ಸ್ವಚ್ಛತೆ ಜತೆ ಜನಜಾಗೃತಿಗೆ ನಗರಸಭೆ ಆಡಳಿತಾಧಿಕಾರಿ ಯತೀಶ್‌ ಕರೆ

| Published : Jun 23 2024, 02:02 AM IST

ಸ್ವಚ್ಛತೆ ಜತೆ ಜನಜಾಗೃತಿಗೆ ನಗರಸಭೆ ಆಡಳಿತಾಧಿಕಾರಿ ಯತೀಶ್‌ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಸಾಗರ ನಗರಸಭೆ ಅಧಿಕಾರಿ, ನೌಕರರ ಸಭೆಯು ಆಡಳಿತಾಧಿಕಾರಿ ಯತೀಶ್ ಆರ್.ನೇತೃತ್ವದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಸಾಗರ

ಸ್ವಚ್ಛತೆ ಬಗ್ಗೆ ನಿರಾಸಕ್ತಿ ಬೇಡ. ಸ್ವಚ್ಛತೆ ಮೂಲಕ ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟಲು ಪ್ರಯತ್ನ ನಡೆಸಬೇಕಾಗಿದೆ ಎಂದು ಉಪವಿಭಾಗಾಧಿಕಾರಿಯೂ ಆದ ನಗರಸಭೆ ಆಡಳಿತಾಧಿಕಾರಿ ಯತೀಶ್ ಆರ್. ಹೇಳಿದರು.

ಇಲ್ಲಿನ ನಗರಸಭೆಯಲ್ಲಿ ನಡೆದ ನಗರಸಭೆ ಅಧಿಕಾರಿ, ನೌಕರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಿಸಿಲು ಮಳೆ ಇರುವುದರಿಂದ ಡೆಂಘೀ ಸೇರಿದಂತೆ ಬೇರೆ ಬೇರೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇರುವುದರಿಂದ ಸ್ವಚ್ಛತೆ ಜೊತೆಗೆ ಜನಜಾಗೃತಿ ಮೂಡಿಸಲು ಸೂಚನೆ ನೀಡಿದರು.

ಸಾರ್ವಜನಿಕರು ನಗರಸಭೆಗೆ ಒಂದೇ ಕೆಲಸಕ್ಕೆ ಹತ್ತಾರು ಬಾರಿ ಅಲೆಯುವಂತೆ ಮಾಡಬೇಡಿ. ವಿಳಂಬವಿಲ್ಲದೆ ನಾಗರಿಕರ ಕೆಲಸ ಮಾಡಿಕೊಡಿ. ಅನಗತ್ಯ ವಿಳಂಬ ಮಾಡಿದ್ದು ನನ್ನ ಗಮನಕ್ಕೆ ಬಂದರೆ ಸಂಬಂಧಪಟ್ಟವರ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಪೌರ ಕಾರ್ಮಿಕರ ಕೊರತೆ ಹಿನ್ನೆಲೆಯಲ್ಲಿ ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳುವಂತೆ ಇಲ್ಲ. ಖಾಯಂ ನೌಕರರ ನೇಮಕಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.

ಲೋಕಸಭೆ, ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ನಗರೋತ್ಥಾನ ಸೇರಿದಂತೆ ಬೇರೆಬೇರೆ ಕಾಮಗಾರಿಗಳು ವಿಳಂಬವಾಗಿದೆ. ಈಗ ಎಲ್ಲ ಕಾಮಗಾರಿಗಳು ಪುನರಾರಂಭಗೊಂಡಿದ್ದು, ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಲು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು.

ಪೌರಾಯುಕ್ತ ಎಚ್.ಕೆ.ನಾಗಪ್ಪ ಮಾತನಾಡಿ, ನಗರಸಭೆಯಲ್ಲಿ ಒಟ್ಟು ೧೨೦ ಪೌರ ಕಾರ್ಮಿಕರ ಹುದ್ದೆ ಇದೆ. ಆದರೆ ೪೭ ಪೌರ ಕಾರ್ಮಿಕರ ಹುದ್ದೆ ಖಾಲಿ ಇದ್ದು, ಸ್ವಚ್ಛತೆಗೆ ಸ್ವಲ್ಪ ಸಮಸ್ಯೆಯಾಗಿದೆ. ಹೆಚ್ಚುವರಿಯಾಗಿ ಅಕ್ಕಪಕ್ಕದ ತಾಲ್ಲೂಕಿನಿಂದ ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗಿದೆ. ಶಾಸಕರ ಆದೇಶದ ಮೇರೆಗೆ ಆನವಟ್ಟಿಯಿಂದ ೧೫ ಪೌರ ಕಾರ್ಮಿಕರು, ಸೊರಬದಿಂದ ೧೨ ಪೌರ ಕಾರ್ಮಿಕರು ನಗರದ ವಿವಿಧ ವಾರ್ಡ್‌ಗಳ ಸ್ವಚ್ಛತೆ ಮಾಡುತ್ತಿದ್ದಾರೆ. ಮುಂದಿನ ಒಂದು ವಾರದಲ್ಲಿ ಇಡೀ ಪಟ್ಟಣವನ್ನು ಪೂರ್ಣ ಸ್ವಚ್ಛಗೊಳಿಸಲಾಗುತ್ತದೆ ಎಂದು ಹೇಳಿದರು.

ಪರಿಸರ ವಿಭಾಗದ ಮದನ್, ಆರೋಗ್ಯ ವಿಭಾಗದ ಶೈಲೇಶ್, ವಿಠ್ಠಲ್ ಹೆಗಡೆ, ರಾಜೇಶ್, ಸಂತೋಷ್ ಕುಮಾರ್, ರಾಮಚಂದ್ರ ಸಾಗರ್ ಇನ್ನಿತರರು ಹಾಜರಿದ್ದರು.