ಶಾಸ್ತ್ರೀಯ ನೃತ್ಯ ಎನ್ನುವುದು ನಮ್ಮ ದೇಶದ ಬಹಳ ಪುರಾತನವಾದ ಒಂದು ಕಲೆ. ಈ ನಾಟ್ಯ ಕಲೆಯನ್ನು ಆಧುನಿಕ ಕಾಲಘಟ್ಟದಲ್ಲಿ, ಕೃತಕ ಬುದ್ಧಿಮತ್ತೆಯ ಕಾಲಘಟ್ಟದಲ್ಲಿ ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವ ಕೆಲಸವನ್ನು ಮಾಡಬೇಕಿದೆ. ಮಂಡ್ಯ ನೆಲ ಜಾನಪದ ಕಲೆ, ಸಂಗೀತ, ನಾಟಕಗಳಿಗೆ ತವರೂರು. ಸಾಂಸ್ಕೃತಿಕವಾಗಿ ಜಿಲ್ಲೆ ಮತ್ತಷ್ಟು ಬೆಳವಣಿಗೆ ಸಾಧಿಸಲಿ.

ಕನ್ನಡಪ್ರಭ ವಾರ್ತೆ ಮಂಡ್ಯ

ವಿದ್ಯಾರ್ಥಿಗಳು ಪಠ್ಯ ವಿಷಯದ ಜೊತೆಗೆ ಸಂಗೀತ, ನೃತ್ಯ, ಕ್ರೀಡಾ ಚಟುವಟಿಕೆಯಲ್ಲೂ ಆಸಕ್ತಿ ವಹಿಸಿದರೆ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಸಮಿತಿಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ತಿಳಿಸಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಗುರುದೇವ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ವತಿಯಿಂದ ನಡೆದ ಗುರುದೇವೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಇಂದು ವಿದ್ಯೆಯ ಜೊತೆಗೆ ಬದುಕಿನ ಪಾಠವನ್ನೂ ಹೇಳಿಕೊಡುವ ಅಗತ್ಯವಿದೆ. ಸಂಗೀತ, ಕಲೆ, ನೃತ್ಯ, ಕ್ರೀಡೆ ಹೀಗೆ ಯಾವುದಾದರೊಂದು ಕ್ಷೇತ್ರದಲ್ಲಿ ಪ್ರತಿಭೆ ಇದ್ದರೆ ಮಾತ್ರ ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯನ್ನು ಎದುರಿಸಲು ಸಾಧ್ಯ ಎಂದರು.

ಶಾಸ್ತ್ರೀಯ ನೃತ್ಯ ಎನ್ನುವುದು ನಮ್ಮ ದೇಶದ ಬಹಳ ಪುರಾತನವಾದ ಒಂದು ಕಲೆ. ಈ ನಾಟ್ಯ ಕಲೆಯನ್ನು ಆಧುನಿಕ ಕಾಲಘಟ್ಟದಲ್ಲಿ, ಕೃತಕ ಬುದ್ಧಿಮತ್ತೆಯ ಕಾಲಘಟ್ಟದಲ್ಲಿ ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವ ಕೆಲಸವನ್ನು ಮಾಡಬೇಕಿದೆ. ಮಂಡ್ಯ ನೆಲ ಜಾನಪದ ಕಲೆ, ಸಂಗೀತ, ನಾಟಕಗಳಿಗೆ ತವರೂರು. ಸಾಂಸ್ಕೃತಿಕವಾಗಿ ಜಿಲ್ಲೆ ಮತ್ತಷ್ಟು ಬೆಳವಣಿಗೆ ಸಾಧಿಸಲಿ ಎಂದು ಆಶಿಸಿದರು.

ಚಿನ್ಮಯ ಮಿಷನ್‌ನ ಶ್ರೀಸ್ವಾಮಿ ಆದಿತ್ಯಾನಂದ ಸ್ವಾಮೀಜಿ ಮಾತನಾಡಿ, ಭರತಮುನಿ ‘ನಾಟ್ಯಶಾಸ್ತ್ರ’ವನ್ನು ‘ಪಂಚಮ ವೇದ’ ಎಂದು ಕರೆದಿದ್ದಾನೆ. ಋಗ್ವೇದದಿಂದ ಪಠ್ಯ, ಯಜುರ್ವೇದದಿಂದ ಅಭಿನಯ, ಸಾಮವೇದದಿಂದ ಸಂಗೀತ ಹಾಗೂ ಅಥರ್ವಣ ವೇದದಿಂದ ರಸವನ್ನು ತೆಗೆದುಕೊಂಡು ಪಂಚಮ ವೇದ ಅನ್ನುವ ನಾಟ್ಯವೇದವನ್ನು ಸೃಷ್ಟಿ ಮಾಡಿದ ಎಂದರು.

ಆನಂದ ಹೊಂದುವುದಕ್ಕೆ ನಾನಾ ರೀತಿಯ ಮಾರ್ಗಗಳಿವೆ. ಕೆಲವರಿಗೆ ಪುಸ್ತಕವನ್ನು ಓದಿದರೆ ಆನಂದ ಸಿಗುತ್ತೆ, ಮತ್ತೆ ಕೆಲವರಿಗೆ ನಾಟ್ಯ ಮಾಡಿದರೆ ಆನಂದ ಸಿಗುತ್ತೆ, ಇನ್ನೂ ಕೆಲವರಿಗೆ ಸಂಗೀತವನ್ನು ಹಾಡಿದರೆ ಆನಂದ ಸಿಗುತ್ತೆ, ಸಂಗೀತವನ್ನು ಕೇಳಿವರಿಗೂ ಆನಂದ ಸಿಗುತ್ತೆ. ಇದೆಲ್ಲವೂ ‘ಆನಂದ ಮೀಮಾಂಸಾ’. ನಾವು ಆನಂದವನ್ನು ನಾವು ಹೊಂದುವ ರೀತಿ ಎಂದು ಹೇಳಿದರು.

ಸಂಗೀತದಲ್ಲಿ ಹಾಡುಗಳ ಮೂಲಕ ಕಥೆಯನ್ನು ವಿವರಿಸುತ್ತಾರೆ. ಹಾಡುಗಳ ಮೂಲಕ ನೀತಿಯನ್ನು ತಿಳಿಸಿಕೊಡುತ್ತಾರೆ. ಪ್ರತಿಯೊಂದು ಅವರವರ ಆತ್ಮಸಂತೋಷಕ್ಕೋಸ್ಕರ ಅವರು ಮಾಡಿಕೊಂಡಿದ್ದು. ಕಲಿಯುವಿಕೆಗೆ ಕೊನೆ ಇಲ್ಲ. ಅದು ನಿರಂತರವಾಗಿರುತ್ತದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕುಮಾರ್ ಕೊಪ್ಪ ಮಾತನಾಡಿ, ಕಲೆ, ಸಾಹಿತ್ಯ, ರಂಗಭೂಮಿ ಈ ಎಲ್ಲದಕ್ಕೂ ತಾಯಿ ಬೇರು ಜಾನಪದ. ಆದರೆ, ಇಡೀ ವಿಶ್ವಕ್ಕೆ ತನ್ನ ಪಾರಂಪರಿಕ ಇತಿಹಾಸವನ್ನು ಸೃಷ್ಟಿಸಿ ಶ್ರೀಮಂತಿಕೆಯನ್ನು ಗಳಿಸಿದ್ದು ಶಾಸ್ತ್ರೀಯ ಸಂಗೀತ ಮತ್ತು ಶಾಸ್ತ್ರೀಯ ನೃತ್ಯ. ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆ ನಾಗರಿಕತೆಯ ಸೊಂಕು ನಮ್ಮ ಮೇಲೆ ಬಿದ್ದಂತೆ ನಾವು ನಮ್ಮ ಪಾರಂಪರಿಕ ಇತಿಹಾಸವನ್ನು ಮರೆತು ಮೊಬೈಲ್‌ಗಷ್ಟೇ ಸೀಮಿತವಾಗಿದ್ದೇವೆ ಎಂದು ವಿಷಾದಿಸಿದರು.

ಪ್ರಸ್ತುತ ಶಾಸ್ತ್ರೀಯ ಸಂಗೀತ ಅಥವಾ ಒಂದು ಜಾನಪದ ನೃತ್ಯೋತ್ಸವ, ಜಾನಪದ ಸಮ್ಮೇಳನದಲ್ಲಿ ಜನರ ಆಸಕ್ತಿ, ಭಾಗವಹಿಸುವಿಕೆ ಕಡಿಮೆಯಾಗಿದೆ. ಈ ಕಾಲಘಟ್ಟದ ಯುವಜನರು, ವಿದ್ಯಾರ್ಥಿಗಳು ಏನಾದರೂ ಮಾಡಿ ಶಾಸ್ತ್ರೀಯ ಸಂಗೀತವನ್ನು ಪರಿಚಯಿಸಬೇಕು, ಉಣಬಡಿಸಬೇಕು, ಅದನ್ನು ಮುಂದಿನ ತಲೆಮಾರಿಗೆ ಒಯ್ಯಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹ ಕೆ.ವೇಣುಗೋಪಾಲ್ ಅವರಿಗೆ ಗುರುದೇವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗುರುದೇವ ಅಕಾಡೆಮಿಯ ಹಿರಿಯ-ಕಿರಿಯ ಕಲಾವಿದರಿಂದ ಗುರುದೇವ ವರ್ಣೋತ್ಸವ ನೃತ್ಯ ಕಾರ್ಯಕ್ರಮ ಎಲ್ಲರನ್ನೂ ರಂಜಿಸಿತು.

ಗುರುದೇವ ಅಕಾಡೆಮಿಯ ನಿರ್ದೇಶಕಿ ಡಾ.ಚೇತನಾ ರಾಧಾಕೃಷ್ಣ, ವ್ಯವಸ್ಥಾಪಕ ನಿರ್ದೇಶಕ ಪಿ.ಎಂ.ರಾಧಾಕೃಷ್ಣ ಇದ್ದರು.