ಇಸ್ಲಾಂ ಶಾಂತಿ ಪ್ರಿಯ ಧರ್ಮವಾಗಿದ್ದು, ಭಾರತ ದೇಶದ ನೆಲದಲ್ಲಿ ಸಾಮರಸ್ಯದಿಂದ ಮುನ್ನೆಡೆಯುತ್ತಿದೆ.
ಹೂವಿನಹಡಗಲಿ: ವಿಜಯನಗರ ಸಾಮ್ರಾಜ್ಯದಲ್ಲಿ ಶೈವರ ದೇಗುಲಗಳನ್ನು ವೈಷ್ಣವರು, ವೈಷ್ಣವರ ದೇಗುಲಗಳನ್ನು ಶೈವರು ನಾಶ ಮಾಡಿದ್ದಾರೆ ವಿನಾಃ ಮುಸ್ಲಿಂರು ಅಲ್ಲ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ನಾಡೋಜ ಕುಂಬಾರ ವೀರಭದ್ರಪ್ಪ ಹೇಳಿದರು.
ತಾಲೂಕಿನ ತಿಪ್ಪಾಪುರ ಬಳಿ ಎಸ್ಸೆಸ್ಸೆಫ್‌ನ ರಾಜ್ಯ ಮಟ್ಟದ ಸಾಹಿತ್ಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ವಿಜಯನಗರ ಶ್ರೀಮಂತ ಸಾಮ್ರಾಜ್ಯವನ್ನು ಲೂಟಿ ಹೊಡೆದು ಹಾಳು ಮಾಡಿದ್ದು ಮುಸ್ಲಿಂರು ಎಂದು ಗೂಬೆ ಕೂರಿಸುವ ಕೆಲಸ ಇತಿಹಾಸದಲ್ಲಿದೆ.ಆದರೆ ಅದು ತಪ್ಪು ತಿಳಿವಳಿಕೆಯಾಗಿದೆ ಎಂದರು.ಇಸ್ಲಾಂ ಶಾಂತಿ ಪ್ರಿಯ ಧರ್ಮವಾಗಿದ್ದು, ಭಾರತ ದೇಶದ ನೆಲದಲ್ಲಿ ಸಾಮರಸ್ಯದಿಂದ ಮುನ್ನೆಡೆಯುತ್ತಿದೆ. ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿರುವ ಹಿಂದೆ ಮುಸ್ಲಿಂ ಲೇಖಕರ ಕೊಡುಗೆ ಅಪಾರವಾಗಿದೆ. ದೇಶಕ್ಕೆ ಆತಂಕ ಎದುರಾದ ಸಂದರ್ಭದಲ್ಲಿ ಸಾಹಿತ್ಯ ವಲಯ ಸಾಮರಸ್ಯ ಮೂಡಿಸುವ ಕೆಲಸ ಮಾಡಬೇಕಿದೆ. ಯಾವುದೇ ಸಾಹಿತ್ಯ ವಲಯ ಹಾಗೂ ಅಕಾಡೆಮಿ ಮಾಡಬೇಕಾದ ಕೆಲಸ ಎಸ್ಸೆಸ್ಸೆಫ್ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಭಾರತ ದೇಶ ಯಾರಪ್ಪನ ಸ್ವತ್ತಲ್ಲ, ಕೇವಲ ಶೇ. 3ರಷ್ಟಿರುವ ಜನಾಂಗದವರ ದೇಶವಲ್ಲ, ಸರ್ವ ಜಾತಿ ಜನಾಂಗ, ಧರ್ಮಿಯರ ಸ್ವತ್ತು, ಹಿಂದೂ ದೇಶ ಎಂದು ಹೇಳಲು ಹೊರಟವರು ಈವರೆಗೂ ಈ ದೇಶದಲ್ಲಿ ಎಷ್ಟು ಪ್ರಮಾಣ ಅನ್ಯ ಧರ್ಮದ ಜನ ಮುಸ್ಲಿಂಗೆ ಮತಾಂತರವಾಗಿದ್ದಾರೆಂದು ಸ್ಪಷ್ಟಪಡಿಸಲಿ ಎಂದರು.ವಿಶ್ವದಲ್ಲಿರುವ ಎಲ್ಲ ಧರ್ಮಗಳಂತೆ ಇಸ್ಲಾಂ ಧರ್ಮವೂ ಶ್ರೇಷ್ಠವಾಗಿದೆ. ಇಸ್ಲಾಂನಲ್ಲಿ ಮನುಷ್ಯ ಪ್ರೀತಿ ಇದೆ. ಕುರಾನ್‌ನಲ್ಲಿರುವ ಮಾಹಿತಿ ಕನ್ನಡ ಸಾಹಿತ್ಯದ ವಚನಗಳಲ್ಲಿದೆ. ಮಾನವೀಯ ನೆಲೆಯಲ್ಲಿ ಬದುಕುವ ಮುಸ್ಲಿಂರಿಗೆ ಕುರಾನ್ ಶ್ರೇಷ್ಠವಾಗಿದೆ. ಹಿಂದೂ ಧರ್ಮದಲ್ಲಿ ಮದ್ಯದ ಅಂಗಡಿಗಳಿಗೆ ದೇವರುಗಳ ಹೆಸರು ಇಟ್ಟಿದ್ದಾರೆ, ಆದರೆ ಇಸ್ಲಾಂ ಧರ್ಮದ ಹೆಸರಿನಲ್ಲಿ ಮದ್ಯದಂಗಡಿಗಳಿಗೆ ಹೆಸರಿಟ್ಟಿಲ್ಲ, ಮದ್ಯಪಾನ ಪಾಪದ ಕೆಲಸ ಎಂದು ನಂಬಿಕೊಂಡಿದ್ದಾರೆಂದು ಹೇಳಿದರು.
ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಮಾತನಾಡಿ, ರಾಜ್ಯದಲ್ಲಿ ಎಸ್ಸೆಸ್ಸೆಫ್‌ನಿಂದ ಕೋಮುವಾದ, ಜಾತಿವಾದ, ಮೂಢನಂಬಿಕೆ ಕಿತ್ತು ಹಾಕಿ, ಮಕ್ಕಳಲ್ಲಿ ದೇಶಾಭಿಮಾನ ಬೆಳೆಸಿ ನಾವೇಲ್ಲ ಭಾರತೀಯರೆಂಬ ಭಾವನೆಯಲ್ಲಿ ಬದುಕುತ್ತಿದ್ದೇವೆ ಎಂದರು.ಈ ಸಾಹಿತ್ಯೋತ್ಸವಕ್ಕೆ ರಾಜ್ಯದ 26 ಜಿಲ್ಲೆಗಳಿಂದ 2 ಸಾವಿರ ವಿದ್ಯಾರ್ಥಿಗಳಿಗೆ 150 ವಿವಿಧ ಸ್ಪರ್ಧೆ ಆಯೋಜಿಸಿದ್ದೇವೆ, ಅವರಲ್ಲಿರುವ ಸೂಕ್ತ ಪ್ರತಿಭೆ ಹೊರ ತೆಗೆದು ಈ ನಾಡಿನ ಸ್ವತ್ತಾಗಿ ಮಾಡಿದ್ದೇವೆ. ಕಳೆದ 50 ವರ್ಷಗಳಲ್ಲಿ ಒಬ್ಬ ಎಸ್ಸೆಸ್ಸೆಫ್ ಕಾರ್ಯಕರ್ತನ ಮೇಲೆ ಒಂದು ಕೇಸಿಲ್ಲ, ಯಾವುದೇ ಕಾರಣಕ್ಕೂ ಕಾನೂನು ಹಾಗೂ ಸಂವಿಧಾನ ವಿರುದ್ಧ ನಡೆದಿಲ್ಲ, ಈ ದೇಶದ ಮಣ್ಣಿನ ಋಣ ತೀರಿಸಲು ಸಿದ್ದರಿದ್ದೇವೆ, ಮಕ್ಕಳು ಯಾವುದೇ ಕಾರಣಕ್ಕೂ ಮದ್ಯ ವ್ಯಸನಿಗಳಾಗಬಾರದು, ಕ್ಷಣಿಕ ಸುಖಕ್ಕೆ ಸುಭದ್ರ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ ಎಂದರು.
ವಾರದ ಗೌಸ್ ಮೊಹಿದೀನ್ ಅಧ್ಯಕ್ಷತೆ ವಹಿಸಿದ್ದರು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಐಗೋಳ್ ಚಿದಾನಂದ, ಎಸ್ಸೆಸ್ಸೆಫ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ಮಾತನಾಡಿದರು.ಅನ್ವರ್ ಅಸ್‌ಅದಿ, ಅಶ್ರಫ್ ಸಖಾಫಿ, ಜುನೈದ್ ಸಖಾಫಿ, ಸಿನಾನ್ ಸಖಾಫಿ, ಮೆಹಬೂಬ್, ಇಸ್ಮಾಯಿಲ್ ಎಲೆಗಾರ್ ಸೇರಿದಂತೆ ಇತರರಿದ್ದರು.