ಸಂಗೀತಕ್ಕೆ ಸಣ್ಣವರು, ದೊಡ್ಡವರು ಎಂಬ ತಾರತಮ್ಯವಿಲ್ಲ: ದೊಡ್ಡಯ್ಯ ಗವಾಯಿ

| Published : Dec 18 2024, 12:46 AM IST

ಸಂಗೀತಕ್ಕೆ ಸಣ್ಣವರು, ದೊಡ್ಡವರು ಎಂಬ ತಾರತಮ್ಯವಿಲ್ಲ: ದೊಡ್ಡಯ್ಯ ಗವಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಮಂಗಳವಾರ ರಂಗ ಸಂಗೀತೋಪಾಸಕ ವಿರೂಪಾಕ್ಷಪ್ಪ ಇಟಗಿ ಅವರ ಕುರಿತು ಪುಸ್ತಕ ಬಿಡುಗಡೆ ಹಾಗೂ ಸಂಗೀತ ಮತ್ತು ನೃತ್ಯ ವಿಭಾಗದ ಹಳೆಯ ವಿದ್ಯಾರ್ಥಿಗಳ ಹಾಗೂ ಪಾಲಕರ ಸಮಾವೇಶ ನಡೆಯಿತು.

ಹೊಸಪೇಟೆ: ಸಂಗೀತಕ್ಕೆ ವಯಸ್ಸಿನ ನಿರ್ಬಂಧವಿಲ್ಲ, ಸಣ್ಣವರು, ದೊಡ್ಡವರು ಎಂಬ ತಾರತಮ್ಯವಿಲ್ಲ ಎಂದು ಬಳ್ಳಾರಿಯ ಹಿಂದೂಸ್ತಾನಿ ಸಂಗೀತಗಾರ ದೊಡ್ಡಯ್ಯ ಗವಾಯಿ ಹೇಳಿದರು.

ಕನ್ನಡ ವಿಶ್ವವಿದ್ಯಾಲಯ ಸಂಗೀತ ಮತ್ತು ನೃತ್ಯ ವಿಭಾಗ ಹಾಗೂ ಪಂ. ವಿರೂಪಾಕ್ಷಪ್ಪ ಇಟಗಿ ಶಿಷ್ಯ ಬಳಗದ ಸಹಯೋಗದಲ್ಲಿ ಮಂಟಪ ಸಭಾಂಗಣದಲ್ಲಿ ಮಂಗಳವಾರ ರಂಗ ಸಂಗೀತೋಪಾಸಕ ವಿರೂಪಾಕ್ಷಪ್ಪ ಇಟಗಿ ಅವರ ಕುರಿತು ಪುಸ್ತಕ ಬಿಡುಗಡೆ ಹಾಗೂ ಸಂಗೀತ ಮತ್ತು ನೃತ್ಯ ವಿಭಾಗದ ಹಳೆಯ ವಿದ್ಯಾರ್ಥಿಗಳ ಹಾಗೂ ಪಾಲಕರ ಸಮಾವೇಶವನ್ನು ತಂಬೂರಿ ಮೀಟಿ ಉದ್ಘಾಟಿಸಿ ಮಾತನಾಡಿದರು.

ಕನ್ನಡ ವಿಶ್ವವಿದ್ಯಾಲಯದ ಅಧ್ಯಯನಾಂಗದ ನಿರ್ದೇಶಕ ಡಾ. ಅಮರೇಶ ಯತಗಲ್ ಮಾತನಾಡಿ, ರಂಗ ಸಂಗೀತೋಪಾಸಕ ವಿರೂಪಾಕ್ಷಪ್ಪ ಇಟಗಿ ಕುರಿತು ಪುಸ್ತಕವು ಮುಂದಿನ ತಲೆಮಾರಿಗೆ ದಾರಿದೀಪವಾಗಿದೆ. ವಿರೂಪಾಕ್ಷಪ್ಪ ಇಟಗಿ ಅವರು ಶಾಲೆಗೇ ಹೋಗದ ಸಾಧಕ ಏಕಲವ್ಯನಂತೆ ಸಂಗೀತೋಪಾಸನೆ ಮಾಡಿದ್ದಾರೆ. ಸಂಗೀತ ಮತ್ತು ನೃತ್ಯ ವಿಭಾಗವು ಹೊಸ ಹೊಸ ಪ್ರಯೋಗಗಳನ್ನು ಮಾಡಿಕೊಂಡು ಬರುತ್ತಿದೆ. ಸಮಾಜಕ್ಕೂ ಮತ್ತು ಕನ್ನಡ ವಿಶ್ವವಿದ್ಯಾಲಯಕ್ಕೂ ಸೇತುವೆ ಕಟ್ಟುವ ಕೆಲಸವನ್ನು ಪಾಲಕರ ಸಮಾವೇಶದ ಮೂಲಕ ಮಾಡುತ್ತಿದೆ ಎಂದು ತಿಳಿಸಿದರು.

ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಮಾತನಾಡಿ, ವಿರೂಪಾಕ್ಷಪ್ಪ ಇಟಗಿ ಅವರು ನಮ್ಮಲ್ಲೆ ಇರುವ ಅಮೂಲ್ಯ ರತ್ನ. ಇಂದಿನ ಕಾಲ ಪ್ರಚಾರ ಕಾಲವಾಗಿದೆ. ಎಷ್ಟೋ ಉತ್ತಮ ಕಲಾವಿದರು ನೇಪಥ್ಯಕ್ಕೆ ಸರಿದುಹೋಗುತ್ತಾರೆ. ಇಪ್ಪತ್ತು ವರ್ಷಗಳಿಂದ ಕನ್ನಡ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ವಿರೂಪಾಕ್ಷಪ್ಪ ಅವರು ಕನ್ನಡ ವಿಶ್ವವಿದ್ಯಾಲಯಕ್ಕೆ ವರದಾನವಾಗಿದ್ದಾರೆ. ವಿದ್ಯೆ ಕಲಿಸಿದ ಗುರುವಿಗೆ ನಮ್ಮ ಆವರಣದಲ್ಲಿ ವಿದ್ಯಾರ್ಥಿಗಳು ಸನ್ಮಾನ ಮಾಡಿರುವುದು ಅತ್ಯುತ್ತಮ ಕೆಲಸ. ಕಲೆ ಎಲ್ಲರಿಗೂ ಸುಲಭವಾಗಿ ಒಲಿಯುವುದಿಲ್ಲ. ಎಲ್ಲರೂ ಸಂಗೀತಗಾರರಾಗಬಹುದು. ಆದರೆ ಎಲ್ಲರೂ ಸಾಧಕರಾಗಲೂ ಸಾಧ್ಯವಿಲ್ಲ. ನೀವೆಲ್ಲ ಸಾಧಕರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥ ಡಾ. ವೀರೇಶ ಬಡಿಗೇರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಷಾ ನಿಕಾಯದ ಡೀನ್‌ ಡಾ.ಎಫ್.ಟಿ. ಹಳ್ಳಿಕೇರಿ ಮತ್ತಿತರರಿದ್ದರು.

ನಿವೃತ್ತ ಎಎಸ್‌ಐ ಶಾಂತಪ್ಪ ಬೆಲ್ಲದ, ಮಾರುತಿರಾವ್ ಅನಿಸಿಕೆಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳಾದ ರವಿವರ್ಮ ಹಾಗೂ ವೀರೇಶ ದಳವಾಯಿ, ಹರೀಶ್ ಭಂಡಾರಿ, ಕಾರ್ಯಕ್ರಮದ ಸಂಚಾಲಕ ಗುಂಡಿ ಭರತ್ ನಿರ್ವಹಿಸಿದರು. ವಿಭಾಗದ ವಿದ್ಯಾರ್ಥಿ ಅಂಧರ ಬಾಳಿನ ಸುಂದರ ಚೆಂದಿರ ಗದುಗಿನ ಗವಾಯಿ ಗಿರಿಶಿಖರ ಎಂದು ಭಾವಪೂರ್ಣವಾಗಿ ಹಾಡಿದರು.