರಬೇಕು ಎಂದರೆ ಪೌರಕಾರ್ಮಿಕರ ಸ್ವಚ್ಛತಾ ಕಾರ್ಯ ಮೆಚ್ಚುವಂತದ್ದು. ಪೌರ ಕಾರ್ಮಿಕರ ಬಗ್ಗೆ ಪಟ್ಟಣ ಪಂಚಾಯಿತಿ ಯಾವಾಗಲೂ ಕಾಳಜಿ ಹೊಂದಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವ ಪೌರಕಾರ್ಮಿಕರ ಕುಟುಂಬಗಳು ಚೆನ್ನಾಗಿರಬೇಕು. ಪ್ರತಿಯೊಬ್ಬರೂ ಆರೋಗ್ಯದಿಂದ ಕೂಡಿರಬೇಕು. ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ಉತ್ತಮ ಹುದ್ದೆಗಳಲ್ಲಿ ಸೇವೆ ಸಲ್ಲಿಸುವಂತಹ ಅವಕಾಶಗಳು ಸಿಗಲಿ ಎಂದು ಅವರು ಹಾರೈಸಿದರು.
ಪಪಂ ಮುಖ್ಯಾಧಿಕಾರಿ ಜಿ.ಕೆ. ಮಲ್ಲೇಶ್ ಮಾತನಾಡಿ, ಪಟ್ಟಣದ ಸ್ವಚ್ಛತೆ ಹಾಗೂ ಊರಿನ ಜನರ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರು ನಿರಂತರವಾಗಿ ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ. ಪೌರಕಾರ್ಮಿಕರನ್ನು ಗೌರವದಿಂದ ಕಾಣಬೇಕು ಎಂದು ಅವರು ಹೇಳಿದರು.ನಿವೃತ್ತ ಶಿಕ್ಷಕ ಡಿ.ಲಾಲ್ಯನಾಯ್ಕ ಮಾತನಾಡಿ, ಪೌರಕಾರ್ಮಿಕರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವರ ಸೇವೆಯನ್ನು ಸಾರ್ವಜನಿಕರಿಗೆ ತಿಳಿಸುವುದಕ್ಕಾಗಿ ಮುಂದಿನ ವರ್ಷ ಪೌರಕಾರ್ಮಿಕರ ದಿನಾಚರಣೆಯ ದಿನ ಎಲ್ಲಾ ಪೌರಕಾರ್ಮಿಕರನ್ನು ಬೆಳ್ಳಿರಥದಲ್ಲಿ ಅವರನ್ನು ಮೆರವಣೆಗೆ ಮಾಡಿ ಅವರನ್ನು ಸಾರ್ವಜನಿಕರ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಬೇಕು. ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕು. ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಅವರು ಹೇಳಿದರು.
ಪಪಂ ಉಪಾಧ್ಯಕ್ಷೆ ಲಕ್ಷ್ಮೀ ರೋಗಾಣಿ ಮಂಜುನಾಥ, ಪಪಂ ಸದಸ್ಯೆ ಪೂಜಾ ಅಶ್ವಿನಿ ನಾಗರಾಜ ಮುಖ್ಯಅತಿಥಿಗಳಾಗಿ ಸಭೆಯಲ್ಲಿ ಮಾತನಾಡಿದರು.ಪಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಎಲ್.ಹುಲಿಗಿಬಾಯಿ ರುದ್ರನಾಯ್ಕ, ಪಪಂ ಸದಸ್ಯರಾದ ಎಲ್.ವಂಸತ, ಕೆ. ಮಂಜುನಾಥ, ಪೌರ ನೌಕರರ ಸಂಘದ ಮರಿಯಮ್ಮನಹಳ್ಳಿ ಘಟಕದ ಅಧ್ಯಕ್ಷ ಹನುಮಂತ, ಸ್ಥಳೀಯ ಮುಖಂಡ ರುದ್ರೇಶ್ ನಾಯ್ಕ, ಧರ್ಮನಾಯ್ಕ ಭಾಗವಹಿಸಿದ್ದರು.
ಪಪಂ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಿದರು. ಕಲಾವಿದ ಹನುಮಯ್ಯ ಸ್ವಾಗತಿಸಿ, ನಿರೂಪಿಸಿದರು. ಕಲಾವಿದರಾದ ಮಹಾಂತೇಶ್ ನೆಲ್ಲುಕುದುರೆ, ಹನುಮಯ್ಯ, ಹೇಮಂತ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.ಮರಿಯಮ್ಮನಹಳ್ಳಿ ಪಪಂ ಕಚೇರಿ ಆವರಣದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಿದರು.