80ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಗರದ ಬೇರೆ ಬೇರೆ ಕಾಲೇಜುಗಳಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು

ಕನ್ನಡಪ್ರಭ ವಾರ್ತೆ ಮೈಸೂರುನಗರದ ವಿಜಯ ವಿಠಲ ಪದವಿ ಪೂರ್ವ ಕಾಲೇಜು ವತಿಯಿಂದ ನಗರ ಮಟ್ಟದ ಅಂತರಕಾಲೇಜು ಸಾಮಾನ್ಯಜ್ಞಾನ ರಸಪ್ರಶ್ನೆ ಮತ್ತು ಭಾವಗೀತೆ ಸ್ಪರ್ಧೆ ಆಯೋಜಿಸಲಾಗಿತ್ತು.80ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಗರದ ಬೇರೆ ಬೇರೆ ಕಾಲೇಜುಗಳಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ವಿದುಷಿ ಮೀರಾ ಮಂಜುನಾಥ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಗೀತ ಮತ್ತು ಸಾಹಿತ್ಯ ಮುಂತಾದ ಪಠ್ಯೇತರ ಚಟುವಟಿಕೆಗಳು ಸರ್ವತೋಮುಖ ಬೆಳವಣಿಗೆಗೆ ಪೂರಕ ಹಾಗೂ ಮಾನಸಿಕ ಬೌದ್ಧಿಕ ವಿಕಸನಕ್ಕೆ ನೆರವಾಗುತ್ತದೆ ಎಂದು ಹೇಳಿದರು.ವಿಜಯ ವಿಠಲ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಸಿಎ ಎ. ವಿಶ್ವನಾಥ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಾತನಾಡಿ, ಇಂದಿನ ಒತ್ತಡದ ಯುಗದಲ್ಲಿ ಸಂಗೀತ ಮತ್ತು ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಕ್ರಿಯಾಶೀಲರಾಗಬಹುದು. ಭಾವಗೀತೆ ಕಲಿತು ಹಾಡುವುದರ ಮೂಲಕ ಜೀವನೋತ್ಸಾಹ ಹೆಚ್ಚಾಗುವುದು. ಸಂಗೀತ, ರಸಪ್ರಶ್ನೆ ಮುಂತಾದ ಚಟುವಟಿಕೆಗಳು ವಿದ್ಯಾರ್ಥಿಗಳ ಬೌದ್ಧಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರು.ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಹಲವಾರು ವಿಷಯಗಳ ಮೂಲ ಜ್ಞಾನ ಅರಿಯಲು ಸಾಧ್ಯ. ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಮುಖ್ಯವೇ ಹೊರತು ಬಹುಮಾನವಲ್ಲ ಎಂದು ಹೇಳಿದರು. ಪ್ರಾಂಶುಪಾಲ ಎಚ್. ಸತ್ಯಪ್ರಸಾದ್‌ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ನಮ್ಮ ಸಂಸ್ಥೆ ಕಳೆದ 18 ವರ್ಷಗಳಿಂದ ಸಂಗೀತ ಜ್ಞಾನ ಸುಧಾ ಎಂಬ ಸ್ಪರ್ಧೆಯನ್ನು ನಡೆಸುತ್ತ ಬಂದಿದೆ. ಈ ಸ್ಪರ್ಧೆಯ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.ಭಾವಗೀತೆ ಸ್ಪರ್ಧೆಯ ತೀರ್ಪುಗಾರರಾಗಿ ವಿದುಷಿ ಸುಜಲ ಗೋರೆ ಮತ್ತು ವಿದುಷಿ ಭುವನೇಶ್ವರಿ ಮತ್ತು ರಸಪ್ರಶ್ನೆ ಸ್ಪರ್ಧೆಯ ತೀರ್ಪುಗಾರರಾಗಿ ಉಪನ್ಯಾಸಕ ಎಸ್‌. ಗಣೇಶ್ ಕಾರ್ಯನಿರ್ವಹಿಸಿದರು.ಸಿರಿ ಮತ್ತು ವೈಷ್ಣವಿ ಪ್ರಾರ್ಥಿಸಿ, ವರ್ಷ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಶ್ರೀವಿದ್ಯಾ ಕಾರ್ಯಕ್ರಮ ನಿರೂಪಿಸಿ, ವೈಷ್ಣವಿ ವಂದಿಸಿದರು.ಬಳಿಕ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ವಿಜಯ ವಿಠಲ ವಿದ್ಯಾಶಾಲೆ ಪ್ರಾಂಶುಪಾಲೆ ಎಸ್‌.ಎ. ವೀಣಾ ಬಹುಮಾನ ವಿತರಿಸಿದರು. ಗಾಯಿತ್ರಿ ಯೋಗೇಶ್ ನಿರೂಪಿಸಿ, ಕಾರ್ಣಿಕಾ ವಿ. ನಾಯಕ್ ಸ್ವಾಗತಿಸಿ, ಕೆ. ತನಿಷ್ಕಾ ವಂದಿಸಿದರು. ವಿಜಯ ವಿಠಲ ವಿದ್ಯಾಶಾಲೆ ಪ್ರಾಂಶುಪಾಲೆ ಎಸ್.ಎ. ವೀಣಾ ಇದ್ದರು.ಭಾವಗೀತೆ ಸ್ಪರ್ಧೆಯಲ್ಲಿ ಗೋಪಾಲಸ್ವಾಮಿ ಪಿಯು ಕಾಲೇಜಿನ ವೇಣುಗೋಪಾಲ್‌ ಪ್ರಥಮ, (ಸೇಪಿಯೆಂಟ್ ಪಿಯು ಕಾಲೇಜಿನ ಲಹರಿ ದ್ವಿತೀಯ ಮತ್ತು ಜ್ಞಾನೋದಯ ಪಿಯು ಕಾಲೇಜಿನ ರಕ್ಷಾ ರಾವ್ ತೃತೀಯ. ಮರಿಮಲ್ಲಪ್ಪ ಪಿಯು ಕಾಲೇಜಿನ ನಿರಾಮಯ ವಿ ರಾವ್ ಮತ್ತು ಸದ್ವಿದ್ಯಾ ಸೆಮಿ ರೆಸಿಡೆನ್ಷಿಯಲ್‌ ಪಿಯು ಕಾಲೇಜಿನ ಆರ್‌. ಸಾನ್ವಿ ಸಮಾಧಾನಕರ ಬಹುಮಾನ ತಮ್ಮದಾಗಿಸಿಕೊಂಡರು. ಜ್ಞಾನೋದಯ ಪಿಯು ಕಾಲೇಜು ಪರ್ಯಾಯ ಪಾರಿತೋಷಕ ಪಡೆಯಿತು.ರಸಪ್ರಶ್ನೆ ಸ್ಪರ್ಧೆಯಲ್ಲಿ ಸದ್ವಿದ್ವಾ ಸಂಯುಕ್ತ ಪಿಯು ಕಾಲೇಜಿನ ಜಿ. ಜೀವನ್ ಮತ್ತು ಎ. ಆಸ್ಟಿನ್ ಪ್ರಥಮ, ಸದ್ವಿದ್ಯಾ ಸೆಮಿ ರೆಸಿಡೆನ್ಸಿಯಲ್ ಕಾಲೇಜಿನ ಶರಧಿ ಜಿ ಶಾಸ್ತ್ರಿ ಮತ್ತು ಲಾಯಲ್ ರಿಚರ್ಡ್ ಪಸ್ಸನ್ಹ ದ್ವಿತೀಯ, ಮರಿಮಲ್ಲಪ್ಪ ಪಿಯು ಕಾಲೇಜಿನ ಆರ್‌. ಧನುಷ್ ಮತ್ತು ಎನ್. ದುರ್ಗಾ ಪ್ರಸಾದ್ ತೃತೀಯ ಬಹುಮಾನ. ಗುರುಕುಲ ಪಿಯು ಕಾಲೇಜಿನ ಜಿ. ಭುವನ್ ಮತ್ತು ಯೋಗಾನಂದ ಸಮಾಧಾನಕರ ಬಹುಮಾನ ಪಡೆದರು. ಸದ್ವಿದ್ವಾ ಸಂಯುಕ್ತ ಪಿಯು ಕಾಲೇಜು ಪರ್ಯಾಯ ಪಾರಿತೋಷಕ ಪಡೆಯಿತು.