ಪರಿಸರ ಸಂರಕ್ಷಣೆಯಲ್ಲಿ ಮುರುಘಾಮಠದ ಕಾಳಜಿ ಅನನ್ಯ: ಮಾದಾರ ಚೆನ್ನಯ್ಯ ಸ್ವಾಮೀಜಿ

| Published : Jun 03 2024, 12:31 AM IST

ಪರಿಸರ ಸಂರಕ್ಷಣೆಯಲ್ಲಿ ಮುರುಘಾಮಠದ ಕಾಳಜಿ ಅನನ್ಯ: ಮಾದಾರ ಚೆನ್ನಯ್ಯ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಪರಿಸರ ಸಪ್ತಾಹದ ಅಂಗವಾಗಿ ಎಸ್‌ಜೆಎಂ ಬೃಹನ್ಮಠ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಗಿಡ ನೆಟ್ಟು, ಪೋಷಣೆ ಮಾಡಬೇಕಾದ ಹೊಣೆಗಾರಿಕೆಯ ಬಗ್ಗೆ ಅರಿವು ಮೂಡಿಸಿದರು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಪರಿಸರ ಸಂರಕ್ಷಣೆಯಲ್ಲಿ ಮುರುಘಾಮಠದ ಕಾಳಜಿ ಅನನ್ಯವಾದುದೆಂದು ಮಾದಾರ ಗುರುಪೀಠ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದರು.

ಪರಿಸರ ಸಪ್ತಾಹದ ಅಂಗವಾಗಿ ಎಸ್ ಜೆಎಂ ಬೃಹನ್ಮಠ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದ ಅವರು ನಾವು ಪರಿಸರ ಸಂರಕ್ಷಣೆಯ ಹೊಣೆ ಹೊರದಿದ್ದರೆ ಭವಿಷ್ಯದಲ್ಲಿ ಭಾರಿ ಪ್ರಮಾಣದ ಬೆಲೆ ತೆರಬೇಕಾಗುತ್ತದೆ. ಅದರ ಮುನ್ಸೂಚನೆ ಈ ವರ್ತಮಾನದಲ್ಲಿ ಆಗುತ್ತಿದೆ ಎಂಬ ಅರಿವು ಇರಬೇಕಿದೆ ಎಂದರು.

ಪ್ರತಿಯೊಬ್ಬರೂ ಮನೆ ಕಟ್ಟುತ್ತೇವೆ ಅದರೊಂದಿಗೆ ಗಿಡ ನೆಟ್ಟು ಪೋಷಣೆ ಮಾಡಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ. ತಡವಾಗಿ ಆದರೂ ಜನ ಈ ಅರಿವನ್ನು ಮೂಡಿಸಿ ಕೊಳ್ಳುತ್ತಿರುವುದು ಸಂತೋಷದ ಸಂಗತಿ. ಪರಿಸರ ಜಾಗೃತಿ ಆಂದೋಲನ ಸ್ವರೂಪ ಪಡೆದುಕೊಳ್ಳಬೇಕಿದೆ. ಚಿತ್ರದುರ್ಗದ ಮುರುಘಾಮಠ ಈ ಹಿನ್ನೆಲೆಯಲ್ಲಿ ಕಾಲಕಾಕ್ಕೆ ತಕ್ಕಂತೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ತನ್ನ ಜವಬ್ದಾರಿಯನ್ನು ಮೆರೆಯುತ್ತಾ ಬಂದಿದೆ ಎಂದು ಸ್ಮರಿಸಿದರು.

ಎಸ್ ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಈ ನಾಡಿನ ಶ್ರೇಯಸ್ಸಿಗಾಗಿ ಸೇವೆ ಸಲ್ಲಿಸುವ ಪ್ರತಿಭಾವಂತ ಸಾಧಕರನ್ನ, ಅಷ್ಟೇ ಏಕೆ ಜಗದ್ಗುರುಗಳಂಥವರನ್ನ ರೂಪಿಸಿ ಕೊಡುಗೆಯಾಗಿ ನೀಡಿದ ಕೀರ್ತಿ ಈ ನಮ್ಮ ಬೃಹನ್ಮಠ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿಗೆ ಸಲ್ಲುತ್ತದೆ ಎಂದರು.

ಚರಿತ್ರೆಯಲ್ಲಿ ದಾಖಲಾಗುವ ಕೆಲಸ ಮಾಡಿದ ಈ ಶಿಕ್ಷಣಾಲಯ ಅತ್ಯುತ್ತಮ ಬೋಧಕರನ್ನು ಹೊಂದಿದೆ. ಅಂತಹವರಿಂದ ಅಷ್ಟೇ ಪರಿಣಾಮಕಾರಿ ಹಾಗೂ ಪ್ರಭಾವ ಬೀರುವಂತಹ ಬೋಧನೆಯು ವಿದ್ಯಾರ್ಥಿಗಳಿಗೆ ಸಿಕ್ಕು ಒಳ್ಳೆಯ ಪ್ರಜೆಗಳಾಗಲು ಸಹಕಾರಿಯಾಗಿದೆ. ಈ ಶಾಲೆ ಯಾವುದರಲ್ಲಿಯೂ ಹಿಂದೆ ಬೀಳದೆ ಯಥಾಸ್ಥಿತಿ ಕಾಪಾಡಿಕೊಂಡು ಹೋಗ ಬೇಕು. ಅದಕ್ಕೆ ಇಲ್ಲಿನ ಸಿಬ್ಬಂದಿ ಆದ್ಯತೆ ನೀಡಬೇಕಿದೆ ಎಂದು ಸಲಹೆ ಮಾಡಿದರು.

ಮುರುಘಾಮಠದ ಯೋಜನೆಗಳಲ್ಲಿ ಪರಿಸರ ಕಾಳಜಿಯೂ ಒಂದು. ಅದಕ್ಕೆ ಎಲ್ಲಿಲ್ಲದ ಮಹತ್ವ ಕೊಟ್ಟು ಜನರಲ್ಲಿ ಜಾಗೃತಿ ಮೂಡಿಸುವಂತಹ ಕೆಲಸ ಮಾಡುತ್ತಿದೆ. ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ನುಡಿದ ಶ್ರೀಗಳು ನಾನು ಸೇರಿದಂತೆ ಇಲ್ಲಿ ಸೇರಿರುವ ನಾಲ್ಕಾರು ಜನ ಸ್ವಾಮಿಗಳು ಸಹ ಈ ಶಾಲೆಯ ವಿದ್ಯಾರ್ಥಿಗಳು. ಎಲ್ಲರೂ ಸೇರಿ ಪ್ರಗತಿಗೆ ಆಧ್ಯತೆ ನೀಡೋಣ ಎಂದು ನುಡಿದರು.

ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ನಿಪ್ಪಾಣಿಯ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ತಿಪ್ಪೇರುದ್ರ ಸ್ವಾಮೀಜಿ ಸಮ್ಮುಖ ವಹಿಸಿದ್ದರು.ನಂತರದಲ್ಲಿ ಶ್ರೀ ಮುರುಘಾ ಮಠದ ಪಕ್ಕದಲ್ಲಿ ಇರುವ ಜಗದ್ಗುರು ಜಯವಿಭವ ಮುರುಘರಾಜೇಂದ್ರ ಕಲ್ಪವೃಕ್ಷ ವನದಲ್ಲಿ ವಿವಿಧ ತಳಿಯ ತೋಟಗಾರಿಕಾ ಸಸ್ಯಗಳು ಸೇರಿದಂತೆ ಫಲ ಹಾಗೂ ಪುಷ್ಪಗಳ ಸಸಿ ನೆಡಲಾಯಿತು. ಬೃಹನ್ಮಠ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಆಶಾರಾಣಿ, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪಿ.ಎಂ.ಜಿ ರಾಜೇಶ್, ಪ್ರಿಯದರ್ಶಿನಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮಹಾಂತೇಶ್, ಸಮಾಜಸೇವಕ ಬಸವರಾಜಕಟ್ಟಿ, ನಿವೃತ್ತ ಪ್ರಾಂಶುಪಾಲ ಎಂ.ಎಸ್ ಮೃತ್ಯುಂಜಯ, ವರ್ತಕರಾದ ಶಿವಯೋಗಿ, ಕುಮಾರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.