ಸಾರಾಂಶ
ಅರಳಿಹಟ್ಟಿ ಗ್ರಾಮದ ವಿಕಾಸ ಶಿವದಾಸ ಕೋಷ್ಠಿ (16) ಎಂಬಾತನೇ ಹತ್ಯೆಯಾದ ಅಪ್ರಾಪ್ತ.
ಕನ್ನಡಪ್ರಭ ವಾರ್ತೆ ಅಥಣಿ
ಪಟ್ಟಣದ ಫರ್ನಿಚರ್ ಅಂಗಡಿಯೊಂದರಲ್ಲಿ ಕಳ್ಳತನ ಮಾಡಲು ಬಂದ ಅಪ್ರಾಪ್ತನನ್ನು ಹಿಗ್ಗಾಮುಗ್ಗ ಥಳಿಸಿ ಕೊಲೆ ಮಾಡಿ, ಯಾರಿಗೂ ಗೊತ್ತಾಗದಂತೆ ಖಾಲಿ ನಿವೇಶನವೊಂದರಲ್ಲಿ ಶವ ಎಸೆದು ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಅಥಣಿ ಪೊಲೀಸರು ಯಶಸ್ವಿಯಾಗಿದ್ದಾರೆ.ಪಟ್ಟಣದ ಅಬ್ದುಲಬಾರಿ ಅಬ್ದುಲರಜಾಕ ಮುಲ್ಲಾ (36), ಜುಬೆರಹ್ಮದ ಮಹಮದ್ ಅಕ್ರಂ ಮೌಲ್ವಿ (34), ಬಿಲಾಲ ಅಹಮ್ಮದ್ ಮುಕ್ತಾರ ಅಹಮದ್ ಮೌಲ್ವಿ (25), ಹಜರತಬಿಲಾಲ ಅಹಮ್ಮದ ಇಸಾಲಿ ನಾಲಬಂದ (28), ಫಯೂಮ ಮುಸಾ ನಾಲಬಂದ್ (27) ಹಾಗೂ ಮಹೇಶ ಸಂಜಯ ಕಾಳೆ (36) ಬಂಧಿತ ಆರೋಪಿಗಳು.ತಾಲೂಕಿನ ಅರಳಿಹಟ್ಟಿ ಗ್ರಾಮದ ವಿಕಾಸ ಶಿವದಾಸ ಕೋಷ್ಠಿ (16) ಎಂಬಾತನೇ ಹತ್ಯೆಯಾದ ಅಪ್ರಾಪ್ತ. ಈತನ ಮೃತದೇಹವು ಅನಾಥ ಶವವಾಗಿ ಮೇ 1ರಂದು ಪತ್ತೆಯಾಗಿತ್ತು. ಕೊಳೆತು ನಾರುತಿದ್ದ ಶವವನ್ನು ಪೊಲೀಸರೇ ಶವಸಂಸ್ಕಾರ ಮಾಡಿ, ತನಿಖೆ ನಡೆಸುತ್ತಿದ್ದರು. ಹಲ್ಯಾಳ ರಸ್ತೆಯ ಶೆಡ್ ಒಂದರಲ್ಲಿ ಯುವಕನನ್ನು ಹಿಗ್ಗಾಮುಗ್ಗ ಥಳಿಸಿದ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಮೊದಲಿಗೆ ಆರೋಪಿ ಅಬ್ದುಲ್ ಬಾರಿ ಮುಲ್ಲಾರನ್ನು ಬುಧವಾರ ಬಂಧಿಸಿ ವಿಚಾರಿಸಿದಾಗ ಕಳ್ಳತನಕ್ಕೆ ಬಂದಿದ್ದ ಯುವಕನನ್ನು ಥಳಿಸಿ ಕೊಲೆ ಮಾಡಿದ ವಿಚಾರ ಹಾಗೂ ಉಳಿದ ಆರೋಪಿಗಳ ಹೆಸರು ಬಾಯಿಬಿಟ್ಟಿದ್ದಾನೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ, ಅಥಣಿ ಡಿವೈಎಸ್ಪಿ ಪ್ರಶಾಂತ ಮುನ್ನಳ್ಳಿ ಮಾರ್ಗದರ್ಶನದಲ್ಲಿ ಅಥಣಿ ಸಿಪಿಐ ಸಂತೋಷ ಹಳ್ಳೂರ ನೇತೃತ್ವದಲ್ಲಿ ಪಿಎಸ್ಐ ನಿರ್ಮಲಪ್ಪ ಉಪ್ಪಾರ, ಕುಮಾರ ಹಾಡಕರ ಮತ್ತು ಮಲ್ಲಿಕಾರ್ಜುನ ತಳವಾರ ಮುಂದಾಳತ್ವದಲ್ಲಿ ಎರಡು ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.