೨೫ ದಿನಗಳ ಹಿಂದೆಯೇ ದೇವಸ್ಥಾನಕ್ಕೆ ತೆರಳಿದ ಮುಸ್ಲಿಂ ಕುಟುಂಬ ಗರುಡೋತ್ಸವ ಸೇವೆ ಮಾಡಿಸಲು ಹೆಸರು ನೋಂದಾಯಿಸಿದೆ.
ಕನಕಗಿರಿ: ಗಂಗಾವತಿ ಸಮೀಪದ ಬಸಾಪಟ್ಟಣದ ಮುಸ್ಲಿಂ ಕುಟುಂಬವೊಂದು ಪಟ್ಟಣದ ಮುಜರಾಯಿ ಇಲಾಖೆಯ ಶ್ರೀ ಕನಕಾಚಲಪತಿ ದೇವಸ್ಥಾನದಲ್ಲಿ ಶನಿವಾರ ಗರುಡೋತ್ಸವ ಸೇವೆ ಸಲ್ಲಿಸಿದೆ.
ಕಳೆದ ೧೫ ವರ್ಷಗಳ ಹಿಂದಿನ ಇಷ್ಟಾರ್ಥ ಸಿದ್ಧಿಯಾಗಿದ್ದು, ಈಗ ಈ ಕುಟುಂಬದವರೆಲ್ಲರೂ ಸೇರಿಕೊಂಡು ಕನಕಾಚಲಪತಿ ಸನ್ನಿಧಾನದಲ್ಲಿಯೇ ಗರುಡೋತ್ಸವ ಸೇವೆ ಮಾಡಿರುವ ಮೂಲಕ ಈ ವಿಶಿಷ್ಟ ಹರಕೆ ತೀರಿಸಿದ್ದಾರೆ. ೨೫ ದಿನಗಳ ಹಿಂದೆಯೇ ದೇವಸ್ಥಾನಕ್ಕೆ ತೆರಳಿದ ಮುಸ್ಲಿಂ ಕುಟುಂಬ ಗರುಡೋತ್ಸವ ಸೇವೆ ಮಾಡಿಸಲು ಹೆಸರು ನೋಂದಾಯಿಸಿದೆ. ಮುಸ್ಲಿಂ ಕುಟುಂಬದವರಿಂದ ಕನಕಾಚಲಪತಿ ದೇಗುಲದಲ್ಲಿ ಗರುಡೋತ್ಸವ ಸೇವೆ ಹಮ್ಮಿಕೊಂಡಿರುವುದು ಇದೇ ಮೊದಲು ಎಂದು ತಿಳಿದು ಬಂದಿದೆ.ಮುಸ್ಲಿಂ ಎನ್ನುವುದನ್ನು ಮರೆತ ಈ ಕುಟುಂಬದವರು ಹಿಂದೂ ಸಂಪ್ರದಾಯದಂತೆ ಸಂಕಲ್ಪ, ಮಂಗಳಾರತಿ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಇನ್ನೂ ಕಾರ್ಯಕ್ರಮದ ಮುಕ್ತಾಯದ ನಂತರವೂ ಹಿಂದೂ ಸಂಪ್ರದಾಯದಂತೆ ಶೇಷವಸ್ತ್ರ ಧರಿಸಿ ತೀರ್ಥ, ಪ್ರಸಾದ ಸ್ವೀಕರಿಸಿದ ಮುಸ್ಲಿಂ ಕುಟುಂಬ ಭಾವೈಕ್ಯತೆಗೆ ಸಾಕ್ಷಿಯಾಯಿತು.
ಈ ವೇಳೆ ದೇವಸ್ಥಾನ ವ್ಯವಸ್ಥಾಪಕ ಸಿದ್ದಲಿಂಗಯ್ಯಸ್ವಾಮಿ, ಅರ್ಚಕ ವಿಜಯಪ್ರಸಾದ, ಪ್ರದೀಪ, ಮುಸ್ಲಿಂ ಕುಟುಂಬದ ಹೊನ್ನೂರುಹುಸೇನ ಆರುಬೆರಳಿನ್, ಫಾತಿಮಾ, ಮರ್ದಾನಬಿ, ಹೊನ್ನಮ್ಮ, ಹುಸೇನಬೀ, ಪೀರಮ್ಮ, ಅಲ್ಲಾಬಿ, ಅಬ್ದುಲ್ ಕಲಾಂ ಆರುಬೆರಳಿನ್, ರೊಡ್ಡಸಾಬ ಇದ್ದರು.