ಸಾರಾಂಶ
ಸರ್ಕಾರವು ಮುಸಲ್ಮಾನರನ್ನು ಕಡೆಗಣನೆ:ಆರೋಪ
ಕನ್ನಡಪ್ರಭ ವಾರ್ತೆ ಮೈಸೂರು
ಸರ್ಕಾರವು ಮುಸಲ್ಮಾನರನ್ನು ಕಡೆಗಣನೆ ಮಾಡುತ್ತಿದ್ದು, ಮುಸಲ್ಮಾನರ ಮೇಲಿನ ಕೋಮುವಾದಿ ದಾಳಿಗಳನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ, ಮುಸ್ಲಿಂ ಶಾಸಕರೇ ಮಾತಾಡಿ ಆಗ್ರಹಿಸಿ ಎಸ್ ಡಿಪಿಐ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟಿಸಿದರು.ಮುಸಲ್ಮಾನರ ಸಾಂವಿಧಾನಿಕ ಹಕ್ಕುಗಳ ವಿರುದ್ಧ ಷಡ್ಯಂತ್ರ ಮಾಡುತ್ತಿರುವ ಸಂಘ ಪರಿವಾರಗಳನ್ನು ತಡೆಯುವಲ್ಲಿ ಅಸಹಾಯಕತೆ ಪ್ರದರ್ಶಿಸುತ್ತಿರುವ ಸರ್ಕಾರದ ಧೋರಣೆಗಳ ವಿರುದ್ಧ ನಾವಿಂದು ಗಟ್ಟಿ ದನಿಯಲ್ಲಿ ಮಾತನಾಡಬೇಕಿದೆ. ಭ್ರಷ್ಟಾಚಾರ, ಅನೀತಿ, ಅಕ್ರಮ, ಕೋಮುವಾದಿ ನಿಲುವು ಹಾಗೂ ಧರ್ಮಾಂದತೆ ಕೃತ್ಯಗಳಿಂದ ಬೇಸತ್ತಿದ್ದ ಜನರು ಬದಲಾವಣೆ ಬಯಸಿ ಕಾಂಗ್ರೆಸ್ ಸರ್ಕಾರ ಆಯ್ಕೆ ಮಾಡಿದ್ದಾರೆ. ಮುಸಲ್ಮಾನ ಸಮುದಾಯದ 50 ಲಕ್ಷಕ್ಕೂ ಹೆಚ್ಚು ಮತಗಳು ಕಾಂಗ್ರೆಸ್ ಗೆ ಬಿದ್ದಿವೆ. ಬಿಜೆಪಿ ದೇಶಾದ್ಯಂತ ಸೃಷ್ಟಿಸಿದ್ದ ಭಯದ ವಾತಾವರಣ ಹೋಗಲಾಡಿಸುತ್ತದೆ ಎಂಬ ಭರವಸೆಯಲ್ಲಿ ಮುಸಲ್ಮಾನರು ಕಾಂಗ್ರೆಸ್ ಬೆಂಬಲಿಸಿದ್ದರು. ಆದರೆ, ಕಾಂಗ್ರೆಸ್ ಮೇಲಿನ ಭರವಸೆಗಳು ಹುಸಿಯಾಗಿವೆ ಎಂದು ಅವರು ಆರೋಪಿಸಿದರು.
ಬಿಜೆಪಿ ಸರ್ಕಾರ ರದ್ದು ಮಾಡಿದ್ದ 2ಎ ಮೀಸಲಾತಿಯನ್ನು ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಪುನರ್ ಸ್ಥಾಪಿಸುವ ಭರವಸೆ ಈಡೇರಿಲ್ಲ. ಮುಸಲ್ಮಾನರಿಗೆ 10 ಸಾವಿರ ಕೋಟಿ ಮೀಸಲಿಡುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಆದರೆ, ಬಜೆಟ್ ನಲ್ಲಿ ಕೇವಲ 2200 ಕೋಟಿ ನೀಡಲಾಗಿದೆ. ಅಲ್ಪಸಂಖ್ಯಾತ ಸಂಶೋಧನಾರ್ಥಿಗಳಿಗೆ ಎಂಫಿಲ್ ಪಿಎಚ್ ಡಿ ಮಾಡುವ ಫೆಲೋಶಿಪ್ ಅನ್ನು 10 ಸಾವಿರಕ್ಕೆ ಇಳಿಸಲಾಗಿದೆ ಎಂದು ಅವರು ದೂರಿದರು.ಕಲ್ಲಡ್ಕ ಪ್ರಭಾಕರ್ ಭಟ್ ಮುಸಲ್ಮಾನರ ವಿರುದ್ಧ ಮಾತನಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಮುಸ್ಲಿಂ ಸಮುದಾಯದ ಭರವಸೆಗಳನ್ನು ಈಡೇರಿಸಿ ಸಮುದಾಯದ ಮೇಲಿನ ದಾಳಿಗಳನ್ನು ತಡೆಯಬೇಕು ಎಂದು ಅವರು ಆಗ್ರಹಿಸಿದರು.
ಎಸ್ ಡಿಪಿಐ ಜಿಲ್ಲಾಧ್ಯಕ್ಷ ರಫತ್ ಉಲ್ಲಾ ಖಾನ್, ಮುಖಂಡರಾದ ಮೊಹಮ್ಮದ್ ಶಫಿ, ಫರ್ಹಾದೀನ್ ಖಾನ್, ಸಾನಿಯಾ, ಪುಟ್ಟನಂಜಯ್ಯ, ಸ್ವಾಮಿ ಮೊದಲಾದವರು ಇದ್ದರು.