ಸ್ವಚ್ಛತೆ ಮರೆತ ಪುರಸಭೆ, ರಸ್ತೆ ಪಕ್ಕದಲ್ಲಿಯೇ ಕಸ ವಿಲೇವಾರಿ

| Published : Mar 25 2024, 12:49 AM IST

ಸಾರಾಂಶ

ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ, ಒಣ ಕಸ, ಹಸಿ ಕಸದ ಕುರಿತು ತಿಳಿವಳಿಕೆ ನೀಡುವ ಪುರಸಭೆ ಕಸದ ವಾಹನಗಳು ನಿತ್ಯವೂ ಈ ಎಲ್ಲ ರಸ್ತೆಗಳಲ್ಲಿಯೇ ಓಡಾಡುತ್ತವೆ

ಶರಣು ಸೊಲಗಿ ಮುಂಡರಗಿ

ಪಟ್ಟಣದಲ್ಲಿ ಕೆಲವರು ರಸ್ತೆ ಪಕ್ಕದಲ್ಲಿಯೇ ಕಸ ವಿಲೇವಾರಿ ಮಾಡುತ್ತಿದ್ದು, ಪುರಸಭೆ ಕ್ರಮ ಕೈಗೊಳ್ಳದ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಹೆಸರೂರು ರಸ್ತೆ, ರಾಮೇನಹಳ್ಳಿ ರಸ್ತೆ, ಎಸ್.ಎಸ್. ಪಾಟೀಲ ನಗರ ರಸ್ತೆಗಳ ಪಕ್ಕದಲ್ಲಿ ಪಟ್ಟಣದ ಕೆಲವು ಸಣ್ಣಪುಟ್ಟ ವ್ಯಾಪಾರಿಗಳು ಕಸ ತಂದು ಬಿಸಾಕಿ ಹೋಗುತ್ತಾರೆ. ಹೆಸರೂರು ವೃತ್ತದಿಂದ ಸ್ವಲ್ಪವೇ ದೂರದಲ್ಲಿ (ನಾಟಕ ಥಿಯೇಟರ್ ಸಮೀಪ) ರಸ್ತೆ ಎಡಕ್ಕೆ ಮತ್ತು ಬಲಕ್ಕೆ ಎರಡೂ ಕಡೆಗಳಲ್ಲಿಯೂ ಕಬ್ಬಿನ ಸಿಪ್ಪೆ, ಕೊಳೆತ ಹಣ್ಣು, ತರಕಾರಿ, ಕೋಳಿ ಪುಚ್ಚ, ಪ್ಲಾಸ್ಟಿಕ್ ಬಿದ್ದಿರುವುದನ್ನು ಕಾಣಬಹುದು.

ಅಲ್ಲಿದೇ ಪಟ್ಟಣದಲ್ಲಿ ಸಾರ್ವಜನಿಕರು ತಮ್ಮ ಕಟ್ಟಡ ಕೆಡವಿದ ಮಣ್ಣು, ಸಿಮೆಂಟ್, ಇಟ್ಟಿಗೆ ಹಾಗೂ ಇತರ ಕಚ್ಚಾ ವಸ್ತುಗಳನ್ನು ತಂದು ಹೆಸರೂರು ರಸ್ತೆಯ ಪಕ್ಕದಲ್ಲಿಯೇ ಸುರಿಯುತ್ತಾರೆ. ರಾಮೇನಹಳ್ಳಿ ರಸ್ತೆಯೂ ಇದಕ್ಕೆ ಹೊರತಾಗಿಲ್ಲ. ಇಲ್ಲಿಯೂ ನಂಜನಗೂಡು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮೀಜಿ ಮಠದ ಅಕ್ಕಪಕ್ಕದಲ್ಲಿಯೇ ನಿತ್ಯ ತಂಪು ಪಾನೀಯ ಅಂಗಡಿಗಳಿಗೆ ಬಳಕೆ ಮಾಡುವ ಗ್ಲಾಸ್‌, ರಟ್ಟಿನ ಡಬ್ಬಾಗಳು ಹಾಗೂ ಅಂಗಡಿಗಳ ಕಸ ಮತ್ತು ಪ್ಲಾಸ್ಟಿಕ್ ಎಸೆದಿರುವುದು ಕಂಡು ಬರುತ್ತದೆ.

ಅದೇ ರೀತಿ ಶಿರಹಟ್ಟಿ ಮುಂಡರಗಿ ರಸ್ತೆಯಲ್ಲಿರುವ ಹಿರೇಹಳ್ಳಿದಲ್ಲಿ ನಿತ್ಯವೂ ಪಟ್ಟಣದ ಬಹುತೇಕ ಎಲ್ಲ ವ್ಯಾಪಾರದ ಕಸ ತಂದು ಎಸೆಯುತ್ತಾರೆ. ಹೀಗಾಗಿ ಅದು ಕೊಳೆದು ಗಬ್ಬು ನಾರುತ್ತಿರುತ್ತದೆ. ಸುತ್ತಮುತ್ತ ವಾಸಿಸುವ ಜನತೆಗೆ ಶಾಪವಾಗಿ ಪರಿಣಮಿಸಿದೆ. ಅವರೆಲ್ಲರೂ ಪುರಸಭೆಗೆ ಹಿಡಿಶಾಪ ಹಾಕುವಂತಾಗಿದೆ. ಎಸ್.ಎಸ್. ಪಾಟೀಲ್ ನಗರಕ್ಕೆ ತೆರಳುವಾಗ ಸ್ಮಶಾಸನದ ಎದುರಿನಲ್ಲಿ ಸಾಕಷ್ಟು ಕಸ ಬಿದ್ದಿರುವುದು ಕಂಡು ಬರುತ್ತದೆ. ಹೆಸರೂರು ರಸ್ತೆ ಆಶ್ರಯ ಕಾಲನಿಯ ಹತ್ತಿರವೂ ರಸ್ತೆಯ ಬಲಭಾಗದಲ್ಲಿ ಸಾಕಷ್ಟು ಗಲೀಜು ತುಂಬಿದ್ದು ಕಂಡು ಬರುತ್ತದೆ. ಇಷ್ಟೇ ಅಲ್ಲ ಪಟ್ಟಣದ ಅನೇಕ ಕಡೆಗಳಲ್ಲಿ ಈ ರೀತಿಯ ವಾತಾವರಣ ಕಂಡು ಬರುತ್ತಿದೆ. ಇದನ್ನು ಸ್ವಚ್ಛಗೊಳಿಸುವ ಹೊಣೆ ಯಾರದ್ದು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ, ಒಣ ಕಸ, ಹಸಿ ಕಸದ ಕುರಿತು ತಿಳಿವಳಿಕೆ ನೀಡುವ ಪುರಸಭೆ ಕಸದ ವಾಹನಗಳು ನಿತ್ಯವೂ ಈ ಎಲ್ಲ ರಸ್ತೆಗಳಲ್ಲಿಯೇ ಓಡಾಡುತ್ತವೆ. ಆದರೆ ಇಲ್ಲಿಯ ಕಸದ ಕುರಿತು ಗಮನ ಹರಿಸುವುದಿಲ್ಲ ಎಂದು ಸ್ಥಳೀಯರು ದೂರುತ್ತಾರೆ. ಪುರಸಭೆಯಲ್ಲಿ ಕಳೆದ 9-10 ತಿಂಗಳಿಂದ ಆಡಳಿತ ಮಂಡಳಿ ಇಲ್ಲ. ಆದರೆ ಮುಖ್ಯಾಧಿಕಾರಿ, ಸ್ವಚ್ಛತಾ ವಿಭಾಗದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಪಟ್ಟಣದ ಹೊರಗಡೆಗೆ ಕಸ ವಿಲೇವಾರಿಗೆಂದೇ ಪ್ರತ್ಯೇಕ ಜಾಗ ಇದ್ದು, ಅದಕ್ಕಾಗಿ ಸರ್ಕಾರ ಕೋಟ್ಯಂತರ ಖರ್ಚು ಮಾಡುತ್ತಿದೆ. ಪಟ್ಟಣದಲ್ಲಿರುವ ಎಲ್ಲ ಕಸ ಅಲ್ಲಿ ಹಾಕಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಎಲ್ಲೆಂದರಲ್ಲಿ ಕಸ ಹಾಕುವವರಿಗೆ ತಿಳಿವಳಿಕೆ ನೀಡಿ ಪುರಸಭೆ ಕಸದ ವಾಹನದಲ್ಲಿಯೇ ಹಾಕುವಂತೆ ತಾಕೀತು ಮಾಡಬೇಕು. ಇದೀಗ ಬೇಸಿಗೆಯಾಗಿರುವುದರಿಂದ ಎಲ್ಲೆಂದರಲ್ಲಿ ಕಸ ಹಾಕುವುದರಿಂದ ಕೊಳೆತು ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಗಳು ಇರುವುದರಿಂದ ಪುರಸಭೆ ಅಧಿಕಾರಿಗಳು ಪಟ್ಟಣದ ವಿವಿಧೆಡೆ ತೆರಳಿ ಪರಿಶೀಲನೆ ನಡೆಸಿ ಸ್ವಚ್ಛತೆಗಾಗಿ ಕ್ರಮ ಜರುಗಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮುಂಡರಗಿ ಮಂಜುನಾಥ ಮುಧೋಳ ಹೇಳಿದರು.