ಇತ್ತೀಚೆಗೆ ಸೇವೆಗಾಗಿ ಫೋಟೋ ಹೆಚ್ಚಾಗಿದೆ. ವಿನಯ್ ಅವರು ಸೇವಾ ಕಾರ್ಯಕ್ರಮದ ಜೊತೆ ಪ್ರೀತಿ, ಮಾನವೀಯತೆ ಹಂಚುವ ಮೂಲಕ ನಿಸ್ವಾರ್ಥದಿಂದ ಅರ್ಥಪೂರ್ಣ ಕಾರ್ಯಕ್ರಮ ಮಾಡುತ್ತಿದ್ದಾರೆ. 36ನೇ ವರ್ಷಕ್ಕೆ 36 ಸೇವೆಗಳ ಕಾರ್ಯಕ್ರಮ ಮಾಡುವ ಮೂಲಕ ಜನ್ಮದಿನ ಆಚರಿಸಿ ಕೊಳ್ಳುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಂಗೀತ ಮನಸ್ಸಿನ ನೋವು ಮರೆಯುವ ಸಾಧನವಾಗಿದೆ. ಮನಸ್ಸಿಗೆ ನೀಡುವ ಶಕ್ತಿ ಸಂಗೀತಕ್ಕಿದೆ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ಡಾ.ನಾಗರಾಜ್ ವಿ.ಭೈರಿ ತಿಳಿಸಿದರು.

ಮಂಡ್ಯದ ಯತ್ತಗದಹಳ್ಳಿ ಸ್ನೇಹಾಲಯ ಚಿಲ್ಡ್ರನ್ ಕೇರ್ ಸೆಂಟರ್‌ನಲ್ಲಿ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಆಯೋಜಿಸಿರುವ ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್‌ ವಿನಯ್‌ಕುಮಾರ್‌ ಜನ್ಮದಿನದ ನಿಮಿತ್ತ ಪುನರ್ ವಸತಿ ಕೇಂದ್ರದ ಮಕ್ಕಳಿಗೆ ಸಂಗೀತ ಸಾಂತ್ವನ, ಡ್ರೈ ಫ್ರೂಟ್ಸ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇರಾನ್, ಇರಾಕ್ ಯುದ್ಧದಿಂದಾಗಿ ಡ್ರೈಫ್ರೂಟ್ಸ್ ಬರುವುದು ನಿಂತು ಹೋಗಿ ಡ್ರೈ ಫ್ರೂಟ್ಸ್ ದರ ಹೆಚ್ಚಾಗಿದೆ. ಇದರ ನಡುವೆಯೂ ವಿನಯ್ ಮಕ್ಕಳಿಗೆ ಪೌಷ್ಟಿಕ ಫುಡ್ ವಿತರಣೆ ಮಾಡುತ್ತಿದ್ದಾರೆ ಎಂದರು.

ಇತ್ತೀಚೆಗೆ ಸೇವೆಗಾಗಿ ಫೋಟೋ ಹೆಚ್ಚಾಗಿದೆ. ವಿನಯ್ ಅವರು ಸೇವಾ ಕಾರ್ಯಕ್ರಮದ ಜೊತೆ ಪ್ರೀತಿ, ಮಾನವೀಯತೆ ಹಂಚುವ ಮೂಲಕ ನಿಸ್ವಾರ್ಥದಿಂದ ಅರ್ಥಪೂರ್ಣ ಕಾರ್ಯಕ್ರಮ ಮಾಡುತ್ತಿದ್ದಾರೆ. 36ನೇ ವರ್ಷಕ್ಕೆ 36 ಸೇವೆಗಳ ಕಾರ್ಯಕ್ರಮ ಮಾಡುವ ಮೂಲಕ ಜನ್ಮದಿನ ಆಚರಿಸಿ ಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇವರ ಬದುಕು ಉಜ್ವಲವಾಗಿರಲಿ. ಹೆಚ್ಚು ಹೆಚ್ಚು ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲಿ ಎಂದು ಶುಭ ಹಾರೈಸಿದರು.

ಕನ್ನಡ ಪರಿಚಾರಕ ಕೆ.ಟಿ.ಹನುಮಂತು ಮಾತನಾಡಿ, ಇತ್ತೀಚಿನ ದಿನಮಾನಗಳಲ್ಲಿ ಭಾರತದಲ್ಲಿ ಶೇ.45 ರಷ್ಟು ಮಕ್ಕಳು ಪೌಷ್ಟಿಕ ಆಹಾರದ ಕೊರತೆಯಿಂದ ಬಳಲಿ ನಾನಾ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಮಕ್ಕಳಿಗೆ ಡ್ರೈ ಫ್ರೂಟ್ಸ್ ವಿತರಣೆ ಬಹಳ ಪುಣ್ಯದ ಕೆಲಸ ಎಂದರು.

ಭಾರತದ ಸಂಗೀತಕ್ಕೆ ವಿದೇಶಿಗರು ಮಾರು ಹೋಗಿದ್ದಾರೆ. ಆದ್ದರಿಂದ ಮಕ್ಕಳು ಸಂಗೀತ ಕಲಿತರೆ ಶ್ರೇಷ್ಠ ವ್ಯಕ್ತಿಗಳಾಗುವರು. ವ್ಯಕ್ತಿತ್ವ ಬೆಳವಣಿಗೆ, ಸಂಸ್ಕಾರ ಮೂಡಿಸುವ ಸಾಮರ್ಥ್ಯ ಸಂಗೀತಕ್ಕಿದೆ. ಅದಕ್ಕಾಗಿ ಮಕ್ಕಳು ಸಂಗೀತ ಕಲಿಕೆಗೆ ಹೆಚ್ಚು ಒತ್ತು ನೀಡುವಂತೆ ತಿಳಿಸಿದರು.

ವಿನಯ್ ಅವರು ಬಡ ಮಕ್ಕಳು,ಅನಾಥ ಮಕ್ಕಳು, ಸಮಾಜದ ಬಗ್ಗೆ ಚಿಂತನೆ ಇಟ್ಟು ಅನೇಕ ಸೇವಾ ಕಾರ್ಯಕ್ರಮ ಗಳನ್ನು ಮಾಡುವ ಮೂಲಕ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿಯ ಡೇವಿಡ್ ಪ್ರತಿಭಾಂಜಲಿ, ಹಂಸ, ವಂದನಾ, ವಿಶ್ವಾಸ್ ಅವರು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್ ಕುಮಾರ್, ರಾಜೇಶ್ವರಿ, ದೇವರಾಜು, ವೈರಮುಡಿ, ವಿನಯ್ ಸೇರಿದಂತೆ ಇತರರು ಭಾಗವಹಿಸಿದ್ದರು.