ಸಾರಾಂಶ
- ಶ್ರೀ ವಿದ್ಯಾಗಣಪತಿ ಸೇವಾ ಸಂಘ ಅಮೃತ ಮಹೋತ್ಸವ ಸಮಾರೋಪ - ರವೀಂದ್ರ ನಗರದ ಬಲಮುರಿ ಶ್ರೀ ಗಣಪತಿ ದೇವಸ್ಥಾನದಲ್ಲಿ ಆಯೋಜನೆ- - - ಶಿವಮೊಗ್ಗ: ನಗರದ ಶ್ರೀ ವಿದ್ಯಾಗಣಪತಿ ಸೇವಾ ಸಂಘದ ಅಮೃತ ಮಹೋತ್ಸವ ಸಮಾರೋಪ ಅಂಗವಾಗಿ ಫೆಬ್ರವರಿ 1ರಿಂದ 4ರವರೆಗೆ ರವೀಂದ್ರ ನಗರದ ಬಲಮುರಿ ಶ್ರೀ ಗಣಪತಿ ದೇವಸ್ಥಾನದಲ್ಲಿ ಪ್ರತಿದಿನ ಸಂಜೆ 5.30ರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಎಚ್.ಆರ್.ಸುಬ್ರಮಣ್ಯ ಶಾಸ್ತ್ರಿ ಹೇಳಿದರು.
ನಗರದ ಪ್ರೆಸ್ ಟ್ರಸ್ಟ್‌ನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಫೆ.1ರಂದು ಸಂಜೆ 5.30ಕ್ಕೆ ಬೆಂಗಳೂರಿನ ಭಗವತಿ ಮತ್ತು ವೃಂದದವರಿಂದ ಹಾಡುಗಾರಿಕೆ ನಡೆಯಲಿದೆ. ಚೆನ್ನೈನ ಮುಡಿಕೊಂಡನ್ ರಮೇಶ್ ವೀಣಾವಾದನ, ಮೈಸೂರಿನ ಪಿ.ಎಸ್. ಶ್ರೀಧರ್ ಮೃದಂಗ, ಶಿವಮೊಗ್ಗದ ಶ್ರೇಯಸ್ ಘಟಂ ಸಾಥ್ ನೀಡಲಿದ್ದಾರೆ ಎಂದರು.ಫೆ.2ರಂದು ಸಂಜೆ 5.30ಕ್ಕೆ ಶಿವಮೊಗ್ಗದ ಶ್ರೇಯಾ ಆರ್. ಭಟ್ ಮತ್ತು ವೃಂದದವರು ಹಾಡುಗಾರಿಕೆ ನಡೆಸಿಕೊಡಲಿದ್ದು, ಅಕ್ಕರೈ ಸಿಸ್ಟರ್ ಸುಬ್ಬಲಕ್ಷ್ಮೀ, ಸ್ವರ್ಣಲತಾ ಹಾಡುಗಾರಿಕೆ, ಬೆಂಗಳೂರಿನ ಮತ್ತೂರು ಶ್ರೀನಿಧಿ ಪಿಟೀಲಿನಲ್ಲಿ, ಕೆ.ಯು. ಜಯಚಂದ್ರ ರಾವ್ ಮೃದಂಗ, ಗಿರಿಧರ್ ಉಡುಪ ಘಟಂ ಸಾಥ್ ನೀಡಲಿದ್ದಾರೆ ಎಂದು ತಿಳಿಸಿದರು.
ಫೆ.3ರಂದು ಸಂಜೆ 5.30ಕ್ಕೆ ಶಿವಮೊಗ್ಗದ ಡಾ.ಯಶಸ್ವಿನಿ ಮತ್ತು ವೃಂದದವರು ಹಾಡುಗಾರಿಕೆ ನಡೆಸಿಕೊಡಲಿದ್ದು, ಚೆನ್ನೈನ ಅಶ್ವಥ್ ನಾರಾಯಣ್ ಹಾಡುಗಾರಿಕೆ, ಬೆಂಗಳೂರಿನ ಮತ್ತೂರು ಶ್ರೀನಿಧಿ ಪಿಟೀಲು, ಹೊಸಹಳ್ಳಿ ಸಚಿನ್ ಪ್ರಕಾಶ್ ಮೃದಂಗ, ಬೆಂಗಳೂರಿನ ಸುನಾದ್ ಆನೂರು ಖಂಜಿರದಲ್ಲಿ ಸಾಥ್ ನೀಡುವರು.ಫೆ.4ರಂದು ಸಂಜೆ 5.30 ಗಂಟೆಗೆ ಸಮಾರೋಪ ನಡೆಯಲಿದೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಭಾಗವಹಿಸುವರು. ಶ್ರೀ ವಿದ್ಯಾಗಣಪತಿ ಸೇವಾ ಸಂಘದ ಅಧ್ಯಕ್ಷ ಪ್ರೊ. ಎಚ್.ಆರ್. ಶಂಕರನಾರಾಯಣ ಶಾಸ್ತ್ರಿ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ಬೆಂಗಳೂರಿನ ಅಭಿರಾಮ್ ಬೋಡೆ ಹಾಡುಗಾರಿಕೆ ನಡೆಸಿಕೊಡುವರು. ಅವರಿಗೆ ಬೆಂಗಳೂರಿನ ಅನಿರುದ್ಧ್ ಭಾರದ್ವಾಜ್ ಪಿಟೀಲು, ಬೆಂಗಳೂರಿನ ರಾಧೇಶ್ ಮೃದಂಗ, ಬೆಂಗಳೂರಿನ ಶ್ರೀನಾಥ್ ಕೌಶಿಕ್ ಘಟಂನಲ್ಲಿ ಸಾಥ್ ನೀಡಲಿದ್ದಾರೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಪ್ರೊ. ಎಚ್.ಆರ್. ಶಂಕರನಾರಾಯಣ ಶಾಸ್ತ್ರಿ, ಪ್ರಮುಖರಾದ ಎಸ್.ಜಿ. ಆನಂದ್, ಆನಂದ್ ರಾಮ್, ಶ್ರೀನಿವಾಸ್, ರವಿಕುಮಾರ್, ಎಚ್.ಡಿ. ಮೋಹನ್ ಶಾಸ್ತ್ರಿ, ನಾಗಭೂಷಣ್ ಶಾಸ್ತ್ರಿ ಮತ್ತಿತರರು ಇದ್ದರು.- - -