ಮುಸಲಾಪೂರದ ರಸ್ತೆ ತೆರವು ಕಾರ್ಯ ಆರಂಭ

| Published : Oct 05 2025, 01:01 AM IST

ಮುಸಲಾಪೂರದ ರಸ್ತೆ ತೆರವು ಕಾರ್ಯ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಇದೀಗ ತೆರವು ಕಾರ್ಯಕ್ಕೆ ಮುಂದಾಗಿದ್ದರಿಂದ ಸರಳ ಚಾಲನೆಗೆ ಅನುಕೂಲ

ಕನಕಗಿರಿ: ತಾಲೂಕು ವ್ಯಾಪ್ತಿಯ ಮುಸಲಾಪುರ ಗ್ರಾಮದಲ್ಲಿ ಹಾದು ಹೋಗಿರುವ ಕನಕಗಿರಿ ಕೊಪ್ಪಳ ಮುಖ್ಯ ರಸ್ತೆ ಒತ್ತುವರಿ ತೆರವು ಕಾರ್ಯ ಎರಡ್ಮೂರು ದಿನಗಳಿಂದ ನಡೆಯುತ್ತಿದೆ.

ಕನಕಗಿರಿಯಿಂದ ಜಿಲ್ಲಾ ಕೇಂದ್ರ ಕೊಪ್ಪಳಕ್ಕೆ ಕಲ್ಪಿಸುವ ಈ ರಸ್ತೆಯು ಒತ್ತುವರಿಯಾಗಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಈಗಾಗಲೇ ಸಂಘಟನೆಗಳು ಹಾಗೂ ಗ್ರಾಮಸ್ಥರು ಮುಸಲಾಪೂರ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿಸುವಂತೆ ಮನವಿ ಸಲ್ಲಿಸಿದ್ದು,ಇದಕ್ಕೆ ಸಚಿವ ತಂಗಡಗಿ ಹೋಬಳಿ ಕೇಂದ್ರ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಈ ಗ್ರಾಮದಲ್ಲಿ ಭೌಗೋಳಿಕ ವಿಸ್ತೀರ್ಣ, ಜನಸಂಖ್ಯೆ, ಹಲವು ಗ್ರಾಮಗಳು, ಎರಡು ರಾಜ್ಯ ಹೆದ್ದಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಪ್ರೌಢ ಶಾಲೆ, ಕರ್ನಾಟಕ ಗ್ರಾಮೀಣ ಬ್ಯಾಂಕ್, ಪ್ರಾ.ಕೃ.ಪ.ಸ.ಸಂಘ, ಗ್ರಾಪಂ ಕಚೇರಿ, ಹಲವು ಖಾಸಗಿ ಬ್ಯಾಂಕುಗಳಿವೆ. ಅಲ್ಲದೇ ಯಥೇಚ್ಛವಾಗಿ ತೋಟಗಾರಿಕೆ ಬೆಳೆ ಹಾಗೂ ಬೀಜೋತ್ಪಾದನಾ ಬೆಳೆ ಬೆಳೆಯುತ್ತಿದ್ದಾರೆ. ಈ ಪ್ರದೇಶ ಹೋಬಳಿ ಕೇಂದ್ರವಾಗಿಸಲು ಎಲ್ಲ ಅರ್ಹತೆಗಳನ್ನು ಒಳಗೊಂಡಿವೆ. ಈ ಹಿನ್ನೆಲೆಯಲ್ಲಿ ಗ್ರಾಪಂ ಕಾರ್ಯಾಲಯದಿಂದ ಗ್ರಾಮದಲ್ಲಿ ಒತ್ತುವರಿಯಾದ ರಸ್ತೆ ತೆರವು ಮಾಡಲಾಗುತ್ತಿದೆ. ರಸ್ತೆಯ ಇಕ್ಕೆಲಗಳಲ್ಲಿ ಇರಿಸಿದ್ದ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿ ಈ ಮೊದಲು ಇದ್ದ ಚರಂಡಿಯವರೆಗೆ ತೆರವು ಕಾರ್ಯ ನಡೆಯುತ್ತಿದೆ. ರಸ್ತೆ ಇಕ್ಕಟ್ಟಾಗಿದ್ದಲ್ಲದೆ ಅಲ್ಲಲ್ಲಿ ತಗ್ಗು ದಿನ್ನೆಗಳು ಬಿದ್ದಿರುವುದರಿಂದ ಗ್ರಾಮ ದಾಟುವವರೆಗೂ ಚಾಲಕರಿಗೆ ದೊಡ್ಡ ಸಮಸ್ಯೆಯಾಗಿತ್ತು. ಇದೀಗ ತೆರವು ಕಾರ್ಯಕ್ಕೆ ಮುಂದಾಗಿದ್ದರಿಂದ ಸರಳ ಚಾಲನೆಗೆ ಅನುಕೂಲವಾಗಲಿದೆ. ಈಗಾಗಲೇ ಒತ್ತುವರಿ ಮಾಡಿಕೊಂಡವರಿಗೆ ಗ್ರಾಪಂ ಕಾರ್ಯಾಲಯದಿಂದ ನೋಟಿಸ್ ಜಾರಿ ಮಾಡಿದ್ದರು.ತೆರವಿಗೆ ಮುಂದಾಗುತ್ತಿದ್ದಂತೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು.

ಸೆ. 24ರಂದು ಸಭೆ ನಡೆಸಿ ಸ್ಥಳೀಯರ ಒಪ್ಪಿಗೆ ಪಡೆದು ತೆರವು ಕಾರ್ಯ ನಡೆಸಲಾಗುತ್ತಿದೆ. ಈ ಹಿಂದೆ ಮುಚ್ಚಿ ಹೋಗಿದ್ದ ಚರಂಡಿಗಳು ಬಯಲಿಗೆ ಬಂದಿದ್ದು, ಮುಂದಿನ ಕಾಮಗಾರಿಗೆ ಮತ್ತು ವಾಹನ ಸವಾರರಿಗೆ ಅನುಕೂಲವಾದಂತಾಗಿದೆ.

ಸಂಘಟನೆಗಳ ಹಾಗೂ ಸ್ಥಳೀಯರ ಅಭಿಪ್ರಾಯದ ಮೇರೆಗೆ ಒತ್ತುವರಿ ತೆರವಿಗೆ ಮುಂದಾಗಿದ್ದೇವೆ.ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮಸ್ಥರ ಸಭೆ ನಡೆಸಿ ಒಪ್ಪಿಗೆ ಪಡೆದು ನಂತರವೇ ತೆರವು ಕಾರ್ಯ ನಡೆಸಲಾಗಿದೆ. ರಸ್ತೆ ಅಭಿವೃದ್ಧಿ ವಿಚಾರವಾಗಿ ಮೇಲಾಧಿಕಾರಿಗಳ ಜತೆ ಚರ್ಚಿಸುತ್ತೇನೆ ಎಂದು ಪಿಡಿಒ ನಾಗೇಶ ಪೂಜಾರ ತಿಳಿಸಿದ್ದಾರೆ.