22ರಿಂದ ಬೇಕಲ ಅಂತಾರಾಷ್ಟ್ರೀಯ ಬೀಚ್ ಉತ್ಸವ

| Published : Dec 18 2023, 02:00 AM IST

ಸಾರಾಂಶ

ಗಡಿನಾಡು ಕಾಸರಗೋಡಿನ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಬೇಕಲ್‌ ಬೀಚ್‌ ಪಾರ್ಕ್‌ನಲ್ಲಿ 2ನೇ ವರ್ಷದ ಬೇಕಲ ಅಂತಾರಾಷ್ಟ್ರೀಯ ಬೀಚ್ ಉತ್ಸವವನ್ನು ಡಿ.22ರಿಂದ 31ರವರೆಗೆ ಕೇರಳ ಸರ್ಕಾರ ಆಯೋಜಿಸಿದೆ. ಶಾಸಕ ಉತ್ಸವದ ಸಂಘಟಕ ಸಿ.ಎಚ್. ಕುಂಞಂಬು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಗಡಿನಾಡು ಕಾಸರಗೋಡಿನ ಜಗತ್ಪ್ರಸಿದ್ಧ ಪ್ರವಾಸಿ ತಾಣ ಬೇಕಲ್‌ ಬೀಚ್‌ ಪಾರ್ಕ್‌ನಲ್ಲಿ ಕೇರಳ ಸರ್ಕಾರದ ವತಿಯಿಂದ 2ನೇ ವರ್ಷದ ಬೇಕಲ ಅಂತಾರಾಷ್ಟ್ರೀಯ ಬೀಚ್ ಉತ್ಸವ ಡಿ.22ರಿಂದ 31ರವರೆಗೆ ನಡೆಯಲಿದೆ.

ಈ ಕುರಿತು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಉದುಮ ಕ್ಷೇತ್ರದ ಶಾಸಕ ಹಾಗೂ ಉತ್ಸವದ ಸಂಘಟಕ ಸಿ.ಎಚ್. ಕುಂಞಂಬು, ಕಳೆದ ವರ್ಷ ಮೊದಲ ಬೀಚ್‌ ಉತ್ಸವದಲ್ಲಿ 2 ಲಕ್ಷ ಪ್ರವಾಸಿಗರನ್ನು ನಿರೀಕ್ಷೆ ಮಾಡಿದ್ದರೆ, 10 ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿ ದಾಖಲೆ ನಿರ್ಮಾಣವಾಗಿತ್ತು. ಈ ಬಾರಿ ಇನ್ನಷ್ಟು ಹೆಚ್ಚು ಜನರ ನಿರೀಕ್ಷೆಯಲ್ಲಿದ್ದು, ಸುಸಜ್ಜಿತ ವ್ಯವಸ್ಥೆ ಮಾಡಲಾಗಿದೆ. ಇದು ಕೇರಳ ಪ್ರವಾಸೋದ್ಯಮ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಲಿದೆ. ಕೇರಳ ವಿಧಾನಸಭೆ ಸ್ಪೀಕರ್ ಎ.ಎನ್. ಶಂಸೀರ್ ಡಿ.22ರಂದು ಸಂಜೆ 5.30ಕ್ಕೆ ಉತ್ಸವ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ವೈವಿಧ್ಯಮಯ ಕಾರ್ಯಕ್ರಮಗಳು:

ಬೆಳಗ್ಗೆ ಬೇಕಲ ಬೀಚ್ ಪಾರ್ಕ್‌ಗೆ ಪ್ರವೇಶಿಸಿದವರು ರಾತ್ರಿಯವರೆಗೆ ವಿವಿಧ ಕಾರ್ಯಕ್ರಮಗಳನ್ನು ಆನಂದಿಸುವ ರೀತಿಯಲ್ಲಿ ಮೇಳವನ್ನು ಆಯೋಜಿಸಲಾಗಿದೆ. ಕಲಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲದೆ, ಬೀಚ್ ಪಾರ್ಕ್‌ನಲ್ಲಿ ಶೈಕ್ಷಣಿಕ, ಮನರಂಜನೆ ಮತ್ತು ಸಾಹಸ ಕಾರ್ಯಕ್ರಮಗಳು ಇರಲಿವೆ. ಉತ್ಸವವು ಆಹಾರ ಮಳಿಗೆಗಳು, ವ್ಯಾಪಾರ ಮತ್ತು ವಾಣಿಜ್ಯ ಮಳಿಗೆಗಳು ಮತ್ತು ಸಾಹಸ ಕ್ರೀಡೆಗಳನ್ನು ಒಳಗೊಂಡಿದೆ ಎಂದು ಕುಂಞಂಬು ವಿವರಿಸಿದರು.ಪ್ರಮುಖ ವೇದಿಕೆ ‘ಚಂದ್ರಗಿರಿ’ಯಲ್ಲಿ ಪ್ರತಿದಿನ ರಾತ್ರಿ 7ರಿಂದ ಕಣ್ಮನ ಸೆಳೆಯುವ ವಿಸ್ಮಯಕಾರಿ ಕಾರ್ಯಕ್ರಮಗಳಿವೆ. ಡಿ.22ರಂದು ತೈಕ್ಕುಡಂ ಬ್ರಿಡ್ಜ್‌ನಿಂದ ಮೆಗಾ ಲೈವ್ ಮ್ಯೂಸಿಕ್ ಬ್ಯಾಂಡ್, 23ರಂದು ಶಿವಮಣಿ, ಪ್ರಕಾಶ್, ಉಳ್ಳಿಯೇರಿ, ಶರತ್ ಬಳಗದವರಿಂದ ಮ್ಯೂಸಿಕಲ್ ಫ್ಯೂಷನ್ ಟ್ರಯೋ ಪ್ರದರ್ಶನ, 24ರಂದು ಕೆ.ಎಸ್. ಚಿತ್ರ ಮತ್ತು ತಂಡದಿಂದ ‘ಚಿತ್ರ ವಸಂತಂ’ ಸಂಗೀತ ಔತಣ, 25ರಂದು ಎಂ.ಜಿ. ಶ್ರೀಕುಮಾರ್ ಮತ್ತು ತಂಡದ ಸಂಗೀತ ಕಾರ್ಯಕ್ರಮ, 26ರಂದು ಶೋಭನಾ ಮತ್ತು ಬಳಗದವರಿಂದ ನೃತ್ಯ ಮೇಳ, 27ರಂದು ಪದ್ಮಕುಮಾರ್ ಮತ್ತು ಬಳಗದವರಿಂದ ಓಲ್ಡ್ ಈಸ್ ಗೋಲ್ಡ್ ಸಂಗೀತ ಮಾಧುರ್ಯ ಕಾರ್ಯಕ್ರಮ, 28ರಂದು ಅತುಲ್ ನರುಕರ ಅವರಿಂದ ಸೋಲ್ ಆಫ್ ಫೋಕ್, ಫೋಕ್ ಬ್ಯಾಂಡ್, 29ರಂದು ಖ್ಯಾತ ಮಾಪಿಳ್ಳೆ ಹಾಡುಗಾರ ಕಣ್ಣೂರ್ ಶರೀಫ್ ಮತ್ತು ಬಳಗದವರಿಂದ ಮಾಪ್ಪಿಳ್ಳ ಹಾಡುಗಳ ರಾತ್ರಿ, 30ರಂದು ಗೌರಿ ಲಕ್ಷ್ಮಿ ಅವರಿಂದ ಮ್ಯೂಸಿಕಲ್ ಬ್ಯಾಂಡ್, 31ರಂದು ರಾಸ ಬೇಗಂ ಮತ್ತು ತಂಡದಿಂದ ಗಝಲ್ ಮತ್ತು ಹೊಸ ವರ್ಷಾಚರಣೆಯ ಅಂಗವಾಗಿ ವಿಶೇಷ ಕಾರ್ಯಕ್ರಮ ಅಲ್ಲದೆ ಬೇಕಲ ಕಿನಾರೆಯಲ್ಲಿ ಸಿಡಿಮದ್ದು ಪ್ರದರ್ಶನ ಆಯೋಜಿಸಲಾಗಿದೆ. ವಯಸ್ಕರಿಗೆ 100 ರು. ಮತ್ತು ಮಕ್ಕಳಿಗೆ 50 ರು. ನಿಗದಿಪಡಿಸಲಾಗಿದೆ ಎಂದು ಕುಂಞಂಬು ತಿಳಿಸಿದರು. ಬಿಆರ್‌ಡಿಸಿ ಎಂಡಿ ಶಿಜಿನ್‌ ಪಿ., ಪ್ರಮುಖರಾದ ಜಯಾನಂದ, ಮನಿಕಂದನ್‌ ಕೆ., ಯು.ಎಸ್‌. ಪ್ರಸಾದ್‌, ಎಂ.ಎ. ಲತೀಫ್‌ ಮತ್ತಿತರರಿದ್ದರು.