ಕನ್ನಡಪ್ರಭ ವಾರ್ತೆ ಮಡಿಕೇರಿ

ರೋಟರಿ ಮಡಿಕೇರಿ ವತಿಯಿಂದ ಮೂರ್ನಾಡು ಎಜುಕೇಷನ್ ಟ್ರಸ್ಟ್ ವಿದ್ಯಾ ಸಂಸ್ಥೆಯ ಪ್ರೌಢ ಶಾಲಾ ವಿದ್ಯಾರ್ಥಿನಿಯರಿಗೆ ಗರ್ಭಕಂಠದ ಕ್ಯಾನ್ಸರ್ ನಿರೋಧಕ ಲಸಿಕೆ ವಿತರಿಸಲಾಯಿತು. ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಲಸಿಕೆ ವಿತರಣಾ ಕಾರ್ಯಕ್ರಮದಲ್ಲಿ 13 ವಿದ್ಯಾರ್ಥಿಗಳು ಲಸಿಕೆ ಪಡೆದುಕೊಂಡರು.ಲಸಿಕೆ ನೀಡಿ ಮಾತನಾಡಿದ ಸ್ತ್ರೀರೋಗ ತಜ್ಞೆ ಡಾ. ಸುಮಂಗಲಿ, ಇತ್ತೀಚಿನ ದಿನಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಮಹಿಳೆಯರನ್ನು ಕಾಡುತ್ತಿದ್ದು, ಜಾಗೃತಿ ಅಗತ್ಯ. 9ರಿಂದ 14 ವಯಸ್ಸಿನ ಮಕ್ಕಳಿಗೆ ಎಚ್‌ಪಿವಿ ಲಸಿಕೆ ನೀಡಲಾಗುತ್ತಿದೆ. ಈ ರೋಗದ ಬಗ್ಗೆ ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಅರಿವು ಮೂಡಿಸುವ ಅನಿವಾರ್ಯತೆ ಇದೆ ಎಂದರು.ಕಳೆದ ವರ್ಷ ರೋಟರಿ ವತಿಯಿಂದ 51 ವಿದ್ಯಾರ್ಥಿನಿಯರಿಗೆ ಎಚ್‌ಪಿವಿ ಲಸಿಕೆ ನೀಡಲಾಗಿತ್ತು. ಈ ಬಾರಿ 250 ವಿದ್ಯಾರ್ಥಿನಿಯರ ಗುರಿ ಹೊಂದಲಾಗಿತ್ತಾದರೂ 13 ವಿದ್ಯಾರ್ಥಿನಿಯರು ಸ್ವಯಂ ಇಚ್ಛೆಯಿಂದ ಲಸಿಕೆ ಪಡೆದುಕೊಂಡಿದ್ದಾರೆ. ಸರಕಾರದಿಂದ ಲಸಿಕೆ ನೀಡುವ ಯೋಜನೆ ಮೂಲಕ ಲಸಿಕೆ ಪಡೆದುಕೊಳ್ಳುವ ಇಂಗಿತವನ್ನು ಇತರ ವಿದ್ಯಾರ್ಥಿಗಳು ವ್ಯಕ್ತಪಡಿಸಿದರು.

ರೋಟರಿ ಮಡಿಕೇರಿ ಅಧ್ಯಕ್ಷೆ ಲಲಿತಾ ರಾಘವನ್, ಸಮುದಾಯ ಸೇವಾ ವಿಭಾಗದ ನಿರ್ದೇಶಕ ಸುದಯ್ ನಾಣಯ್ಯ, ಮಲ್ಲಿಗೆ ಪೈ, ಆರೋಗ್ಯ ಸಿಬ್ಬಂದಿ, ವಿದ್ಯಾ ಸಂಸ್ಥೆ ಪ್ರಾಂಶುಪಾಲರು, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಸ್ಥಳೀಯ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಕೂಡ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗರ್ಭಕಂಠದ ಕ್ಯಾನ್ಸರ್ ಕುರಿತು ಮಾಹಿತಿ ಪಡೆದರು.