ಸಾರಾಂಶ
ಸುಧೀಂದ್ರ ಅವರು ಹಾಡುಗಳ ಹಿನ್ನೆಲೆಯವನ್ನು ವಿವರಿಸಿ, ಕಾರ್ಯಕ್ರಮ ನಿರೂಪಿಸಿದರು
ಕನ್ನಡಪ್ರಭ ವಾರ್ತೆ ಮೈಸೂರು
ಗಾಯಕ ರಾಘವೇಂದ್ರ ರತ್ನಾಕರ್ ಅವರು ಸಂಗೀತ ಸಾಮ್ರಾಟ್ ಮಹಮ್ಮದ್ ರಫೀ ಅವರ ಸ್ಮರಣಾರ್ಥ ಏರ್ಪಡಿಸಿದ್ದ ಹಿಂದಿ ಚಲನಚಿತ್ರಗೀತೆಗಳ ಗಾಯನವು ಜೆಎಲ್‌ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾದಲ್ಲಿ ಬುಧವಾರ ನಡೆಯಿತು.ಸೋರಟ್ ಅಶ್ವತ್ಥ್, ಜ್ಯೋತಿ ಅವರ ಸಂಬಂಧಿಕರೂ ಚಲನಚಿತ್ರ ಹಾಸ್ಯ ನಟ ರತ್ನಾಕರ್ ಅವರ ಪುತ್ರರಾದ ರಾಘವೇಂದ್ರ ರತ್ನಾಕರ್, ಪ್ರೀತಂ ಹಾಗೂ ಶ್ರೇಷ್ಠ ಆರ್. ರಾಘ್ ಅವರು ರಫೀ ಹಾಡಿರುವ ಹದಿನೇಳು ಅತ್ಯುತ್ತಮ ಗೀತೆಗಳನ್ನು ಪ್ರಸ್ತುತಪಡಿಸಿದರು. ರಾಘವೇಂದ್ರ ರತ್ನಾಕರ್ ಅವರು ಚಿಕ್ಕಂದಿನಿಂದಲೂ ಮಹಮ್ಮದ್ ರಫೀ ಅವರ ಅಭಿಮಾನಿ. ಸದಾ ರಫೀ ಅವರು ಹಾಡಿರುವ ಗೀತೆಗಳ ಗಾಯನವನ್ನೇ ಏರ್ಪಡಿಸುತ್ತಾ, ಜೂನಿಯರ್ ಮಹಮ್ಮದ್ ರಫೀ ಎಂದೇ ಪ್ರಸಿದ್ಧರಾಗಿದ್ದಾರೆ.ಸುಧೀಂದ್ರ ಅವರು ಹಾಡುಗಳ ಹಿನ್ನೆಲೆಯವನ್ನು ವಿವರಿಸಿ, ಕಾರ್ಯಕ್ರಮ ನಿರೂಪಿಸಿದರು. ಮಹಮ್ಮದ್ ರಫೀ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಡಾ. ವೈ.ಡಿ. ರಾಜಣ್ಣ, ಎಂ.ಚಂದ್ರಶೇಖರ್, ಹುಣಸೂರು ತಾ. ಕಸಾಪ ಮಾಜಿ ಅಧ್ಯಕ್ಷ ಸಾಯಿನಾಥ್ ಮೊದಲಾದವರು ಭಾಗವಹಿಸಿದ್ದರು.