ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಜಾತಿ ನಿಂದನೆ, ಜೀವ ಬೆದರಿಕೆ ಆರೋಪದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಮುನಿರತ್ನ ಅವರನ್ನು ಸೆ.30ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.ಎರಡು ದಿನಗಳ ಪೊಲೀಸ್ ಕಸ್ಟಡಿ ಮುಕ್ತಾಯದ ಹಿನ್ನೆಲೆಯಲ್ಲಿ ವೈಯಾಲಿಕಾವಲ್ ಪೊಲೀಸರು ಮಂಗಳವಾರ ಮಧ್ಯಾಹ್ನ ಆರೋಪಿ ಮುನಿರತ್ನ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಸ್ತೃತ ತನಿಖೆಗಾಗಿ ಆರೋಪಿಯನ್ನು ವಶಕ್ಕೆ ನೀಡುವಂತೆ ಮನವಿ ಮಾಡಿದರು.
ಈ ವೇಳೆ ಮುನಿರತ್ನ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿ ವಾದ ಮಂಡನೆಗೆ ಅವಕಾಶ ಕೋರಿದರು. ಆದರೆ, ನ್ಯಾಯಾಧೀಶರು ಜಾಮೀನು ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿ, ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದರು.ಇದರ ಬೆನ್ನಲ್ಲೇ ವೈಯಾಲಿಕಾವಲ್ ಠಾಣೆ ಪೊಲೀಸರು, ಆರೋಪಿ ಮುನಿರತ್ನ ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ನಿಯಮಾನುಸಾರ ವೈದ್ಯಕೀಯ ಪರೀಕ್ಷೆ ಮಾಡಿಸಿ, ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಸೇರಿಸಿದ್ದಾರೆ.
ಮುನಿರತ್ನ ವಿರುದ್ಧ ಗುತ್ತಿಗೆದಾರ ಚಲುವರಾಜ್‌ಗೆ ಜೀವ ಬೆದರಿಕೆ ಹಾಕಿದ, ಜಾತಿ ನಿಂದನೆ ಮಾಡಿದ ಆರೋಪದಡಿ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಇದರ ಬೆನ್ನಲ್ಲೇ ಪೊಲೀಸರು ಶನಿವಾರ ಸಂಜೆ ಕೋಲಾರದ ಮುಳಬಾಗಿಲು ಬಳಿ ಮುನಿರತ್ನ ಅವರನ್ನು ವಶಕ್ಕೆ ಪಡೆದು ನಗರಕ್ಕೆ ಕರೆತಂದು ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ಎರಡು ದಿನಗಳ ಕಾಲ ಆರೋಪಿ ಮುನಿರತ್ನರನ್ನು ಪೊಲೀಸರ ವಶಕ್ಕೆ ನೀಡಿ ಆದೇಶಿಸಿದ್ದರು.ರಾಜಕೀಯ ಷಡ್ಯಂತ್ರ ಎಂದ ಮುನಿರತ್ನ:ಅದರಂತೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಮುನಿರತ್ನ ಅವರನ್ನು ಎಸಿಪಿ ನೇತೃತ್ವದ ತಂಡವು ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ ಆರೋಪಿ ಮುನಿರತ್ನ ಇದೊಂದು ರಾಜಕೀಯ ಷಡ್ಯಂತ್ರ ಎಂದಷ್ಟೇ ಉತ್ತರಿಸಿದ್ದರು. ತನಿಖಾಧಿಕಾರಿಗಳ ಬಹುತೇಕ ಪ್ರಶ್ನೆಗಳಿಗೆ ಇದು ತಮ್ಮ ವಿರೋಧಿಗಳ ರಾಜಕೀಯ ಷಡ್ಯಂತ್ರ ಎಂದಷ್ಟೇ ಒಂದು ಸಾಲಿನ ಉತ್ತರ ನೀಡಿದ್ದಾರೆ ಎಂದು ತಿಳಿದು ಬಂದಿದೆ.------ಮತ್ತೊಂದು ಪ್ರಕರಣದಲ್ಲಿ ವಶಕ್ಕೆ ಸಾಧ್ಯತೆ?
ವೈಯಾಲಿಕಾವಲ್ ಠಾಣೆ ಪೊಲೀಸರು ಸದ್ಯ ಜಾತಿ ನಿಂದನೆ ಪ್ರಕರಣದಲ್ಲಿ ಮುನಿರತ್ನ ಅವರ ಬಂಧನ ತೋರಿಸಿದ್ದಾರೆ. ಈ ಪ್ರಕರಣದಲ್ಲಿ ನ್ಯಾಯಾಲಯವು ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಇದೀಗ ಪೊಲೀಸರು ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಪ್ರತ್ಯೇಕವಾಗಿ ವಿಚಾರಣೆ ನಡೆಸಲು ನ್ಯಾಯಾಲಯಕ್ಕೆ ಬಾಡಿ ವಾರೆಂಟ್‌ಗೆ ಅರ್ಜಿ ಸಲ್ಲಿಸಿ, ಮತ್ತೆ ಆರೋಪಿ ಮುನಿರತ್ನರನ್ನು ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ.-------ಇಂದು ಜಾಮೀನು ಅರ್ಜಿ ವಿಚಾರಣೆ
ಆರೋಪಿ ಮಾಜಿ ಸಚಿವ ಮುನಿರತ್ನ ಪರ ವಕೀಲರು ಜಾಮೀನು ಕೋರಿ ಮಂಗಳವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯವು ಬುಧವಾರಕ್ಕೆ ಈ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದೆ. ಸದ್ಯ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ ಮುನಿರತ್ನ ಅವರಿಗೆ ಜಾಮೀನು ಸಿಗುವುದೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.------
ಇಂದು ಅಥವಾ ನಾಳೆಧ್ವನಿ ಪರೀಕ್ಷೆಯ ವರದಿಗುತ್ತಿಗೆದಾರ ಚಲುವರಾಜ್‌ಗೆ ಮುನಿರತ್ನ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋದ ಮದರ್ ಡಿವೈಸ್ ಅನ್ನು ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಜತೆಗೆ ಮುನಿರತ್ನ ಮತ್ತು ದೂರುದಾರ ಚಲುವರಾಜ್ ಅವರ ಧ್ವನಿ ಮಾದರಿಯನ್ನೂ ಕಳುಹಿಸಿದ್ದಾರೆ. ಅಲ್ಲಿನ ತಜ್ಞರು ಬುಧವಾರ ಅಥವಾ ಗುರುವಾರ ಪೊಲೀಸರಿಗೆ ವರದಿ ನೀಡಲಿದ್ದಾರೆ ಎಂದು ಹೇಳಲಾಗಿದೆ. ಧ್ವನಿ ಪರೀಕ್ಷೆ ಪಾಸಿಟಿವ್ ಬಂದರೆ ಮುನಿರತ್ನಗೆ ಇನ್ನಷ್ಟು ಸಂಕಷ್ಟ ಎದುರಾಗಲಿದೆ.