ಮುನಿರತ್ನ ಶಾಸಕ ಸ್ಥಾನ ರದ್ದಾಗಬೇಕು: ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಎನ್.ನರಸಿಂಹಯ್ಯ

| Published : Sep 18 2024, 01:46 AM IST

ಮುನಿರತ್ನ ಶಾಸಕ ಸ್ಥಾನ ರದ್ದಾಗಬೇಕು: ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಎನ್.ನರಸಿಂಹಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರ ಶಾಸಕ ಸ್ಥಾನವನ್ನು ಕೂಡಲೇ ರದ್ದುಪಡಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಪರಿಶಿಷ್ಟ ಜಾತಿ ವಿಭಾಗ ಅಧ್ಯಕ್ಷ ಎನ್.ನರಸಿಂಹಯ್ಯ ಒತ್ತಾಯಿಸಿದರು. ರಾಮನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ । ಕ್ರಮಕ್ಕೆ ಸ್ಪೀಕರ್‌, ಗೌರ್ನರ್‌ಗೆ ಆಗ್ರಹ

ಕನ್ನಡಪ್ರಭ ವಾರ್ತೆ ರಾಮನಗರ

ದಲಿತ ಗುತ್ತಿಗೆದಾರನಿಗೆ ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿ ಬಂಧನಕ್ಕೊಳಗಾಗಿರುವ ಬೆಂಗಳೂರಿನ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರ ಶಾಸಕ ಸ್ಥಾನವನ್ನು ಕೂಡಲೇ ರದ್ದುಪಡಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಪರಿಶಿಷ್ಟ ಜಾತಿ ವಿಭಾಗ ಅಧ್ಯಕ್ಷ ಎನ್.ನರಸಿಂಹಯ್ಯ ಒತ್ತಾಯಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂವಿಧಾನದ ಆಶಯ ಹಾಗೂ ಈ ನೆಲದ ಕಾನೂನಿಗೆ ಅನುಗುಣವಾಗಿ ನಡೆದುಕೊಳ್ಳುತ್ತೇನೆ ಎಂದು ಪ್ರಮಾಣವಚನ ಸ್ವೀಕರಿಸಿರುವ ಮುನಿರತ್ನ, ಅದಕ್ಕೆ ವ್ಯತಿರಿಕವಾಗಿ ನಡೆದುಕೊಂಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕವಾಗಿರುವ ಇಂತಹ ಜನಪ್ರತಿನಿಧಿ ವಿಧಾನಸೌಧದಲ್ಲಿ ಇರಲು ಯೋಗ್ಯತೆ ಇಲ್ಲ ಎಂದು ಟೀಕಿಸಿದರು.

ಜಾತಿ ನಿಂದಕ ಶಾಸಕನ ಉಚ್ಛಾಟಿಸಲಿ:

ಬಿಜೆಪಿಯ ನಿಜವಾಗಿಯೂ ಶಿಸ್ತಿನ ಪಕ್ಷವಾಗಿದ್ದರೆ, ದಲಿತ–ಒಕ್ಕಲಿಗ ಸಮುದಾಯದ ಬಗ್ಗೆ ಹಾಗೂ ಮಹಿಳೆಯರ ಕುರಿತು ಗೌರವವಿದ್ದರೆ ಕೂಡಲೇ ಮುನಿರತ್ನ ಅವರನ್ನು ಇಷ್ಟೊತ್ತಿಗಾಗಲೇ ಪಕ್ಷದಿಂದ ಉಚ್ಛಾಟನೆ ಮಾಡಬೇಕಿತ್ತು. ಕೇವಲ ನೋಟಿಸ್ ನೀಡಿ ಸುಮ್ಮನಾಗಿರುವುದು ಆ ಪಕ್ಷದ ಸೋಗಲಾಡಿತನಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಮುನಿರತ್ನ ಪರ ವಕಾಲತ್ತು ಮಾಡುತ್ತಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ ಸೇರಿದಂತೆ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು. ಜಾತಿ ನಿಂದಕ ಮುನಿರತ್ನ ಅವರ ಶಾಸಕ ಸ್ಥಾನ ರದ್ದುಪಡಿಸುವ ನಿಟ್ಟಿನಲ್ಲಿ ಸ್ಪೀಕರ್ ಮತ್ತು ರಾಜ್ಯಪಾಲರು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸಂವಿಧಾನ ಮತ್ತು ಕಾನೂನಿಗೆ ಗೌರವ ನೀಡಬೇಕಾದ ಶಾಸಕ ಸಂವಿಧಾನದ ಮೌಲ್ಯಗಳಿಗೆ ತದ್ವಿರುದ್ಧವಾಗಿ ನಡೆಯುತ್ತಿರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.

ಸಮಾಜದಲ್ಲಿ ಗೌರವಯುತವಾಗಿ ನಡೆದುಕೊಳ್ಳದೆ ಸರ್ವಾಧಿಕಾರಿಯಾಗಿ ಹೆಣ್ಣುಮಕ್ಕಳು ಹಾಗೂ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಚಾಳಿಯಿರುವ ವ್ಯಕ್ತಿಯ ಶಾಸಕತ್ವ ರದ್ದು ಮಾಡಬೇಕು. ಶಾಸಕ ಸ್ಥಾನದಿಂದ ವಜಾ ಮಾಡುವವರೆಗೆ ನಮ್ಮ ಹೋರಾಟ ನಡೆಯಲಿದೆ. ಈ ಬಗ್ಗೆ ಸ್ಪೀಕರ್, ರಾಜ್ಯಪಾಲರು ಮುನಿರತ್ನ ವಿರುದ್ಧ ಶಿಸ್ತುಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಮಾಡುತ್ತಿದ್ದೇವೆ ಎಂದು ನರಸಿಂಹಯ್ಯ ತಿಳಿಸಿದರು.

ವಿಭಾಗದ ಪ್ರಧಾನ ಕಾರ್ಯದರ್ಶಿ ಸಿ.ಜಯರಾಮ್ ಮಾತನಾಡಿ, ಮುನಿರತ್ನ ಹಾಗೂ ಅವರ ತಮ್ಮ ಕೊರಂಗು ಕೃಷ್ಣ ಇಬ್ಬರೂ ರೌಡಿಗಳೇ. ಕಾಲ ಬದಲಾದಂತೆ ಬಿಬಿಎಂಪಿಯಲ್ಲಿ ಗುತ್ತಿಗೆದಾರನಾದ ಮುನಿರತ್ನ ನಂತರ ರಾಜಕೀಯ ಪ್ರವೇಶಿಸಿದರು. ಆದರೂ, ತಮ್ಮ ರೌಡಿ ವರ್ತನೆ, ದರ್ಪ ಹಾಗೂ ದೌರ್ಜನ್ಯ ಬಿಟ್ಟಿಲ್ಲ. ಇಂತಹ ನೀಚ ಪ್ರವೃತ್ತಿಯವರು ಜನಪ್ರತಿನಿಧಿಯಾಗಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾದುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ ಸ್ವಾಮಿ ಮಾತನಾಡಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ಮುನಿರತ್ನ ಮಾತುಗಳಲ್ಲಿ ಅಸ್ಪೃಶ್ಯತೆ ಆಚರಣೆ ಎದ್ದು ಕಾಣುತ್ತದೆ. ಒಕ್ಕಲಿಗ ಮತ್ತು ಪರಿಶಿಷ್ಟರನ್ನು ಎತ್ತಿ ಕಟ್ಟುವ ಕೆಲಸ ಮಾಡಿರುವ ಅವರು, ಸಮುದಾಯಗಳ ಮಧ್ಯೆ ದ್ವೇಷ ಬಿತ್ತಿದ್ದಾರೆ. ಚುನಾವಣೆಯಲ್ಲಿ ಅಕ್ರಮ ಎಸಗಿ ಗೆದ್ದಿರುವ ಮುನಿರತ್ನ ಕೃತ್ಯವನ್ನು ಇಡೀ ಸಮುದಾಯ ಖಂಡಿಸುತ್ತದೆ ಎಂದರು.

ಮುನಿರತ್ನ ಆಡಿಯೋ ಹೊರ ಬರುತ್ತಿದ್ದಂತೆ, ಒಕ್ಕೂಟದ ನೇತೃತ್ವದಲ್ಲಿ ರಾಮನಗರ ಟೌನ್ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದೇವೆ. ರಾಜ್ಯದಾದ್ಯಂತ ದೂರುಗಳು ದಾಖಲಾಗುತ್ತಲೇ ಇವೆ. ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಂಡು ಯಾರೂ ಸಮುದಾಯ, ಮಹಿಳೆಯರ ಕುರಿತು ಅವಹೇಳನಕಾರಿಯಾಗಿ ಮಾತನಾಡದಂತೆ ಸಂದೇಶ ನೀಡಬೇಕು ಎಂದು ಒತ್ತಾಯಿಸಿದರು.

ವಿಭಾಗದ ಉಪಾಧ್ಯಕ್ಷ ಜಯಚಂದ್ರ, ಮುಖಂಡರಾದ ಗುರುಮೂರ್ತಿ, ಮಾರುತಿ, ಪ್ರಕಾಶ್, ರಾಮಕೃಷ್ಣ, ಶಿವಶಂಕರ್, ಶಿವಲಿಂಗಯ್ಯ ಇದ್ದರು.