ಸಚಿವ ಮಂಕಾಳ ವೈದ್ಯ ಹಿಂದೂಗಳ ಮತ ಪಡೆಯಲಿಲ್ಲವೇ?

ಕನ್ನಡಪ್ರಭ ವಾರ್ತೆ ಭಟ್ಕಳ

ಹಿಂದೂಗಳ ಧಾರ್ಮಿಕ ಭಾವನಾತ್ಮಕ ಪ್ರದೇಶವಾದ ಪಟ್ಟಣದ ಮುರಿನಕಟ್ಟೆಯನ್ನು ಪೊಲೀಸ್ ಅಧಿಕಾರಿಗಳ ಎದುರಿನಲ್ಲೇ ಮುಸ್ಲೀಮರು ಧ್ವಂಸ ಮಾಡಿದ್ದು ಇದು ಸಚಿವರು, ಜಿಲ್ಲಾಡಳಿತದ ವೈಫಲ್ಯ ಎದ್ದು ತೋರಿಸುತ್ತದೆ ಎಂದು ಮಾಜಿ ಶಾಸಕ ಸುನೀಲ ನಾಯ್ಕ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮುರಿನಕಟ್ಟೆ ತನ್ನದೇ ಆದ ಇತಿಹಾಸ ಇದೆ. ಇಲ್ಲಿ ಮಾರಿಯಮ್ಮನ ಹೊರೆ ಇಟ್ಟು ಪೂಜಿಸುತ್ತಾರೆ. ಇಂತಹ ಪ್ರದೇಶವನ್ನು ಪೊಲೀಸರ ಎದುರೇ ಸಾವಿರಾರು ಮುಸ್ಲೀಮರು ಬಂದು ಧ್ವಂಸಗೊಳಿಸಿರುವುದು ಭಟ್ಕಳದ ಕಾನೂನು ಸುವ್ಯವಸ್ಥೆ ಏನಾಗಿದೆ ಎನ್ನುವುದು ಸೂಚಿಸುತ್ತದೆ. ಈ ಸಂದರ್ಭದಲ್ಲಿ ಪೊಲೀಸರಿಗೆ ಹಲ್ಲೆ ಮಾಡಿದರೂ ಸುಮ್ಮನಿದ್ದಾರೆ ಎಂದ ಅವರು ಎಸ್ಪಿ ದೀಪನ್ ಮುರಿನಕಟ್ಟೆಗೆ ಏನೂ ಆಗಿಲ್ಲ ಎಂದು ಹೇಳಿದ್ದು ಸರಿಯಲ್ಲ. ಎಸ್ಪಿ ಅವರು ಸರಿಯಾಗಿ ತಿಳಿದುಕೊಂಡು ಮಾತನಾಡಬೇಕಿತ್ತು. ಘಟನೆ ನಡೆದು 18 ತಾಸಾದರೂ ಸಚಿವ ಮಂಕಾಳ ವೈದ್ಯ ಸ್ಥಳಕ್ಕೆ ಆಗಮಿಸಿಲ್ಲ. ಇವರು ಹಿಂದೂಗಳ ಮತ ಪಡೆದು ಗೆಲ್ಲಲಿಲ್ಲವೇ ಎಂದ ಅವರು ಸಚಿವರು ಹಿಂದೂಗಳ ಋಣ ತೀರಿಸಬೇಕು. ಸಚಿವರು ಕೇವಲ ಒಬ್ಬರ ಪರವಾಗಿ ಇರಬಾರದು. ಮುರಿನಕಟ್ಟೆಯನ್ನು ಸರಕಾರ ಕಟ್ಟಿಲ್ಲ. ಕಟ್ಟಲು ನಯಾಪೈಸೆಯೂ ಕೊಟ್ಟಿಲ್ಲ. ನಾವು ಅಧಿಕಾರದಲ್ಲಿದ್ದಾಗ ರಾಜಾಂಗಣ ನಾಗಬನ, ಆಸರಕೇರಿಯಲ್ಲಿ ದ್ವಾರ ನಿರ್ಮಿಸಲು ಸಹ ತೊಂದರೆ ಕೊಟ್ಟಿದ್ದಾರೆ. ಆದರೂ ಸಹ ನಾವು ಧೈರ್ಯದಿಂದ ಕಟ್ಟಿದ್ದೇವೆ. ಮುರಿನಕಟ್ಟೆಯನ್ನೂ ಸಹ ನಾವು ಕಟ್ಟೇ ಕಟ್ಟುತ್ತೇವೆ ಎಂದರು.

ಮಾಜಿ ಸಚಿವ ಶಿವಾನಂದ ನಾಯ್ಕ, ಮುರಿನಕಟ್ಟೆಯನ್ನು ದ್ವಂಸ ಮಾಡಿದ್ದರೂ ಸಚಿವರು ಸೌಜನ್ಯಕ್ಕೂ ಅಲ್ಲಿಗೆ ಭೇಟಿ ನೀಡಿಲ್ಲ. ಎಸ್ಪಿ ಅವರಿಗೆ ಸರಿಯಾದ ಮಾಹಿತಿ ಇಲ್ಲದೇ ಮುರಿನಕಟ್ಟೆ ಬಗ್ಗೆ ಮಾತನಾಡುತ್ತಿದ್ದಾರೆ. ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ಸರಕಾರ ಮಾಡಬಾರದು ಎಂದರು.


ಬಿಜೆಪಿ ಮುಖಂಡ ಗೋವಿಂದ ನಾಯ್ಕ, ತಂಝೀಂ ಅಧ್ಯಕ್ಷ ಮುರಿನಕಟ್ಟೆ ಬಗ್ಗೆ ಏನೇನೋ ಹೇಳುತ್ತಾರೆ. ಈ ಜಾಗ ತಂಝೀಂನದ್ದಲ್ಲ. ಈ ಘಟನೆಗ ಮೂಲ ಕಾರಣವೇ ತಂಜೀಂ ಸಂಸ್ಥೆಯಾಗಿದೆ. ಮುರಿನಕಟ್ಟೆಗೂ ತಂಝೀಂಗೂ ಏನು ಸಂಬಂಧ ಎಂದು ಪ್ರಶ್ನಿಸಿದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಿದೆ. ಎಸ್ಪಿ ಅವರಿಗೆ ಮುರಿನಕಟ್ಟೆ ಪ್ರದೇಶದ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲವಾಗಿದೆ ಎಂದರು. ಮುಖಂಡರಾದ ಸುಬ್ರಾಯ ದೇವಡಿಗ, ರಾಜೇಶ ನಾಯ್ಕ ಮುರಿನಕಟ್ಟೆ ಧ್ವಂಸವನ್ನು ತೀವ್ರವಾಗಿ ಖಂಡಿಸಿ ಪೊಲೀಸರು ತಪ್ಪಿತಸ್ಥರ ಮೇಲೆ ಪ್ರಕರಣ ದಾಖಲಿಸುವುದನ್ನು ಬಿಟ್ಟು ನ್ಯಾಯ ಕೇಳಲು ಧರಣಿ ಕುಳಿತವರ ಮೇಲೆ ಪ್ರಕರಣ ದಾಖಲಿಸಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಶಿವಾನಿ ಶಾಂತರಾಮ ಭಟ್ಕಳ, ಪ್ರಮುಖರಾದ ದಿನೇಶ ನಾಯ್ಕ, ಖೇದಾರ ಕೊಲ್ಲೆ, ಪರಮೇಶ್ವರ ಮೇಸ್ತ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ನಾಯ್ಕ, ಶ್ರೀಧರ ನಾಯ್ಕ ಮುಂತಾದವರಿದ್ದರು.