ಕನ್ನಡಪ್ರಭ ವಾರ್ತೆ ಅಥಣಿ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿಯೂ ಪ್ಲಾಸ್ಟಿಕ್ ಬಳಕೆ ಎಗ್ಗಿಲ್ಲದೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಪಟ್ಟಣದ ಪುರಸಭೆ ಆಡಳಿತ ಮತ್ತು ಪಟ್ಟಣ ಪಂಚಾಯತಿ ಹಾಗೂ ಗ್ರಾಮ ಪಂಚಾಯತಿಗಳ ಆಡಳಿತ ವಿಫಲವಾಗಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಅಣ್ಣಾಸಾಬ ತೆಲಸಂಗ
ಕನ್ನಡಪ್ರಭ ವಾರ್ತೆ ಅಥಣಿಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿಯೂ ಪ್ಲಾಸ್ಟಿಕ್ ಬಳಕೆ ಎಗ್ಗಿಲ್ಲದೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಪಟ್ಟಣದ ಪುರಸಭೆ ಆಡಳಿತ ಮತ್ತು ಪಟ್ಟಣ ಪಂಚಾಯತಿ ಹಾಗೂ ಗ್ರಾಮ ಪಂಚಾಯತಿಗಳ ಆಡಳಿತ ವಿಫಲವಾಗಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ರಸ್ತೆ ಬದಿಗೆ, ಚರಂಡಿಗಳಲ್ಲಿ, ಖಾಲಿ ನಿವೇಶನಗಳಲ್ಲಿ, ನಾಗರಿಕ ಸೌಲಭ್ಯ ಸ್ಥಳಗಳಲ್ಲಿ ಕಸ ಕಡ್ಡಿಯೊಂದಿಗೆ ವಿಪರೀತ ಪ್ಲಾಸ್ಟಿಕ್ ಎಸೆಯಲಾಗುತ್ತಿದೆ. ಪುರಸಭೆಯ ಪೌರಕಾರ್ಮಿಕರು ಪ್ರತಿನಿತ್ಯ ವಾಹನಗಳನ್ನು ತೆಗೆದುಕೊಂಡು ಮನೆ ಮನೆಗೆ ಬಂದರೂ ಮನೆ ಬಳಕೆಯ ಕಸವನ್ನು ಮಾತ್ರ ಹಾಕುತ್ತಾರೆ. ಅನೇಕ ವ್ಯಾಪಾರಸ್ಥರು, ಮಧ್ಯ ಮಾರಾಟಗಾರರು, ಚಿಕನ್ ಸೆಂಟರ್ ನಡೆಸುವ ವ್ಯಾಪಾರಸ್ಥರು ತಡ ರಾತ್ರಿಯ ನಂತರ ತಮ್ಮ ಅಂಗಡಿಯ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ಅನ್ನು ರಸ್ತೆ ಬದಿಗೆ ಹಾಕಿ ಹೋಗುತ್ತಿದ್ದಾರೆ. ಇದನ್ನು ಕಂಡು ಕಾಣದಂತೆ ಪೌರಕಾರ್ಮಿಕರು ಮತ್ತು ಅಧಿಕಾರಿಗಳು ಮೌನ ವಹಿಸಿರುವುದು ಹಲವು ಸಂದೇಹಗಳಿಗೆ ಎಡೆಮಾಡಿದೆ. ಈ ಅಧಿಕಾರಿಗಳಿಗೆ ವ್ಯಾಪಾರಸ್ಥರಿಂದ ಮಾಮೂಲಿ ಬರುತ್ತಿದೆಯೋ? ಅಥವಾ ಯಾವುದೋ ರಾಜಕೀಯ ಒತ್ತಡಕ್ಕೆ ಮಣಿದು ಮೌನ ವಹಿಸುತ್ತಿದ್ದಾರೋ? ಎಂಬ ಸಂದೇಹ ಜನರನ್ನು ಕಾಡುತ್ತಿದೆ.ನಿಷೇಧಿತ ಪ್ಲಾಸ್ಟಿಕ್ ಅಥಣಿ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿನಿತ್ಯ ಬಳಕೆ ಮಾಡಲಾಗುತ್ತಿದೆ. ಇದು ಪರಿಸರದ ಮೇಲೆ ಮತ್ತು ಸಾರ್ವಜನಿಕರ ಮತ್ತು ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕಡಿಮೆ ಹಣ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅಧಿಕಾರಿಗಳ ಜಾಣ ಮೌನ!:ಪಟ್ಟಣದಲ್ಲಿ ನಿಷೇಧಿತ ಪ್ಲಾಸ್ಟಿಕ್ ಯಾರು ಮಾರಾಟ ಮಾಡುತ್ತಾರೆ? ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಹಳ್ಳಿ ಹಳ್ಳಿಗಳಲ್ಲಿ ಮಾರಾಟ ಮಾಡುವ ವಿತರಕರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇರುತ್ತದೆ. ಈ ಪ್ಲಾಸ್ಟಿಕ್ ಯಾವ ರಾಜ್ಯದಲ್ಲಿ ಉತ್ಪಾದನೆಯಾಗುತ್ತದೆ. ಅದು ನಮ್ಮ ರಾಜ್ಯಕ್ಕೆ ಹೇಗೆ ಪೂರೈಕೆಯಾಗುತ್ತದೆ ಎಂಬುವುದು ಅಧಿಕಾರಿಗಳಿಗೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರಿಗೂ ತಿಳಿದಿರುವ ವಿಚಾರವಾಗಿದೆ. ಆದರೆ, ಕುರುಡು ಕಾಂಚಾಣದ ಮಹಿಮೆಯಿಂದ ಎಲ್ಲರೂ ನೆಪ ಮಾತ್ರಕ್ಕೆ ನೋಟಿಸ್‌ಗಳನ್ನು ಜಾರಿ ಮಾಡಿ ಸ್ಥಳೀಯ ಸಂಸ್ಥೆಗೆ ಅದನ್ನು ನಿರ್ಬಂಧಿಸುವ ಜವಾಬ್ದಾರಿ ವಹಿಸುತ್ತಾರೆ. ಆದರೆ, ಕ್ರಿಮಿನಲ್ ಪ್ರಕರಣ ದಾಖಲಿಸಿ ಕಟ್ಟುನಿಟ್ಟಿನ ಕ್ರಮ ಅನುಸರಿಸಿದರೇ ಪ್ಲಾಸ್ಟಿಕ್ ಉತ್ಪಾದನೆ ಮತ್ತು ಬಳಕೆಯನ್ನು ತಡೆಗಟ್ಟಬಹುದು. ಆದರೆ, ಅಧಿಕಾರಿಗಳಿಂದ ಇಂತಹ ಪ್ರಯತ್ನ ನಡೆಯುತ್ತಿಲ್ಲ ಎಂದು ಪರಿಸರ ಪ್ರೇಮಿ ಪ್ರಶಾಂತ ತೋಡಕರ ಆರೋಪಿಸಿದ್ದಾರೆ.
ಪ್ಲಾಸ್ಟಿಕ್ ಬಳಕೆ ಹಾಗೂ ತ್ಯಾಜ್ಯದಿಂದ ಅತ್ಯಂತ ಗಂಭೀರ ಆರೋಗ್ಯ ಸಮಸ್ಯೆಗಳಾಗುತ್ತಿವೆ. ಚರಂಡಿಗಳಲ್ಲಿ ಮತ್ತು ಖಾಲಿ ನಿವೇಶಗಳಲ್ಲಿ ಹಾಕುವ ಕಸ ಮತ್ತು ಪ್ಲಾಸ್ಟಿಕ್, ಕೋಳಿ ಪುಚ್ಚದಿಂದ ಗಬ್ಬು ವಾಸನೆ ಮತ್ತು ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಸೊಳ್ಳೆಗಳ ಕಾಟ ಅಧಿಕವಾಗುತ್ತಿರುವುದರಿಂದ ಜನರಿಗೆ ಮಲೇರಿಯಾ, ಡೆಂಘೀ ಜ್ವರದಂತಹ ಕಾಯಿಲೆಗಳು ಜನರನ್ನ ಬಾಧಿಸುತ್ತಿವೆ. ಇದೆಲ್ಲದ್ದಕ್ಕೂ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೇ ಜವಾಬ್ದಾರರಾಗುತ್ತಾರೆ. ಸಾರ್ವಜನಿಕರಲ್ಲಿ ಜನಜಾಗೃತಿಯನ್ನು ಪರಿಣಾಮಕಾರಿಯಾಗಿ ಮೂಡಿಸಬೇಕು. ಕಾಟಾಚಾರದ ದಾಳಿ ಮತ್ತು ದಂಡ ವಸೂಲಿ ಮಾಡಿದರೇ ಸಾಲದು, ಜನರಿಗೆ ಅರಿವು ಮೂಡಿಸುವುದರ ಜೊತೆಗೆ ಈ ಸಮಸ್ಯೆಗೆ ಕಡಿವಾಣ ಹಾಕುವಲ್ಲಿ ನಿರ್ಲಕ್ಷ ತೋರುವ ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳು ಮತ್ತು ಸರ್ಕಾರ ಶಿಸ್ತುಕ್ರಮ ಜರುಗಿಸಬೇಕು ಎಂದು ರಾಷ್ಟ್ರೀಯ ಮಾನವ ಹಕ್ಕು ಮತ್ತು ಆಯೋಗ ಸಮಿತಿಯ ಜಿಲ್ಲಾ ಅಧ್ಯಕ್ಷ ದಾವಲ್ ಮಕಾಂದರ ಒತ್ತಾಯಿಸಿದ್ದಾರೆ.--------------ಕೋಟ್...
ಪ್ಲಾಸ್ಟಿಕ್ ನಿರ್ಮೂಲನೆಗಾಗಿ ಹಲವು ಜಾಗೃತಿ ಅಭಿಯಾನಗಳನ್ನು ಕೈಗೊಳ್ಳಲಾಗುತ್ತಿದೆ. ಮಾರಾಟದ ಮೇಲೂ ನಿರ್ಬಂಧ ಹೇರಲಾಗಿದೆ. ದಾಳಿ ನಡೆಸಿ ಪ್ಲಾಸ್ಟಿಕ್ ಜಪ್ತಿ ಮಾಡಿ, ದಂಡ ವಸೂಲಿ ಮಾಡಿದ್ದೇವೆ. ಹೊರ ರಾಜ್ಯಗಳಿಂದ ಬರುವ ಪ್ಲಾಸ್ಟಿಕ್ ಮೇಲೆ ನಿರ್ಬಂಧ ಹೇರುವ ಅಧಿಕಾರ ನಮಗಿಲ್ಲ. ನಿಷೇಧಿತ ಪ್ಲಾಸ್ಟಿಕ್ ನಿರ್ಮೂಲನೆಯಲ್ಲಿ ಜನರ ಸಹಕಾರ ತುಂಬಾ ಮುಖ್ಯ. ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಟ್ಟೆ ಚೀಲ, ಕಾಗದದ ಚೀಲ, ಅಡಿಕೆ ಹಾಳೆ, ತಟ್ಟೆ ಲೋಟ ಮೊದಲಾದವನ್ನು ಬಳಸಲು ಆದ್ಯತೆ ನೀಡಬೇಕು. ಮೊದಲು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳನ್ನು ಕಡ್ಡಾಯವಾಗಿ ನಿಷೇಧಿಸಿ ಪರ್ಯಾಯವಾಗಿ ಬಟ್ಟೆ ಚೀಲಗಳನ್ನು ಬಳಕೆ ಮಾಡುವ ಮೂಲಕ ಸಹಕರಿಸಬೇಕು.- ಅಶೋಕ ಗುಡಿಮನಿ, ಪುರಸಭೆ ಮುಖ್ಯಾಧಿಕಾರಿ, ಅಥಣಿ.
ಆಹಾರ ಉತ್ಪನ್ನಗಳನ್ನು ಪ್ಯಾಕೇಜಿಂಗ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ. ಹೋಟೆಲ್‌ಗಳಲ್ಲಿ ಕೂಡ ಪ್ಲಾಸ್ಟಿಕ್ ಪೊಟ್ಟಣಗಳಲ್ಲೇ ಆಹಾರ ಕೊಡುತ್ತಿದ್ದಾರೆ. ಚಹಾ ಅಂಗಡಿಗಳಲ್ಲಿಯೂ ಪ್ಲಾಸ್ಟಿಕ್ ಬಳಸಲಾಗುತ್ತಿದೆ. ಸರ್ಕಾರಿ ಮತ್ತು ಖಾಸಗಿ ಅನೇಕ ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿ, ಗ್ಲಾಸ್, ಪ್ಲಾಸ್ಟಿಕ್ ಕವರ್, ಬಳಸದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ನಿಷೇಧಿತ ಪ್ಲಾಸ್ಟಿಕ್ ಉತ್ಪಾದನೆ ಮತ್ತು ಅತಿಯಾದ ಬಳಕೆಯನ್ನು ತಡೆಯಲು ಜನರಲ್ಲಿ ಜಾಗೃತಿ ಮತ್ತು ಕಟ್ಟುನಿಟ್ಟಿನ ಕ್ರಮ ಅಗತ್ಯ.-ಪ್ರಶಾಂತ್ ತೊಡ್ಕರ, ಸಾಮಾಜಿಕ ಹೋರಾಟಗಾರ, ಅಥಣಿ.