ಸಾರಾಂಶ
ಶಿವಮೊಗ್ಗ : ಮುಸ್ಲಿಂ ಸಮುದಾಯದವರು ಗಣಪತಿಗೆ ಹಾರಹಾಕಿ ವಿಸರ್ಜನಾ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿರುವ ಘಟನೆ ಇಮಾಮ್ ಬಾಡ ಮತ್ತು ಸೀಗೆಹಟ್ಟಿಯಲ್ಲಿ ನಡೆದಿದೆ. ಪ್ರತಿ ವರ್ಷ ಗಣಪತಿ ಮೆರವಣಿಗೆಯ ಸಂದರ್ಭದಲ್ಲಿ ಗಣಪತಿ ಮೆರವಣಿಗೆ ಇಮಾಮ್ ಬಾಡ ಮಸೀದಿ ರಸ್ತೆಗೆ ಬರುತ್ತಿದ್ದಂತೆ, ಸ್ಥಳ ಉದ್ವಿಗ್ನವಾಗುತ್ತಿತ್ತು.
ಮಾತಿನ ಚಕಮಕಿ ನಡೆದಿತ್ತು. ಆದರೆ, ಈ ಬಾರಿ ಮಸೀದಿ ಕಮಿಟಿಯವರೆ ಹೂವಿನ ಹಾರ ಹಾಕುವ ಮೂಲಕ ಶಿವಮೊಗ್ಗದಲ್ಲಿ ಸೌಹಾರ್ದತೆ ಮೆರೆದಿದ್ದಾರೆ.ಮುರಾದ್ ನಗರದಲ್ಲಿರುವ ಅಹಮದ್ ಕಾಲೋನಿಯಲ್ಲಿ ಸ್ನೇಹಜ್ಯೋತಿ ಗೆಳೆಯರ ಬಳದಿಂದ ಗಣಪತಿ ಮೂರ್ತಿಯ ವಿಸರ್ಜನಾ ಮೆರವಣಿಗೆ ಗುರುವಾರ ನಡೆದಿದೆ. ಕೆಜಿಎನ್ ಸರ್ಕಲ್, ಸಂದೇಶ್ ಮೋಟಾರ್ ಮೂಲಕ ವಾಪಾಸ್ ಅದೇ ರಸ್ತೆಯಲ್ಲಿ ಇಮಾಬಾಡ ಮಸೀದಿ ರಸ್ತೆಯ ಮೂಲಕ ಸೀಗೆಹಟ್ಟಿ ವೃತ್ತ ತಲುಪಲಿದೆ.ಇಮಾಮ್ ಬಾಡ ಮಸೀದಿ ರಸ್ತೆಗೆ ಬಂದಾಗ ಮಸೀದಿ ಕಮಿಟಿಯ ನೂರುಲ್ಲಾರ ಮತ್ತು ಅವರ ಸಹಚರರು ಮಸೀದಿ ಬಳಿ ಗಣಪನಿಗೆ ಹೂವಿನ ಹಾರಹಾಕಿ ಸೌಹಾರ್ದತೆ ಮೆರೆದಿದ್ದಾರೆ.
ಯಾವಾಗಲೂ ಸೂಕ್ಷ್ಮ ವಲಯ ಎನಿಸಿಕೊಳ್ಳುತ್ತಿದ್ದ ಈ ಜಾಗ ಸೌಹಾರ್ದತೆಗೆ ಸಾಕ್ಷಿಯಾಗಿದೆ. ಇಮಾಮ್ ಬಾಡ ಮಸೀದಿಯವರು ಗಣಪನಿಗೆ ಹೂವಿನ ಹಾರ ಹಾಕಿ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ.* ರಾಗಿಗುಡ್ಡದಲ್ಲಿ 14 ಗಣಪತಿ ವಿಸರ್ಜನೆ ಶಿವಮೊಗ್ಗ: ಕಳೆದ ಬಾರಿ ಕೋಮುಗಲಭೆ ನಡೆದಿದ್ದ ರಾಗಿಗುಡ್ಡದಲ್ಲಿ ಈ ಬಾರಿ ಏಕಕಾಲದಲ್ಲಿ 14 ಗಣಪತಿ ವಿಗ್ರಹಗಳ ವಿಸರ್ಜನೆ ಶಾಂತಿಯುತವಾಗಿ ನೆರವೇರಿದೆ.
ಶಿವಮೊಗ್ಗದ ಹೊರವಲಯದ ರಾಗಿಗುಡ್ಡ ಬಡಾವಣೆ ಕಳೆದ ಬಾರಿ ಈದ್ ಮಿಲಾದ್ ಮೆರವಣಿಗೆಯ ವೇಳೆ ಕಹಿ ಘಟನೆ ಹಿನ್ನೆಲೆಯಲ್ಲಿ ಪೊಲೀಸರ ಬಿಗಿ ಬಂದೋ ಬಸ್ತ್ ನಲ್ಲಿ ಗುರುವಾರ ಗಣಪತಿಗಳ ವಿಸರ್ಜನೆ ನಡೆದಿದೆ.ಛತ್ರಪತಿ ಶಿವಾಜಿ ಯುವಕರ ಸಂಘ, ತಿಲಕ್ ಭಾಯ್ಸ್, ಭುವನೇಶ್ವರಿ ಯುವಕರ ಸಂಘ, ಭಗತ್ ಸಿಂಗ್ ಯುವಕರ ಸಂಘ, ವಿಶ್ವಪ್ರಿಯ ಗಣಪತಿ ಯವಕರ ಸಂಘ, ಕುವೆಂಪು ಯುವಕರ ಸಂಘ, ಮಾರಿಕಾಂಬ ಯುವಕರ ಸಂಘ, ಸಿದ್ಧಿ ವಿನಾಯಕ ಸ್ಟಾರ್ ಯುವಕರ ಸಂಘ ಸೇರಿದಂತೆ 14 ಪ್ರತಿಷ್ಠಾಪನಾ ಗಣಪತಿ ಮೂರ್ತಿಗಳ ವಿಸರ್ಜನೆ ಮಾಡಲಾಗಿದೆ.
ಗಣಪತಿ ಮೂರ್ತಿಗಳ ವಿಸರ್ಜನಾ ಮೆರವಣಿಗೆ ವೇಳೆ ವಿವಿಧ ಸಂಘಟನೆಗಳಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆದಂತೆ ಎಸ್ಪಿ ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ, ಮತ್ತು ಎ.ಜಿ. ಕಾರ್ಯಪ್ಪ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಇತ್ತು. 4 ಡಿವೈಎಸ್ಪಿ, 14 ಪೋಲಿಸ್ ಇನ್ಸ್ಪೆಕ್ಟರ್, 26 ಪಿಎಸ್ಐ, 56 ಎಎಸ್ಐ 416 ಪೊಲೀಸ್ ಹೆಡ್ ಕಾನ್ಸ್ ಟೆಬಲ್ ಮತ್ತು ಪೊಲೀಸ್ ಕಾನ್ಸ್ ಟೆಬಲ್ ಗಳು, 232 ಗೃಹರಕ್ಷಕ ದಳ ಸಿಬ್ಬಂದಿಗಳು, 01-ಆರ್‌ಎಎಫ್ ತುಕಡಿ 3 ಡಿಎಆರ್ ತುಕಡಿ ಮತ್ತು 5 ಕೆಎಸ್ಆರ್.ಪಿ ತುಕಡಿಗಳನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.ರಾಗಿಗುಡ್ಡ ಸರ್ಕಲ್‌ನಿಂದ ತುಂಗಾ ನಾಲೆಯವರೆಗೂ ವಿಸರ್ಜನಾ ಮೆರವಣಿ ನಡೆಯಿತು. ಮಧ್ಯರಾತ್ರಿ ವೇಳೆಗೆ ಒಂದೊಂದಾಗಿ ಒಟ್ಟು ಹದಿನಾಲ್ಕು ಗಣಪತಿಗಳ ಸರತಿ ಸಾಲಿನಲ್ಲಿ ವಿಸರ್ಜನೆ ಮಾಡಲಾಯಿತು.