ಮರಿಯಮ್ಮನಹಳ್ಳಿ: ಪಟ್ಟಣದಲ್ಲಿ ಸೋಮವಾರ ಸಂಜೆ ನಡೆದ ಹಿಂದೂ ಸಮಾವೇಶದಲ್ಲಿ ಪಾಲ್ಗೊಂಡಿದ್ದವರಿಗೆ ಸ್ಥಳೀಯ ಮುಸ್ಲಿಂ ಸಮಾಜದ ಯುವಕರು ಹಣ್ಣು-ಹಂಪಲು, ಮಜ್ಜಿಗೆ, ನೀರು ಹಾಗೂ ತಂಪುಪಾನೀಯ ವಿತರಿಸುವ ಮೂಲಕ ಭಾವೈಕ್ಯತೆ ಮೆರೆದರು.
ಪಟ್ಟಣದಲ್ಲಿ ಎಂದಿಗೂ ಹಿಂದೂ-ಮುಸ್ಲಿಂ ಘರ್ಷಣೆ ನಡೆದಿಲ್ಲ. ಇದೇ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಮುಸ್ಲಿಂ ಯುವಕರು ತಿಳಿಸಿದರು.ಸಮಾವೇಶದಲ್ಲಿ ಸುಮಾರು 70 ಸಾವಿರ ರೂಪಾಯಿಯ ಕರ್ಬೂಜ (500) ಹಣ್ಣು, ಕಲ್ಲಂಗಡಿ 500, ಬಾಳೆ 500 ಗೊನೆ, 20 ಕೆಜಿ ಕರ್ಜೂರ, 500 ಲೀಟರ್ ಮಜ್ಜಿಗೆ, 2500 ನೀರಿನ ಬಾಟಲ್ ಹಾಗೂ ಇನ್ನಿತರ ತಂಪು ಪಾನೀಯಗಳನ್ನು ಹಿಂದೂಗಳಿಗೆ ವಿತರಿಸಿದರು.
ಪಟ್ಟಣದಲ್ಲಿ ಭಾವೈಕ್ಯತೆಯ ಬುನಾದಿಯನ್ನು ಮತ್ತಷ್ಟು ಬಲಪಡಿಸಿ ದೇಶದ ಏಕತೆ ಎತ್ತಿ ಹಿಡಿಯಲು ಹಿಂದೂ ಸಮಾವೇಶದಲ್ಲಿ ಭಾಗವಹಿಸಿದವರನ್ನು ಸ್ವಾಗತಿಸಿ ತಂಪು ಪಾನೀಯಗಳನ್ನು ಮತ್ತು ಹಣ್ಣು ಹಂಪಲುಗಳನ್ನು ವಿತರಿಸಲಾಗಿದೆ. ಪ್ರೀತಿ, ವಿಶ್ವಾಸದಿಂದ ಹಿಂದೂಗಳು ಸ್ವೀಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ಬಾಂಧವ್ಯ ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಮುಸ್ಲಿಂ ಯುವಕರು ಹೇಳಿದರು. ಜಾಕೀರ್ ಹುಸೇನ್, ರೆಹಮಾನ್, ರಿಯಾಜ್, ಅಬ್ಬು, ಸಿರಾಜ್, ಇಂಡಿ ನಿಯಾಜ್ ಸೇರಿದಂತೆ ಮುಸ್ಲಿಂ ಯುವಕರು ಇತರರಿದ್ದರು.ಶೋಭಾಯಾತ್ರೆಯಲ್ಲಿ ಜಾನಪದ ಕಲಾ ತಂಡಗಳ ಮೆರಗುಮರಿಯಮ್ಮನಹಳ್ಳಿ:
ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾವೇಶದ ಅಂಗವಾಗಿ ಸೋಮವಾರ ಸಂಜೆ ನಡೆದ ಶೋಭಾಯಾತ್ರೆಯಲ್ಲಿ ಜಾನಪದ ವಾದ್ಯಗಳ ಮೆರವಣಿಗೆ ಮೆರಗು ನೀಡಿತು. ಪಟ್ಟಣದ ಗುರುಪಾದ ದೇವರಮಠದ ಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮೀಜಿ, ಜಿ. ನಾಗಲಾಪುರದ ಶ್ರೀಗುರು ಒಪ್ಪತ್ತೇಶ್ವರಮಠದ ನಿರಂಜನಪ್ರಭು ಮಹಾಸ್ವಾಮಿಗಳು ಗೋ ಪೂಜೆ ನೆರವೇರಿಸಿ ಶೋಭಯಾತ್ರೆಗೆ ಚಾಲನೆ ನೀಡಿದರು. ವಿವಿಧ ಕಲಾತಂಡಗಳು, ಝಾನ್ಸಿರಾಣಿ ಲಕ್ಷ್ಮೀಬಾಯಿ, ಸ್ವಾಮಿ ವಿವೇಕಾನಂದ, ಸುಭಾಷ್‍ಚಂದ್ರ ಬೋಸ್, ಭಗತ್‍ಸಿಂಗ್ ಅವರ ವೇಷಭೂಷಣ ತೊಟ್ಟ ಮಕ್ಕಳು ಮೆರವಣಿಗೆಗೆ ಮೆರಗು ತಂದರು. ಪಟ್ಟಣದ ತುಂಬೆಲ್ಲ ಕೇಸರಿ ಧ್ವಜಗಳು ರಾರಾಜಿಸುತ್ತಿದ್ದವು. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.ಪಟ್ಟಣದ ಪಾದಗಟ್ಟಿ ಆಂಜನೇಯಸ್ವಾಮಿ ದೇವಸ್ಥಾನದಿಂದ ಶೋಭಾಯಾತ್ರೆ ಆರಂಭಗೊಂಡಿತು. ಶಾಸಕ ಕೆ. ನೇಮರಾಜ ನಾಯ್ಕ್, ಹೊಸಪೇಟೆ ಗಣಿ ಉದ್ಯಮಿ ಶ್ಯಾಮ್ ಸಿಂಗ್, ಹಿಂದೂ ಸಮಾವೇಶದ ಸಮಿತಿಯ ಅಧ್ಯಕ್ಷ ಡಾ. ಜಿ.ಎಂ. ಸೊಮೇಶ್ವರ, ಹಿಂದೂ ಸಮಾವೇಶ ಸಮಿತಿಯ ಮುಖಂಡರಾದ ಎಸ್. ಕೃಷ್ಣನಾಯ್ಕ್ ಮತ್ತಿತರರು ಭಾಗವಹಿಸಿದ್ದರು.