ಸಾರಾಂಶ
ನಿಷ್ಕ್ರಿಯವಾಗಿ ಪಾಳು ಬಿದ್ದಿದ್ದ ಶೌಚಾಲಯಗಳನ್ನು ಪುರಸಭೆ ವತಿಯಿಂದ ಪುನಶ್ಚೇತನಗೊಳಿಸಿ ಸಾರ್ವಜನಿಕರು ಉಪಯೋಗಿಸಲು ಯೋಗ್ಯವಾಗುವಂತೆ ಮಾಡಿದ್ದೇವೆ ಎಂದು ಪುರಸಭೆ ಅಧ್ಯಕ್ಷ ಎ.ಆರ್. ಅಶೋಕ್ ಹೇಳಿದರು. ಪಟ್ಟಣದ ಜನರಿಗೆ ಯಾವುದೇ ಸಮಸ್ಯೆ ಇದ್ದರೂ ನೇರವಾಗಿ ನಮ್ಮ ಬಳಿ ಅಥವಾ ಸದಸ್ಯರ ಬಳಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡರೆ ನಾವು ಅದಕ್ಕೆ ಸ್ಪಂದಿಸಿ ಕೆಲಸ ಮಾಡಿಕೊಡುತ್ತೇವೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣದಲ್ಲಿ ನಿಷ್ಕ್ರಿಯವಾಗಿ ಪಾಳು ಬಿದ್ದಿದ್ದ ಶೌಚಾಲಯಗಳನ್ನು ಪುರಸಭೆ ವತಿಯಿಂದ ಪುನಶ್ಚೇತನಗೊಳಿಸಿ ಸಾರ್ವಜನಿಕರು ಉಪಯೋಗಿಸಲು ಯೋಗ್ಯವಾಗುವಂತೆ ಮಾಡಿದ್ದೇವೆ ಎಂದು ಪುರಸಭೆ ಅಧ್ಯಕ್ಷ ಎ.ಆರ್. ಅಶೋಕ್ ಹೇಳಿದರು.ಪಟ್ಟಣದ ಎಸ್‌ಬಿಐ ಬ್ಯಾಂಕ್ ಎದುರು ಇರುವ ಸಾರ್ವಜನಿಕ ಶೌಚಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಈ ಶೌಚಾಲಯವನ್ನು ಕಟ್ಟಲಾಗಿತ್ತು. ಆದರೆ ಅದನ್ನು ನೋಡಿಕೊಳ್ಳಲು ಹಾಗೂ ಯಾವುದೇ ಮೂಲ ಸೌಕರ್ಯಗಳಿಲ್ಲದೆ ಸುಮ್ಮನೆ ಪಾಳು ಬಿದ್ದಿತ್ತು. ಆದರೆ ಮತ್ತೆ ಪುರಸಭೆ ವತಿಯಿಂದ ಈ ಶೌಚಾಲಯವನ್ನು ನವೀಕರಿಸಿ ಸಾರ್ವಜನಿಕರಿಗೆ ಉಪಯೋಗಕ್ಕೆ ಬಿಡಲಾಗಿದೆ ಎಂದು ತಿಳಿಸಿದರು.
ಪಟ್ಟಣದ ಜನರಿಗೆ ಯಾವುದೇ ಸಮಸ್ಯೆ ಇದ್ದರೂ ನೇರವಾಗಿ ನಮ್ಮ ಬಳಿ ಅಥವಾ ಸದಸ್ಯರ ಬಳಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡರೆ ನಾವು ಅದಕ್ಕೆ ಸ್ಪಂದಿಸಿ ಕೆಲಸ ಮಾಡಿಕೊಡುತ್ತೇವೆ. ಅದರಂತೆ ಮಾರ್ಕೆಟ್ ಹಾಗು ಇನ್ನಿತರ ಸಾರ್ವಜನಿಕರ ಸ್ಥಳಗಳಲ್ಲಿ ಉಪಯೋಗಿಸದೆ ಇರುವ ಶೌಚಾಲಯಗಳನ್ನು ದುರಸ್ತಿಗೊಳಿಸುವ ಕೆಲಸ ಮಾಡಿಸಿದ್ದು ಇದರಿಂದ ಸಾರ್ವಜನಿಕರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದರು.ನಂತರ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಸುಜಯ್ ಕುಮಾರ್, ಪುರಸಭೆ ವತಿಯಿಂದ ಈ ಹಿಂದೆ ಶೌಚಾಲಯ ಇದ್ದರೂ ಅದು ಉಪಯೋಗಕ್ಕೆ ಯೋಗ್ಯ ಇರಲಿಲ್ಲ. ಆದರೆ ಈಗ ಮತ್ತೆ ಹೈಟೆಕ್ ಮಾದರಿ ನವೀಕರಿಸಿ ಶುಚಿತ್ವ ಕಾಪಾಡುವುದರೊಂದಿಗೆ ಸಾರ್ವಜನಿಕರಿಗೆ ಉಪಯೋಗಿಸಬಹುದು. ಐದು ವರ್ಷಗಳ ಕಾಲ ಏಜೆನ್ಸಿಯವರ ಮೂಲಕ ನಿರ್ವಹಣೆ ಮಾಡಲು ಒಪ್ಪಂದ ಮಾಡಿಕೊಡಲಾಗಿದೆ. ಒಟ್ಟಾರೆಯಾಗಿ ಕಡಿಮೆ ದರವನ್ನು ನಿಗದಿಪಡಿಸಲಾಗಿದ್ದು ಸಾರ್ವಜನಿಕರ ಉಪಯೋಗಕ್ಕೆ ಅನುಕೂಲಕರವಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಉಷಾ ಸತೀಶ್, ಸದಸ್ಯರಾದ ಸೌಮ್ಯ ಸುಬ್ರಹ್ಮಣ್ಯ, ಅಕ್ರಮ್, ಜಗದೀಶ್, ಸತೀಶ್, ಗಿರೀಶ್ ಹಾಜರಿದ್ದರು.