ಮುನಿರತ್ನ ಕೈದಿ ನಂ.9141

| Published : Sep 19 2024, 01:48 AM IST

ಸಾರಾಂಶ

ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ ಹಾಗೂ ಜಾತಿ ನಿಂದನೆ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ, ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರು ವಿಚಾರಣಾಧೀನ ಕೈದಿ ನಂ.9141 ಆಗಿದ್ದು, ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಸಾಮಾನ್ಯ ಕೈದಿಯಂತೆ ಕಾಲ ಕಳೆಯುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ ಹಾಗೂ ಜಾತಿ ನಿಂದನೆ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ, ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರು ವಿಚಾರಣಾಧೀನ ಕೈದಿ ನಂ.9141 ಆಗಿದ್ದು, ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಸಾಮಾನ್ಯ ಕೈದಿಯಂತೆ ಕಾಲ ಕಳೆಯುತ್ತಿದ್ದಾರೆ.

ಇನ್ನೊಂದೆಡೆ ಜಾತಿ ನಿಂದನೆ ಪ್ರಕರಣದಲ್ಲಿ ಬುಧವಾರ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ಮುನಿರತ್ನ ಅವರಿಗೆ ನಿರಾಸೆಯಾಗಿದ್ದು, ಶಾಸಕರ ಜಾಮೀನು ಭವಿಷ್ಯವು ಗುರುವಾರ ನ್ಯಾಯಾಲಯದಲ್ಲಿ ತೀರ್ಮಾನವಾಗಲಿದೆ.

ತ್ಯಾಜ್ಯ ವಿಲೇವಾರಿ ಗುತ್ತಿಗೆ ಸಂಬಂಧ 30 ಲಕ್ಷ ರು. ಕಮಿಷನ್ ನೀಡುವಂತೆ ಒತ್ತಾಯಿಸಿ ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಅವರಿಗೆ ನಿಂದಿಸಿ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಮಾಡಿದ ಆರೋಪದ ಮೇರೆಗೆ ಮುನಿರತ್ನ ವಿರುದ್ಧ ವೈಯಾಲಿಕಾವಲ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಈ ಕೃತ್ಯದ ಆಡಿಯೋ ವೈರಲ್ ಬೆನ್ನಲ್ಲೇ ಬಂಧನ ಭೀತಿಯಿಂದ ಬೆಂಗಳೂರು ತೊರೆದು ಆಂಧ್ರಪ್ರದೇಶಕ್ಕೆ ಹೊರಟಿದ್ದ ಶಾಸಕರನ್ನು ಕೋಲಾರದಲ್ಲಿ ಶನಿವಾರ ಪೊಲೀಸರು ಬಂಧಿಸಿದ್ದರು. ಎರಡು ದಿನ ವಶಕ್ಕೆ ಪಡೆದು ವಿಚಾರಣೆ ನಡೆಸಿದ ನಂತರ ನ್ಯಾಯಾಲಯದ ಆದೇಶದಂತೆ ಮಾಜಿ ಸಚಿವರನ್ನು ಮಂಗಳವಾರ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿಶೇಷ ಭದ್ರತಾ ವಿಭಾಗದ ಸೆಲ್‌ನಲ್ಲಿ ಬಂಧನದಲ್ಲಿರುವ ಮುನಿರತ್ನ ಅವರಿಗೆ ವಿಚಾರಣಾಧೀನ ಕೈದಿ ನಂ.9141 ಅನ್ನು ಅಧಿಕಾರಿಗಳು ನೀಡಿದ್ದಾರೆ.

ಜೈಲಿಗೆ ಬಂದ ಮಾಜಿ ಸಚಿವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದ ಕಾರಾಗೃಹದ ಅಧಿಕಾರಿಗಳು, ನಂತರ ರಾತ್ರಿ ಚಪಾತಿ ಹಾಗೂ ಅನ್ನ ಸಾಂಬಾರ್ ನೀಡಿದ್ದರು. ಆದರೆ ಊಟ ಮಾಡಲು ಮುನಿರತ್ನ ಒಲ್ಲೆ ಎಂದಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಬುಧವಾರ ಉಪಾಹಾರ ಹಾಗೂ ಊಟವನ್ನು ಮಾಜಿ ಸಚಿವರು ಸೇವಿಸಿದ್ದಾರೆ. ಇನ್ನು ಜಾಮೀನು ಪಡೆದು ಬಂಧನ ಮುಕ್ತರಾಗುವ ಖುಷಿಯಲ್ಲಿದ್ದ ಮುನಿರತ್ನ ಅವರಿಗೆ ಜಾಮೀನು ಅರ್ಜಿ ಆದೇಶವನ್ನು ನ್ಯಾಯಾಲಯವು ಕಾಯ್ದಿರಿಸಿ ಗುರುವಾರಕ್ಕೆ ಮುಂದೂಡಿದ ಸಂಗತಿ ತಿಳಿದು ನಿರಾಸೆಯಾಯಿತು ಎಂದು ತಿಳಿದು ಬಂದಿದೆ.

==

ಇಂದು ಜಾಮೀನು ಸಿಗುತ್ತಾ? ಇಲ್ವಾ?

ಬೆಂಗಳೂರು: ಬಿಬಿಎಂಪಿ ಗುತ್ತಿಗೆದಾರನಿಗೆ ಕಿರುಕುಳ, ಜಾತಿ ನಿಂದನೆ ಆರೋಪ ಪ್ರಕರಣದಲ್ಲಿ ಜೈಲು ಪಾಲಾಗಿರುವ ಬಿಜೆಪಿ ಶಾಸಕ ಮುನಿರತ್ನ ಜಾಮೀನು ಅರ್ಜಿ ಆದೇಶವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗುರುವಾರಕ್ಕೆ ಕಾಯ್ದಿರಿಸಿದೆ. ​ಬುಧವಾರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಗುರುವಾರ ತೀರ್ಪು ಪ್ರಕಟಿಸಲಿದ್ದು, ಮುನಿರತ್ನ ಅವರ ಭ‍ವಿಷ್ಯದ ಜೈಲುವಾಸದ ಬಗ್ಗೆ ನಿರ್ಧಾರವಾಗಲಿದೆ.