ಹಿಂದೂ ಕುಟುಂಬ ಹೆಸರಿನ ಬದಲು ಮುಸ್ಲಿಂ ಹೆಸರು!

| Published : Oct 08 2025, 01:00 AM IST

ಸಾರಾಂಶ

ಜಾತಿ ಜನಗಣತಿ ವೇಳೆ ಆಧಾರ್ ಕಾರ್ಡ್ ನಂಬರ್ ನಮೂದಿಸುತ್ತಿದ್ದಂತೆ ವೈದ್ಯರ ಹೆಸರಿನ ಬದಲು ಅನ್ಯ ಕೋಮಿನವರ ಹೆಸರು, ಕುಟುಂಬವು ಸದಸ್ಯರ ಕಾಲಂನಲ್ಲಿ ಸೇರ್ಪಡೆಯಾದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

- ಡಾ.ಹರ್ಷ, ಕುಟುಂಬ ಬದಲು ಅನ್ಯರ ಹೆಸರುಗಳು

- ಗೊಂದಲ ಸರಿಪಡಿಸುವುದಾಗಿ ಜಿಲ್ಲಾಧಿಕಾರಿ ಅಭಯ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಾತಿ ಜನಗಣತಿ ವೇಳೆ ಆಧಾರ್ ಕಾರ್ಡ್ ನಂಬರ್ ನಮೂದಿಸುತ್ತಿದ್ದಂತೆ ವೈದ್ಯರ ಹೆಸರಿನ ಬದಲು ಅನ್ಯ ಕೋಮಿನವರ ಹೆಸರು, ಕುಟುಂಬವು ಸದಸ್ಯರ ಕಾಲಂನಲ್ಲಿ ಸೇರ್ಪಡೆಯಾದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿ ಡಾ.ಹರ್ಷ ಎಂಬವರ ಮನೆಗೆ ಜಾತಿ ಜನಗಣತಿಗೆಂದು ಸಮೀಕ್ಷಾ ಸಿಬ್ಬಂದಿ ಭೇಟಿ ನೀಡಿದ್ದರು. ಈ ವೇಳೆ ಗಣತಿ ಆ್ಯಪ್‌ನಲ್ಲಿ ಸಿಬ್ಬಂದಿ ಡಾ.ಹರ್ಷ ಅವರ ಆಧಾರ್‌ ಕಾರ್ಡ್‌ ನಂಬರ್‌ ನಮೂದಿಸುತ್ತಿದ್ದಂತೆಯೇ ಅನ್ಯ ಕೋಮಿನ ಹೆಸರು, ಆ ಕೋಮಿನ ಕುಟುಂಬದ ಹೆಸರು ಕಾಲಂನಲ್ಲಿ ಸೇರ್ಪಡೆಯಾಗಿದ್ದು ತೋರಿಸಿದೆ. ಇದ್ದರಿಂದ ಸಿಬ್ಬಂದಿ ಹಾಗೂ ಹರ್ಷ ಮತ್ತವರ ಕುಟುಂಬ ಗೊಂದಲಕ್ಕೆ ಒಳಗಾಯಿತು.

ವೈದ್ಯ ಹರ್ಷ ತಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿದರೆ ಮುಸ್ಲಿಂ ವ್ಯಕ್ತಿಗಳ ಹೆಸರು ಬಂದಿದೆ. ನಂತರ ಮುಸ್ಲಿಂ ಕುಟುಂಬವೊಂದರ ಸದಸ್ಯರ ಹೆಸರುಗಳಾದ ಅಫ್ರೋಜಾ, ಷರೀಫ್ ಭಾನು ಹೆಸರುಗಳು ಸೇರ್ಪಡೆಯಾಗಿವೆ. ಇದರಿಂದ ಆತಂಕಗೊಂಡ ಗಣತಿ ಸಿಬ್ಬಂದಿ ಸಹ ಏನು ಮಾಡಬೇಕೆಂಬುದೇ ತೋಚದೆ ತಡಬಡಾಯಿಸಿದರು. ಈ ವಿಚಾರ ಮೇಲಾಧಿಕಾರಿಗಳ ಗಮನಕ್ಕೆ ತಂದು, ಡಾ.ಹರ್ಷ ಮನೆ ಸದಸ್ಯರ ಒಂದೊಂದೇ ಹೆಸರನ್ನು ಗಣತಿ ಸಿಬ್ಬಂದಿ ನಮೂದಿಸಿಕೊಂಡಿದ್ದಾರೆ.

ತಮ್ಮ ಹಾಗೂ ಕುಟುಂಬದ ಹೆಸರಿನ ಬದಲಿಗೆ ಮುಸ್ಲಿಂ ಕುಟುಂಬವೊಂದರ ಹೆಸರು ಬಂದ ವಿಚಾರವನ್ನು ತಕ್ಷಣ‍ವೇ ಡಾ.ಹರ್ಷ ಅವುರ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದಾರೆ. ಡಾ.ಹರ್ಷ ಅಹವಾಲು ಆಲಿಸಿದ ಡಿಸಿ ಜಿ.ಎಂ. ಗಂಗಾಧರ ಸ್ವಾಮಿ ಅವರು, ನಿಮ್ಮ ಕುಟುಂಬದ ಹೆಸರನ್ನು ದಾಖಲಿಸಿ, ಬೇರೆ ಮುಸ್ಲಿಂ ಕುಟುಂಬದ ಹೆಸರು ದಾಖಲಾಗಿರುವುದನ್ನು ಅಳಿಸಿ, ಹಾಕುವುದಾಗಿ ಭರವಸೆ ನೀಡಿದ್ದಾರೆ. ಜಾತಿ ಜನಗಣತಿ ಸಾಫ್ಟ್‌ವೇರ್‌ನಲ್ಲಿ ಬ್ಯಾಕ್ ಆ್ಯಂಡ್‌ನಲ್ಲಿ ಲಿಂಕ್‌ ಆಗಿ ಇಂತಹ ಸಮಸ್ಯೆಯಾಗಿದೆ. ಈ ಸಮಸ್ಯೆ ಪರಿಹರಿಸುತ್ತೇವೆಂದರು. ಅನಂತರವಷ್ಟೇ ಡಾ.ಹರ್ಷ ಮತ್ತು ಕುಟುಂಬ ನಿಟ್ಟಿಸಿರುಬಿಟ್ಟಿದೆ. ಗಣತಿ ಸಿಬ್ಬಂದಿ ಸಹ ನಿರಮ್ಮಳರಾಗಿದ್ದಾರೆ.

- - -

(ಸಾಂದರ್ಭಿಕ ಚಿತ್ರ)