ಕನ್ನಡಪ್ರಭ ವಾರ್ತೆ, ಬೆಂಗಳೂರು
ಹಿಂದುಳಿದ ವರ್ಗಗಳ ಪ್ರವರ್ಗ 2ಬಿ ಅಡಿಯಲ್ಲಿ ಮುಸ್ಲಿಮರಿಗೆ ನೀಡಲಾಗುತ್ತಿದ್ದ ಮೀಸಲಾತಿ ಮರು ಸ್ಥಾಪಿಸಬೇಕು. ಮತಾಂತರ ನಿಷೇಧ ಕಾನೂನು ಹಿಂಪಡೆಯಬೇಕು. ಅಲ್ಪಸಂಖ್ಯಾತರಿಗೆ ಬಜೆಟ್‌ನಲ್ಲಿ ₹10 ಸಾವಿರ ಕೋಟಿ ಮೀಸಲಿಡಬೇಕು ಎಂಬುದು ಸೇರಿದಂತೆ 10 ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.ಶನಿವಾರ ನಗರದ ಪುರಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ಮುಸ್ಲಿಮ್ ಒಕ್ಕೂಟದ ಸಮಾವೇಶದಲ್ಲಿ ಸಾಮಾಜಿಕ ಹೋರಾಟಗಾರ ಮಹಮ್ಮದ್ ಯಾಸೀನ್ ಮಲ್ಪೆ ಅವರು ಹತ್ತು ಪ್ರಮುಖ ಬೇಡಿಕೆಗಳನ್ನು ಸರ್ಕಾರ ಶೀಘ್ರದಲ್ಲೇ ಈಡೇರಿಸಬೇಕೆಂದು ಒತ್ತಾಯಿಸಿದರು.
ಹಿಂದಿನ ಬಿಜೆಪಿ ಸರ್ಕಾರ 2023ರಲ್ಲಿ ರದ್ದುಪಡಿಸಿದ್ದ ಪ್ರವರ್ಗ 2ಬಿ ಅಡಿಯಲ್ಲಿ ಮುಸ್ಲಿಮರಿಗೆ ನೀಡುತ್ತಿದ್ದ ಮೀಸಲಾತಿಯನ್ನು ಕಾಂಗ್ರೆಸ್ ಸರ್ಕಾರ ಈವರೆಗೂ ಮರುಸ್ಥಾಪಿಸಿಲ್ಲ. 2ಬಿ ಮೀಸಲಾತಿ ರದ್ದು ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ್ದರೂ, ಅದನ್ನು ಶಾಸನಾತ್ಮಕ ಜಾರಿಗೆ ಕ್ರಮ ಕೈಗೊಂಡಿಲ್ಲ. ಶೀಘ್ರವೇ 2ಬಿ ಮೀಸಲಾತಿ ಮರುಸ್ಥಾಪನೆ ಮಾಡಬೇಕು ಎಂದರು.2023ರ ಜೂ.15ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಪಡಿಸುವ ತೀರ್ಮಾನವಾಗಿದೆ. ಆದರೆ, ಈವರೆಗೆ ಕಾಯ್ದೆ ಹಿಂಪಡೆಯುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಿಲ್ಲ. ಕೂಡಲೇ ಈ ಸಂವಿಧಾನ ವಿರೋಧಿ ಕಾಯ್ದೆ ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಗೋಹತ್ಯೆ ನಿಷೇಧ ಕಾನೂನು ರದ್ದು ಮಾಡಬೇಕು. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ವರ್ಷಕ್ಕೆ ₹10 ಸಾವಿರ ಕೋಟಿ ಮೀಸಲಿಡಬೇಕು. ದ್ವೇಷ ಭಾಷಣ, ದ್ವೇಷ ಅಪರಾಧ, ದ್ವೇಷ ಪ್ರಚಾರಕ್ಕೆ ಕಡಿವಾಣ ಹಾಕಬೇಕು. ವಿಧಾನಸಭೆ, ವಿಧಾನಪರಿಷತ್, ನಿಗಮ-ಮಂಡಳಿಗಳು, ವಿಶ್ವವಿದ್ಯಾಲಯಗಳು, ಆಯೋಗಗಳು ಹಾಗೂ ಸ್ಥಳೀಯ ಸಂಸ್ಥೆಗಳ ನಾಮ ನಿರ್ದೇಶನಗಳಲ್ಲಿ ಮುಸ್ಲಿಮರಿಗೆ ಪ್ರಾತಿನಿಧ್ಯ ನೀಡಬೇಕು. ರಾಜ್ಯದಲ್ಲಿ ಎಸ್‍ಐಆರ್ ಜಾರಿಯಾಗದಂತೆ ತಡೆಯಲು ಹಾಗೂ ಒಬ್ಬನೇ ಒಬ್ಬ ಮತದಾರ ತನ್ನ ಹಕ್ಕಿನಿಂದ ವಂಚಿತನಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.