ಸಾರಾಂಶ
ಚಿತ್ರದುರ್ಗ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿದ ಹೈಕೋರ್ಟ್
ಕನ್ನಡಪ್ರಭ ವಾರ್ತೆ ಚಿತ್ರದುರ್ಗ2ನೇ ಫೋಕ್ಸೋ ಪ್ರಕರಕ್ಕೆ ಸಂಬಂಧಿಸಿದಂತೆ ಸೋಮವಾರ ಅಪರಾಹ್ನ ಬಂಧನಕ್ಕೆ ಒಳಗಾಗಿದ್ದ ಮುರುಘಾಶರಣರಿಗೆ ಸಂಜೆಯೇ ಹೈಕೋರ್ಟ ಬಿಗ್ ರಿಲೀಪ್ ನೀಡಿದೆ. ಬಂಧನಕ್ಕೆ ಆದೇಶ ನೀಡಿದ್ದ ಚಿತ್ರದುರ್ಗ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ ತಡೆ ನೀಡಿದೆ. ಒಂದನೇ ಪೋಕ್ಸೋ ಪ್ರಕರಣದಲ್ಲಿ ಹೈಕೋರ್ಟ್ ಜಾಮೀನು ನೀಡಿದ ಹಿನ್ನೆಲೆ ಕಳೆದ 16 ರಂದು ಮುರುಘಾಶರಣರು ಜೈಲಿನಿಂದ ಬಿಡುಗಡೆಯಾಗಿದ್ದರು. ಆದರೆ ಎರಡನೇ ಪ್ರಕರಣದಲ್ಲಿ ಮತ್ತೆ ಜೈಲಿಗೆ ಹೋಗಬೇಕಾದ ಪ್ರಸಂಗ ಎದುರಾಗಿತ್ತು. ಶರಣರು ಸಂಜೆ 5-45ರ ಸುಮಾರಿಗೆ ಮತ್ತೆ ಜೈಲಿಗೆ ಹೋದರಾದರೂ ಹೈಕೋರ್ಟ್ ತ್ವರಿತ ಸೂಚನೆ ನೀಡಿ ಬಿಡುಗಡೆಗೆ ಆದೇಶಿಸಿದ್ದು, ಸಂಜೆ ಬಿಡುಗಡೆಯಾಗಿದ್ದಾರೆ.
ಎರಡನೇ ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶರಣರು ಬಾಡಿ ವಾರೆಂಟ್ ಮೇಲಿದ್ದರು. ಹಾಗಾಗಿ ಬಾಡಿ ವಾರೆಂಟ್ ರದ್ದು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿಬೇಕೆಂದು ಪ್ರಾಸಿಕ್ಯೂಷನ್ ಪರವಾಗಿ ವಕೀಲ ಎಚ್.ಆರ್.ಜಗದೀಶ್ ವಾದ ಮಂಡಿಸಿದ್ದರು. ಮುರುಘಾಶರಣರು ಪ್ರಭಾವ ಬೀರಿ ಸಾಕ್ಷನಾಶ ಮಾಡುವ ಸಾಧ್ಯತೆ ಇದ್ದು, ಬಂಧನ ವಾರೆಂಟ್ ಗೆ ಮನವಿ ಮಾಡಿದ್ದರು. 1ನೇ ಫೋಕ್ಸೋ ಕೇಸಲ್ಲಿ ಹೈಕೋರ್ಟ್ ನಿಂದ ಷರತ್ತು ಬದ್ಧ ಜಾಮೀನು ಮಂಜೂರಾಗಿದ್ದು, ಮುರುಘಾಶರಣರು ಚಿತ್ರದುರ್ಗ ಜಿಲ್ಲೆ ಪ್ರವೇಶಿಸುವಂತಿಲ್ಲ. ಮತ್ತೆ ಅವರ ಬಂಧನದ ಅಗತ್ಯವಿಲ್ಲ. ಬಂಧನ ವಾರೆಂಟ್ ಹೈಕೋರ್ಟ್ ಆದೇಶ ಉಲ್ಲಂಘನೆ ಆಗುತ್ತದೆಂದು ಮುರುಘಾಶರಣರ ಪರ ವಕೀಲ ಉಮೇಶ ವಾದ ಮಂಡಿಸಿದ್ದರು.ಎರಡೂ ಕಡೆ ವಾದ ಆಲಿಸಿದ ನ್ಯಾಯಾಧೀಶರಾದ ಬಿ.ಕೆ.ಕೋಮಲಾ ನವೆಂಬರ್ 21ರ ಒಳಗಾಗಿ ಮುರುಘಾಶರಣರ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಆದೇಶಿಸಿದ್ದರು. ಬಂಧನ ವಾರೆಂಟ್ ಪಡೆದು ತಕ್ಷಣವೇ ದಾವಣಗೆರೆ ವಿರಕ್ತಮಠದ ಕಡೆ ಹೊರಟ ಚಿತ್ರದುರ್ಗ ಗ್ರಾಮಾಂತರ ಠಾಣೆ ಪಿಐ ಮುದ್ದುರಾಜ್ ಕೆಲವೇ ಗಂಟೆಗಳಲ್ಲಿ ಶರಣರ ಬಂಧಿಸಿ ಚಿತ್ರದುರ್ಗ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಧೀಶರಾದ ಬಿ.ಕೆ.ಕೋಮಲಾ 14 ದಿನಗಳ ನ್ಯಾಯಾಂಗ ಬಂಧನವಿರಿಸಿ ಆದೇಶಿಸಿದರು. ಸಂಜೆ 5-45 ರ ವೇಳೆಗೆ ಮುರುಘಾಶರಣರನ್ನು ಪೊಲೀಸರು ಜೈಲಿಗೆ ಕರೆದೊಯ್ದು ಬಿಟ್ಟು ವಾಪಾಸ್ಸಾದರು.
ಮುರುಘಾಶರಣರ ಬಂಧನಕ್ಕೆ ನ್ಯಾಯಾಲಯ ವಾರೆಂಟ್ ಜಾರಿ ಮಾಡಿದ ಹಿನ್ನೆಲೆ ಸುದ್ದಿಗಾರರೊಂದಿಗೆ ಮಾತನಾಡಿದ ವಕೀಲ ಜಗದೀಶ್, ಎರಡನೇ ಪೋಕ್ಸೋ ಪ್ರಕರಣದಲ್ಲಿ ಮುರುಘಾಶರಣರು ಜಾಮೀನು ಪಡೆದಿಲ್ಲ. ಬಂಧನ ವಾರೆಂಟ್ ಜಾರಿಗೆ ನಾವು ಮನವಿ ಸಲ್ಲಿಸಿದ್ದೆವು. ಮನವಿ ಪುರಸ್ಕರಿಸಿದ ಕೋರ್ಟ್ ಬಂಧನ ವಾರೆಂಟ್ ಜಾರಿಗೊಳಿಸಿದೆ. ವಿಸಿ ಮೂಲಕ ಕೋರ್ಟ್ ಗೆ ಹಾಜರುಪಡಿಸಲು ಬರಲ್ಲವೆಂದು ಕೋರ್ಟ್ ಹೇಳಿದೆ. ಒಂದನೇ ಪೋಕ್ಸೋ ಕೇಸಲ್ಲಿ ಮಾತ್ರ ಮುರುಘಾಶ್ರೀಗೆ ಹೈಕೋರ್ಟ್ ಜಾಮೀನು ನೀಡಿದೆ. ಕೇರಳ ಹೈಕೋರ್ಟ್ ಆದೇಶ ಉಲ್ಲೇಖಿಸಿ ಚಿತ್ರದುರ್ಗ ಕೋರ್ಟ್ ಮುರುಘಾಶ್ರೀ ಬಂಧನಕ್ಕೆ ಆದೇಶಿಸಿದೆ ಎಂದರು.-----------------
ಬಂಧನದ ಬೆನ್ನಲ್ಲೇ ಬಿಡುಗಡೆಗೆ ಆದೇಶಮುರುಘಾಶರಣರ ಸಂಜೆ 5-45 ರ ವೇಳೆಗೆ ಚಿತ್ರದುರ್ಗ ಜೈಲಿಗೆ ಕರೆದೊಯ್ದ ಬೆನ್ನ ಹಿಂದೆಯೇ ಹೈಕೋರ್ಟ್ ಚಿತ್ರದುರ್ಗ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿ ಬಿಡುಗಡೆಗೆ ನಿರ್ದೇಶನ ನೀಡಿದೆ. ಈ ಸಂಬಂಧ ಇ-ಮೇಲ್ ಮೂಲಕ ಚಿತ್ರದುರ್ಗ ಬಂದಿಖಾನೆಗೆ ತನ್ನ ನಿರ್ದೇಶನ ರವಾನಿಸಿದೆ. ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ದಾವಣಗೆರೆಯತ್ತ ಪ್ರಯಾಣ ಬೆಳೆಸಿ ದರು.