ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಅಪ್ರಾಪ್ತ ಬಾಲಕ ಸಂಕೇತ್‌ನನ್ನು ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಮಾಜಿ ಗೃಹ ಸಚಿವರೂ ಆದ ಶಾಸಕ ಆರಗ ಜ್ಞಾನೇಂದ್ರ ಒತ್ತಾಯಿಸಿದರು.ನಗರದ ಹೊರವಲಯದ ಊರುಗಡೂರಿನಲ್ಲಿ ಶನಿವಾರ ಹತ್ಯೆಯಾದ ವಿದ್ಯಾರ್ಥಿ ಸಂಕೇತ್ ನಿವಾಸಕ್ಕೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿ ಮಾತನಾಡಿದ ಅವರು, ಮಕ್ಕಳನ್ನ ಕಳೆದುಕೊಂಡಾಗ ತುಂಬಾ ನೋವಾಗುತ್ತದೆ. ನಾನು ಕೂಡ ಅಪಘಾತದಲ್ಲಿ ಮಗಳನ್ನ ಕಳೆದುಕೊಂಡಿದ್ದೆ. ಈ ಪೋಷಕರು ಎಸ್‌ಎಸ್ಎಲ್‌ಸಿ ಓದುತ್ತಿದ್ದ ಮಗನನ್ನ ಕಳೆದುಕೊಂಡಿದ್ದಾರೆ. ಮಗನ ಬಗ್ಗೆ ಕನಸು ಕಟ್ಟಿಕೊಂಡಿದ್ದ ಪೋಷಕರ ಕನಸು ಭಗ್ನಗೊಂಡಿದೆ. ಕೊಲೆ ಮಾಡಿದವರಿಗೆ ಜೀವಾವಧಿ ಶಿಕ್ಷೆಯಾಗಬೇಕು ಎಂದು ಆಗಹಿಸಿದರು.
ಅಲ್ಪಸಂಖ್ಯಾತ ಏರಿಯಾಗಳಿಗೆ ಪೊಲೀಸರು ಹೋಗಲ್ಲ. ಉದಾಸೀನ ಮಾಡ್ತಾರೆ. ಅಕ್ರಮ ದಂಧೆಗೆ ಪೊಲೀಸ್ ಸಿಬ್ಬಂದಿ ಕೂಡ ಶಾಮೀಲಾಗ್ತಾರೆ. ಅಂತವರನ್ನ ವರ್ಗಾವಣೆ ಮಾಡಬೇಕು. ಇಲ್ಲವಾದರೆ ಮತ್ತಷ್ಟು ಜನರ ಕೊಲೆಯಾಗುತ್ತೇ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಇದು ಜಾಸ್ತಿಯಾಗಿದೆ. ಯಾಕಂದ್ರೇ ಏನು ಮಾಡಿದ್ರು ಸರ್ಕಾರ ರಕ್ಷಣೆ ಮಾಡುತ್ತೇ ಅಂದ್ಕೋತ್ತಾರೆ. ಆ ಒಂದು ಸಮುದಾಯಕ್ಕೆ ಬಹಳ ಧೈರ್ಯ ಬಂದಿದೆ. ಶಿವಾಜಿ ಜಯಂತಿ ಮೇಲೆ ಕಲ್ಲು ಹೊಡಿತಾರೆ. ಬಾಗಲಕೋಟೆ, ಕೊಡಗು ಸೇರಿದಂತೆ ಹಲವೆಡೆ ಗಲಾಟೆಯಾಗಿದೆ ಸರ್ಕಾರದ ತುಷ್ಟೀಕರಣ ನೀತಿಯಿಂದ ಹೀಗೆ ಆಗ್ತಿದೆ ಎಂದು ದೂರಿದರು.-----
ಬಾಕ್ಸ್...
ಅಪ್ರಾಪ್ತರು ಎಂಬ ಕಾರಣಕ್ಕೆ ಕಾನೂನು ವಿನಾಯಿತಿ ಬೇಡ : ಹಾಲಪ್ಪ
ವಿದ್ಯಾರ್ಥಿ ಸಂಕೇತ್ ಹತ್ಯೆ ಆರೋಪಿಗಳು ಅಪ್ರಾಪ್ತರು ಎಂಬ ಕಾರಣಕ್ಕೆ ಕಾನೂನು ವಿನಾಯಿತಿ ನೀಡಬಾರದು. ನೊಂದ ಕುಟುಂಬಕ್ಕೆ ನಾವು ಏನೇ ಸಾಂತ್ವನ ಹೇಳಿದರೂ ಸಾಲದು. ಆದರೆ, ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕು. ಕುಕೃತ್ಯ ಮಾಡುವ ಮಕ್ಕಳ ಪೋಷಕರ ಮನಸ್ಥಿತಿ ಎಂತಹದು ಎಂದು ಗಮನಿಸಬೇಕು ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಒತ್ತಾಯಿಸಿದರು.ಊರುಗಡೂರಿನಲ್ಲಿ ಕೊಲೆಯಾದ ಸಂಕೇತ್ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಈ ಹುಡುಗರಿಗೆ ಕೊಲೆ ಮಾಡುವ ಮನಸ್ಥಿತಿ ಹೇಗೆ ಬಂತು. ಇಂತಹ ಹೀನ ಮಾನಸಿಕತೆ ದೇಶಕ್ಕೆ ರಾಜ್ಯಕ್ಕೆ ಈ ಊರಿಗೆ ಅಪಾಯಕಾರಿ. ಗಾಂಜಾ ಅಮಲಿನಲ್ಲಿ ಇಂಥವರನ್ನೇ ಕೊಲೆ ಮಾಡಬೇಕು ಎಂಬ ಮನಸ್ಸು ಹೇಗೆ ಬರುತ್ತದೆ. ಗಾಂಜಾ ಅಮಲಿನಲ್ಲೂ ಮಾಡಿದ್ದಾರೆಂದು ಆರೋಪಿಗಳನ್ನು ರಕ್ಷಣೆ ಮಾಡಬಾರದು. ಗಾಂಜಾ ಬಗ್ಗೆ ಮಾಹಿತಿ ನೀಡಿದರೆ ಕೆಲವು ಪೊಲೀಸರು ಅಂತವರಿಗೆ ತೊಂದರೆ ಕೊಡುತ್ತಾರೆ. ಗಾಂಜಾದ ಸೇವನೆ ಅಥವಾ ಮಾರಾಟ ಬಗ್ಗೆ ಮಾಹಿತಿ ಬಂದಾಗ ಆತನನ್ನು ಜೈಲಿಗೆ ಕಳಿಸಿದರೆ ಸಾಲದು, ಈ ಗಾಂಜಾ ಮಾಫಿಯಾ ಸಂಪೂರ್ಣವಾಗಿ ಬಗ್ಗು ಬಡಿಯಬೇಕು ಎಂದು ಒತ್ತಾಯಿಸಿದರು.
ಈ ಹಿಂದಿನ ಎಸ್‌ಪಿಗೆ ಗಾಂಜಾ ಬೆಳೆ ಬಗ್ಗೆ ಮಾಹಿತಿ ನೀಡಿದ್ದೆವು. ಈ ಗಾಂಜಾ ಬೆಳೆ ಎಲ್ಲಿಗೆ ಹೋಗುತ್ತದೆ ಎಂದು ಪತ್ತೆ ಮಾಡಿ ಎಂದು ಹೇಳಿದ್ದೆವು. ಗಾಂಜಾ ಅಪೀಮು ಮೊದಲಾದ ಮಾಫಿಯಾಗಳ ಬಗ್ಗೆ ಮಾಫಿಯಾದ ಕಿಂಗ್ ಪಿನ್ ವರೆಗೂ ಪೊಲೀಸರು ಕಾರ್ಯಾಚರಣೆ ನಡೆಸಬೇಕು. ನಗರದ ಕೆಲವು ಸೂಕ್ಷ್ಮ ಏರಿಯಾಗಳಲ್ಲಿನ ಅಕ್ರಮ ದಂಧೆಗಳನ್ನು ಮಟ್ಟ ಹಾಕಬೇಕು. ಗಾಂಜಾ ಹಾವಳಿಗೆ ಪೊಲೀಸರು ಕಡಿವಾಣ ಹಾಕದಿದ್ದರೆ, ಯುವಜನರು ಮತ್ತು ನಗರದ ಶಾಂತಿ ಹಾಳಾಗುತ್ತದೆ ಎಂದು ಹೇಳಿದರು.