ಮದುವೆ ಆಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ಹಿಂದೂ ಯುವತಿಗೆ ವಂಚಿಸಿದ ಪ್ರಕರಣ ಸಂಬಂಧ ಆಕೆಯ ಅನ್ಯ ಧರ್ಮೀಯ ಮಾಜಿ ಪ್ರಿಯಕರನೊಬ್ಬನನ್ನು ನಗರದ ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮದುವೆ ಆಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ಹಿಂದೂ ಯುವತಿಗೆ ವಂಚಿಸಿದ ಪ್ರಕರಣ ಸಂಬಂಧ ಆಕೆಯ ಅನ್ಯ ಧರ್ಮೀಯ ಮಾಜಿ ಪ್ರಿಯಕರನೊಬ್ಬನನ್ನು ನಗರದ ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಶಿವರಾಮಕಾರಂತ ನಗರದ ಮೊಹಮ್ಮದ್ ಇಶಾಕ್ ಬಂಧಿತನಾಗಿದ್ದು, ಆಂಧ್ರಪ್ರದೇಶ ಮೂಲದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿ ಬಂಧನವಾಗಿದೆ. ಎರಡು ವರ್ಷಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಸಂತ್ರಸ್ತೆಯನ್ನು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಲೈಂಗಿಕವಾಗಿ ಶೋಷಣೆ ಮಾಡಿ ವಂಚಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಥಣಿಸಂದ್ರ ಸಮೀಪದ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ಇಶಾಕ್, ತನ್ನ ಕುಟುಂಬದ ಜತೆ ಶಿವರಾಮಕಾರಂತ ನಗರದಲ್ಲಿ ವಾಸವಾಗಿದ್ದ. ನಗರದ ಖಾಸಗಿ ಕಂಪನಿಯಲ್ಲಿ ನೌಕರಿಯಲ್ಲಿದ್ದ ಆಂಧ್ರಪ್ರದೇಶ ಮೂಲದ ಯುವತಿಯನ್ನು ಪ್ರೇಮದ ಬಲೆಗೆ ಬೀಳಿಸಿಕೊಂಡು ಆತ ವಂಚಿಸಿದ್ದ. ಇತ್ತೀಚೆಗೆ ತನ್ನ ಧರ್ಮದ ಯುವತಿ ಜತೆ ಆತ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಈ ಸಂಗತಿ ತಿಳಿದ ಸಂತ್ರಸ್ತೆ, ತನ್ನ ಮಾಜಿ ಪ್ರಿಯಕರ ವಿರುದ್ಧ ಎಚ್‌ಎಸ್ಆರ್ ಲೇಔಟ್ ಠಾಣೆಯಲ್ಲಿ ದೂರು ನೀಡಿದ್ದಳು. ಆದರೆ ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಅತ್ಯಾಚಾರ ಕೃತ್ಯವು ವರದಿಯಾಗಿದ್ದ ಕಾರಣ ಆ ಠಾಣೆಗೆ ಮುಂದಿನ ತನಿಖೆಗೆ ಪ್ರಕರಣ ವರ್ಗಾವಣೆಯಾಗಿತ್ತು. ಅದರಂತೆ ತನಿಖೆಗಿಳಿದ ಅಮೃತಹಳ್ಳಿ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.