ಕೊಲೆ: ಐವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ

| Published : Aug 24 2025, 02:00 AM IST

ಸಾರಾಂಶ

ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಐವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶನಿವಾರ ತೀರ್ಪು ನೀಡಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಐವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶನಿವಾರ ತೀರ್ಪು ನೀಡಿದೆ. ಗೌಂಡವಾಡ ಗ್ರಾಮದ ಆನಂದ ರಾಮಾ ಕುಟ್ರೆ, ಅನರ್ವ್ ಕುಟ್ರೆ, ಜಾಯಪ್ಪ ನೀಲಜಕರ, ಮಹಾಂತೇಶ ನೀಲಜಕರ ಹಾಗೂ ಶಶಿಕಲಾ ಕುಟ್ರೆಗೆ ಕಠಿಣ ಜೀವಾವಧಿ ಶಿಕ್ಷೆಗೆ ಗುರಿಯಾದವರು.

ಗೌಂಡವಾಡ ಗ್ರಾಮದ ಭೈರವನಾಥ ದೇವಸ್ಥಾನದ ಜಾಗಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ವ್ಯಾಜ್ಯ ನಿರ್ಮಾಣವಾಗಿತ್ತು. ಭೈರವನಾಥ ದೇವಸ್ಥಾನದ ಜಾಗದ ಪರವಾಗಿ ಸತೀಶ ಪಾಟೀಲ ಹೋರಾಟ ನಡೆಸುತ್ತ ಬಂದಿದ್ದರು. ಸೆ.18, 2022 ರಂದು ತಮ್ಮ ಮನೆ ಮುಂದೆ ನಿಂತಿದ್ದ ಸತೀಶ ಪಾಟೀಲನನ್ನು ಆರೋಪಿಗಳು ಹತ್ಯೆ ಮಾಡಿದ್ದರು. ಈ ಪ್ರಕರಣದ ಕುರಿತು ಅಂತಿಮ ವಿಚಾರಣೆ ನಡೆಸಿದ ಬೆಳಗಾವಿ ಎರಡನೇ ಹೆಚ್ಚುವರಿ ಜಿಲ್ಲಾ ‌ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಗಂಗಾಧರ ಕೆ.ಎ‌ನ್ ಅವರು ಐವರು ಅಪರಾಧಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ, ತಲಾ ₹2 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೇ, ನಾಲ್ವರು ಆರೋಪಿಗಳಿಗೆ ಸಾಮಾನ್ಯ ಶಿಕ್ಷೆ ವಿಧಿಸಲಾಗಿದೆ. ಮೂರು ವರ್ಷಗಳ ಕಾಲ ವಾದ, ಪ್ರತಿವಾದ ಆಲಿಸಿ ನ್ಯಾಯಾಲಯ ಅಂತಿಮ ತೀರ್ಪು ಪ್ರಕಟಿಸಿದೆ.ಈ ಪ್ರಕರಣದ ಕುರಿತು ಅಂತಿಮ ತೀರ್ಪು ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಗೌಂಡವಾಡ ಗ್ರಾಮಸ್ಥರು ನ್ಯಾಯಾಲಯದ ಆವರಣದಲ್ಲಿ ಜಮಾಯಿಸಿದ್ದರು. ನ್ಯಾಯಾಲಯದ ತೀರ್ಪು ಪ್ರಕಟಿಸಿದ ಬಳಿಕ ಗ್ರಾಮಸ್ಥರು ವಿಜಯದ ಸಂಕೇತ ತೋರಿ, ಸಂಭ್ರಮಿಸಿದರು.