ಮಸ್ಕಿ ಪರ್ಮಿಟ್‌, ಯಾದಗಿರಿ ಉಸುಕು: ಸಚಿವ ಶರಣಬಸಪ್ಪಗೌಡ ದರ್ಶನಾಪುರ

| Published : Jan 26 2024, 01:46 AM IST

ಮಸ್ಕಿ ಪರ್ಮಿಟ್‌, ಯಾದಗಿರಿ ಉಸುಕು: ಸಚಿವ ಶರಣಬಸಪ್ಪಗೌಡ ದರ್ಶನಾಪುರ
Share this Article
  • FB
  • TW
  • Linkdin
  • Email

ಸಾರಾಂಶ

ಯಾದಗಿರಿ ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದ್ದು, ಇದೂವರೆಗೆ ಅಕ್ರಮ ಮರಳು ಗಣಿಗಾರಿಕೆ ಬಗ್ಗೆ 500ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟದ ಬಗ್ಗೆ ಕೆಡಿಪಿ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ರಾಯಚೂರು ಜಿಲ್ಲೆ ಮಸ್ಕಿ ಪರ್ಮಿಟ್‌ ಪಡೆದು ಯಾದಗಿರಿ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆದಿರುವುದು ತಮ್ಮ ಗಮನಕ್ಕೂ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.

ಅಕ್ರಮವಾಗಿ ತೆಗೆಯಲಾಗಿರುವ ಮರಳನ್ನು ಜಪ್ತಿ ಮಾಡುವ ನೆಪ ಹೂಡಿ, ನಂತರ ಅದನ್ನು ಅಕ್ರಮ ದಂಧೆಕೋರರೇ ಖರೀದಿಸುವಂತೆ ಅನುಕೂಲ ಮಾಡಿಕೊಟ್ಟು, ಅಕ್ರಮ-ಸಕ್ರಮ ಮಾಡಿಕೊಳ್ಳುವ ದಂಧೆ ನಡೆದಿದೆ ಎಂದು ದೂರಿದ ಗುರುಮಠಕಲ್‌ ಶಾಸಕ ಕಂದಕೂರು ಅಧಿಕಾರಿಗಳೇ ಇಂತಹ ದಂಧೆಯಲ್ಲಿ ಶಾಮೀಲಾಗಿದ್ದಾರೆಂದು ಆರೋಪಿಸಿದರು.

ಗೌಡೂರು ಬಳಿ 4.20 ಕೋಟಿ ರು., 60 ಸಾವಿರ ಮೆಟ್ರಿಕ್‌ ಟನ್‌ ಅಕ್ರಮ ಮರಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಈಗೇನಾಗಿದೆ? ಅದು ಎಲ್ಲಿದೆ ಎಂದು ಪ್ರಶ್ನಿಸಿದ ಕಂದಕೂರು, ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಸಾಕಷ್ಟು ನಡೆಯುತ್ತಿವೆ. ಅಧಿಕಾರಿಗಳಿಗೆ ಇದೆಲ್ಲವೂ ಗೊತ್ತಿದ್ದರೂ, ಅವರೇ ಇಂತಹ ಅಕ್ರಮಕ್ಕೆ ಸಾಥ್‌ ನೀಡುತ್ತಿರುವಂತಿದೆ ಎಂದು ಕಿಡಿ ಕಾರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ದರ್ಶನಾಪುರ, ಅಕ್ರಮ ದಂಧೆ ತಡೆಗಟ್ಟುವ ನಿಟ್ಟಿನಲ್ಲಿ ಇನ್ನೂ ಬಿಗಿ ಕ್ರಮ ಕೈಗೊಳ್ಳಬೇಕು, ಜಪ್ತಿ ಮಾಡಲಾದ ಮರಳು ದಾಸ್ತಾನನ್ನು ಯಾರಿಗೂ ನೀಡಬೇಡಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.