ಸಾರಾಂಶ
ಹೆತ್ತ ತಾಯಿಯ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ ಘಟನೆ ಗುರುವಾರ ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಹೆತ್ತ ತಾಯಿಯ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ ಘಟನೆ ಗುರುವಾರ ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಾವಕ್ಕ ಗಿರಿಸಾಗರ (58) ಕೊಲೆಯಾದ ಮಹಿಳೆ. ವೆಂಕಪ್ಪ ಗಿರಿಸಾಗರ ಕೊಲೆ ಆರೋಪಿ. ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ತಾಯಿಯನ್ನು ಈರುಳ್ಳಿ ಕಟ್ ಮಾಡುವ ಆಯುಧದಿಂದ ಕುತ್ತಿಗೆ ಕೊಯ್ದಿದ್ದು, ನಂತರ ಚಾಕುವಿನಿಂದ ಬೆನ್ನಿಗೆ ಚುಚ್ಚಿದ್ದಾನೆ. ಆ ಚಾಕು ಬೆನ್ನಲ್ಲಿಯೇ ಮುರಿದಿದ್ದು, ಹಿಡಿ ಮಾತ್ರ ಕೆಳಗೆ ಬಿದ್ದಿದೆ. ತಾಯಿಯನ್ನು ಕೊಲೆ ಮಾಡಿ ಬಳಿಕ ಬಟ್ಟೆಯಿಂದ ನೆಲ ಒರೆಸಿ, ಮೇಲಿನ ಮಹಡಿಯಲ್ಲಿ ಸುತ್ತಾಡಿದ್ದು, ಬಳಿಕ ಮನೆಯ ಚಿಲಕ ಹಾಕಿ ಮನೆಯಿಂದ ಹೊರಹೋಗಿದ್ದಾನೆ. ಕೊಲೆ ಆರೋಪಿ ವೆಂಕಪ್ಪ ಸಾಕಷ್ಟು ಸಾಲ ಮಾಡಿಕೊಂಡಿದ್ದ. ಜತೆಗೆ ಕುಡಿತದ ಚಟಕ್ಕೂ ಅಂಟಿಕೊಂಡಿದ್ದ. ಎರಡ್ಮೂರು ತಿಂಗಳಿಂದ ಗ್ರಾಮದಲ್ಲಿ ಸಾಕಷ್ಟು ಜನರೊಂದಿಗೆ ಜಗಳ ಮಾಡಿಕೊಂಡಿದ್ದ. ಒಂದು ರೀತಿ ಸೈಕೋ ತರ ವರ್ತಿಸುತ್ತಿದ್ದ ಎನ್ನಲಾಗಿದೆ. ಎರಡು ಗಂಟೆಯಲ್ಲಿ ಆರೋಪಿ ಬಂಧನ: ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕಲಾದಗಿ ಠಾಣೆ ಪಿಎಸ್ಐ ಪ್ರವೀಣ ಬೀಳಗಿ ಆರೋಪಿಯ ಮಾಹಿತಿ ಪಡೆದು ಎರಡು ಗಂಟೆಯಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ಸಿದ್ದಾರ್ಥ ಗೋಯಲ್, ಹೆಚ್ಚುವರಿ ಎಸ್ಪಿ ಮಹಾಂತೇಶ ಜಿದ್ದಿ, ಡಿವೈಎಸ್ಪಿ ಸಿಪಿಐ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.