ಕನ್ನಡಪ್ರಭ ವಾರ್ತೆ ಕುಮಟಾ
ತಾಲೂಕಿನ ಹೊಳೆಗದ್ದೆಯ ಶಾಂತಿಕಾ ಪರಮೇಶ್ವರೀ ದೇವಸ್ಥಾನದಲ್ಲಿ ಗೋಕರ್ಣದ ಅಶೋಕೆಯ ಸ್ವರಾತ್ಮ ಗುರುಕುಲಂ ಹಾಗೂ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠಂ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಸ್ವರಾರ್ಪಣ ಸಂಗೀತೋತ್ಸವ ಕಾರ್ಯಕ್ರಮವು ಸಂಗೀತಾಸಕ್ತರನ್ನು ಮುದಗೊಳಿಸಿತು.ಕಾರ್ಯಕ್ರಮ ಒಗ್ಗೂಡಿ ಉದ್ಘಾಟಿಸಿದ ಜೈರಾಮ ಭಟ್ಟ ಗುಡಬಳ್ಳಿ, ಅನಂತರಾಮ ಭಟ್ಟ ಬೆತ್ತಗೇರಿ, ಮಂಜುನಾಥ ಭಟ್ಟ ಸುವರ್ಣಗದ್ದೆ ಮಾತನಾಡಿ, ಸಂಗೀತವು ಕೇವಲ ಮನರಂಜನೆಯ ಸಾಧನವಲ್ಲ, ಅದು ಮನಸ್ಸಿನ ಪರಿಶುದ್ಧತೆಗೆ, ಭಕ್ತಿ ಬೆಳವಣಿಗೆಗೆ ಹಾಗೂ ಭಾರತೀಯ ಸಂಸ್ಕೃತಿಯ ಸಂರಕ್ಷಣೆಗೆ ಪೂರಕವಾದ ದೈವಿಕ ಸಾಧನೆಯಾಗಿದೆ. ಇಂತಹ ಸಂಗೀತೋತ್ಸವಗಳು ಯುವ ಕಲಾವಿದರಿಗೆ ವೇದಿಕೆ ಒದಗಿಸುವುದರ ಜೊತೆಗೆ ಶಾಸ್ತ್ರೀಯ ಸಂಗೀತದ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ತರ ಕಾರ್ಯ ಮಾಡುತ್ತವೆ ಎಂದರು.
ವೇದಿಕೆಯಲ್ಲಿ ಡಾ. ಹರೀಶ ಹೆಗಡೆ, ಎಸ್.ವಿ. ಹೆಗಡೆ ಭದ್ರನ್, ಶ್ರೀಧರ ಭಟ್ಟ ಗುಡಬಳ್ಳಿ, ನಾಗರಾಜ ಜೋಷಿ ಹಾಗೂ ಕೃಷ್ಣಾನಂದ ಭಟ್ಟ ಉಪಸ್ಥಿತರಿದ್ದು ಸಂಗೀತ ಸೇವೆಯ ಮಹತ್ವ ವಿವರಿಸಿದರು.ಬೆಳಗ್ಗೆಯಿಂದ ರಾತ್ರಿವರೆಗೆ ನಿರಂತರವಾಗಿ ವೈವಿಧ್ಯಮಯ ಸಂಗೀತ ಪ್ರಸ್ತುತಿ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಖ್ಯಾತ ಹಾಗೂ ಉದಯೋನ್ಮುಖ ಕಲಾವಿದರು ತಮ್ಮ ಸುಮಧುರ ಗಾಯನದ ಮೂಲಕ ಶ್ರೋತೃಗಳನ್ನು ರಂಜಿಸಿದರು. ದೇವಸ್ಥಾನದ ಭಕ್ತಿಮಯ ವಾತಾವರಣದಲ್ಲಿ ಮೂಡಿಬಂದ ಕೀರ್ತನೆಗಳು, ದಾಸಸಾಹಿತ್ಯ, ಭಕ್ತಿಗೀತೆಗಳು ಹಾಗೂ ಶಾಸ್ತ್ರೀಯ ಸಂಗೀತದ ವಿವಿಧ ಪ್ರಕಾರಗಳು ಸಂಗೀತಾಸಕ್ತರಿಗೆ ಅಪೂರ್ವ ಅನುಭವ ನೀಡಿದವು.
ಗಾಯನ ವಿಭಾಗದಲ್ಲಿ ಸುಧಾಮ ಭಾಗ್ವತ್ ಕನಕನಹಳ್ಳಿ, ಸುಸ್ವರ ಹೆಗಡೆ ಗೋಕರ್ಣ, ಆದ್ಯಾ ನಾಯ್ಕ ತದಡಿ, ಕವಿತಾ ಹೆಗಡೆ ಗೋಕರ್ಣ, ಸಂಧ್ಯಾ ಹೆಗಡೆ ಕೂಜಳ್ಳಿ, ಗೀತಾ ಭಾಗ್ವತ್, ಗಣೇಶ ವಾರದ ಪೂಣಾ, ವಿಶಾಲ ಕಟ್ಟಿ ವಿಜಯಪುರ, ಸಾಕ್ಷಿ ಹಿರೇಮಠ ವಿಜಯಪುರ, ಶ್ರೀಹರಿ ಕುಲಕರ್ಣಿ ಬೆಂಗಳೂರು, ವಿಶ್ವೇಶ್ವರ ಭಟ್ ಖರ್ವಾ, ಡಾ. ಹರೀಶ ಹೆಗಡೆ ಗೋಕರ್ಣ ಹಾಗೂ ಸ್ಥಳೀಯ ಕಲಾವಿದರು ಸಂಗೀತ ಸೇವೆ ಸಲ್ಲಿಸಿದರು.
ಹಾರ್ಮೋನಿಯಂನಲ್ಲಿ ಶಂಭು ಭಟ್ ಕಬ್ರೆ, ಶಶಿಕಿರಣ ಮಣಿಪಾಲ, ಡಾ. ಹರೀಶ ಹೆಗಡೆ ಗೋಕರ್ಣ, ಶಿವರಾಮ ಭಾಗ್ವತ್ ಕನಕನಹಳ್ಳಿ, ಗಣೇಶ ವಾರದ ಪೂಣಾ ಜತೆಯಾದರು. ತಬಲಾದಲ್ಲಿ ಶೇಷಾದ್ರಿ ಅಯ್ಯಂಗಾರ್ ಹೊನ್ನಾವರ, ರಾಘವೇಂದ್ರ ಭಟ್ ಉಡುಪಿ, ಶಶಿಕಿರಣ ಮಣಿಪಾಲ, ಶ್ರೀನಿಧಿ ಕುಲಕರ್ಣಿ ವಿಜಯಪುರ ಸಾಥ್ ನೀಡಿದರು. ಕಾರ್ಯಕ್ರಮವನ್ನು ವೆಂಕಟಾಚಲ ಹಾಗೂ ಡಾ. ದಯಾನಂದ ಭಟ್ಟ ನಿರ್ವಹಿಸಿದರು.