ಸಂಗೀತ ಕೇಳುವುದರಿಂದ ಮನಸ್ಸಿಗೆ ಆಹ್ಲಾದ ಸಿಗುವ ಜೊತೆಗೆ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟರು.

ಸಾಗರ: ಸಂಗೀತ ಕೇಳುವುದರಿಂದ ಮನಸ್ಸಿಗೆ ಆಹ್ಲಾದ ಸಿಗುವ ಜೊತೆಗೆ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ನಗರಸಭೆ ರಂಗಮಂದಿರದಲ್ಲಿ ವೇದನಾದ ಪ್ರತಿಷ್ಠಾನ ಮತ್ತು ಸದ್ಗುರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯದಿಂದ ಆಯೋಜಿಸಿರುವ ೨೬ನೇ ವರ್ಷದ ಮೂರು ದಿನಗಳ ರಾಷ್ಟ್ರೀಯ ಸಂಗೀತೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಗೀತ ಸಂಸ್ಕೃತಿ ಬೆಳೆಯಬೇಕು ಎಂದು ಆಶಿಸಿದರು.ಕಳೆದ ೨೬ ವರ್ಷಗಳಿಂದ ವಸುಧಾ ಶರ್ಮ ರಾಷ್ಟ್ರೀಯ ಸಂಗೀತೋತ್ಸವ ನಡೆಸುವ ಮೂಲಕ ಸಂಗೀತ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಸಂಗೀತದ ಮೂಲಕ ಸಮಾಜಕ್ಕೆ ಹೊಸ ಶಕ್ತಿಯನ್ನು ಅವರು ತಂದು ಕೊಟ್ಟಿದ್ದಾರೆ. ಹೆಸರಾಂತ ಸಂಗೀತ ಕಲಾವಿದರನ್ನು ಕರೆಸಿ ಸಂಗಿತೋತ್ಸವ ನಡೆಸುವುದು ಸವಾಲಿನ ಕೆಲಸ. ಅದನ್ನು ವಸುಧಾ ಶರ್ಮ ತಮ್ಮ ತಂಡದ ಜೊತೆ ಮಾಡುತ್ತಿರುವುದು ಅಭಿನಂದಾರ್ಹ ಕೆಲಸ ಎಂದರು.ನಾದಾಂತರಂಗ ಪತ್ರಿಕೆ ಬಿಡುಗಡೆ ಮಾಡಿದ ಸಾಹಿತಿ ರಾಧಾಕೃಷ್ಣ ಬಂದಗದ್ದೆ ಮಾತನಾಡಿ, ನಾದಾಂತರಂಗ ಸಂಗೀತಕ್ಕಾಗಿಯೇ ಮೀಸಲಿರುವ ಮೊದಲ ಪತ್ರಿಕೆಯಾಗಿದೆ. ಬೇರೆಬೇರೆ ಕ್ಷೇತ್ರಕ್ಕೆ ಪತ್ರಿಕೆಗಳು ಇದ್ದಂತೆ ಸಂಗೀತ ಕ್ಷೇತ್ರದ ಸುದ್ದಿಗಳನ್ನು ಬಿತ್ತರಿಸಲು ಒಂದು ಪತ್ರಿಕೆಯ ಅಗತ್ಯತೆ ಇತ್ತು. ಅದು ವಸುಧಾ ಶರ್ಮ ಸಂಪಾದಕತ್ವದಲ್ಲಿ ನೆರವೇರುತ್ತಿರುವುದು ಸಂತೋಷದ ಸಂಗತಿ ಎಂದರು.ವಿದುಷಿ ವಸುಧಾ ಶರ್ಮ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಎಸ್.ಶಂಭುಭಟ್ ಕಡತೋಕ, ಪಂ.ಮೋಹನ ಹೆಗಡೆ ಹುಣಸೆಕೊಪ್ಪ, ನರಸಿಂಹಮೂರ್ತಿ ಹಳೆಇಕ್ಕೇರಿ ಇನ್ನಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸುಬ್ಬಣ್ಣ ಮಂಗಳೂರು, ಕೆ.ಪಿ.ಹೆಗಡೆ ಶಿರಸಿ, ಜ್ಯೋತಿ ಶಶಿಧರ್, ಚೇತನ ರಾಜೀವರಾವ್, ರಾಜೀವ ರಾವ್, ಮಂಜುನಾಥ ಮೋಟಿನಸರ, ನಿಖಿಲ್.ವಿ.ಕುಂಸಿ, ಸಂತೋಷ್ ಹೆಗಡೆ ಕಲ್ಮನೆ, ಶೌರಿ ಶಾನಭೋಗ್, ವಿಶ್ವಾಸ್ ಬೆಂಗಳೂರು ಅವರನ್ನು ಸನ್ಮಾನಿಸಲಾಯಿತು. ನಂತರ ವಿದುಷಿ ವೈ.ಜಿ.ಶ್ರೀಲತಾ ನಿಕ್ಷಿತ್ ಪುತ್ತೂರು ಅವರಿಂದ ಸ್ವರ ಲಯ ಲಹರಿ ಕಾರ್ಯಕ್ರಮ ಜರುಗಿತು. ಚೆನೈನ ಡಾ.ಪತ್ರಿ ಸತೀಶ್ ಕುಮಾರ್ ಮೃದಂಗ, ಡಾ.ಸುರೇಶ್ ವೈದ್ಯನಾಥನ್ ಘಟಂನಲ್ಲಿ ಸಾಥ್ ನೀಡಿದರು.