ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಹಿಂದೂ ಜಾಗರಣಾ ಸಮಿತಿ ಪ್ರತಿಷ್ಠಾಪಿಸಿರುವ ಮಹಾಗಣಪತಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪಟ್ಟಣದ ಮುಸ್ಲಿಮರು ನಾಡಿಗೆ ಕೋಮು ಸೌಹಾರ್ದತೆಯ ಸಂದೇಶ ಸಾರಿದರು.ರಾಜ್ಯಸಭೆ ಮಾಜಿ ಉಪ ಸಭಾಪತಿ ಕೆ.ರೆಹಮಾನ್ ಖಾನ್ ಅವರ ಸಹೋದರ ಪುರಸಭೆ ಮಾಜಿ ಅಧ್ಯಕ್ಷ ಕೆ.ಗೌಸ್ ಖಾನ್ ನೇತೃತ್ವದಲ್ಲಿ ಪಟ್ಟಣದ ಬಸ್ ನಿಲ್ದಾಣದ ಬಳಿ ಮುಖ್ಯರಸ್ತೆಯಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾ ಗಣಪತಿ ಮಂಟಪಕ್ಕೆ ಆಗಮಿಸಿದ ಮುಸ್ಲಿಂ ಸಮುದಾಯದ ಯುವ ಮುಖಂಡರು ವಿಶೇಷ ಪೂಜೆ ಸಲ್ಲಿಸಿ, ನೆರೆದಿದ್ದ ಭಕ್ತರಿಗೆ ಪ್ರಸಾದ ವಿತರಿಸಿದರು. ಗಣೇಶ ಮೂರ್ತಿಗೆ ಬೃಹತ್ ಹೂವಿನ ಹಾರ ಹಾಕಿ ತಮ್ಮ ಭಕ್ತಿ ಸಮರ್ಪಿಸಿದ ಮುಸ್ಲಿಮರು ಅರ್ಚಕರ ಶ್ಲೋಕ ಪಠಣದ ಮೂಲಕ ಮಹಾಗಣಪತಿಗೆ ಭಕ್ತಿ ನಮನ ಸಲ್ಲಿಸಿದರು.
ಈ ವೇಳೆ ಮುಖಂಡ ಕೆ.ಗೌಸ್‌ಖಾನ್ ಮಾತನಾಡಿ, ದೇವನೊಬ್ಬ ನಾಮ ಹಲವು, ನಾವು ಆಚರಿಸುವ ಧಾರ್ಮಿಕ ಸಂಪ್ರದಾಯಗಳು ಪೂಜೆ ಪುರಸ್ಕಾರಗಳು ಬೇರೆ ಬೇರೆಯಾದರೂ ಜಗತ್ತಿಗೆ ದೇವರು ಒಬ್ಬನೆ. ವಿಘ್ನ ನಿವಾರಕನಾದ ಗಣಪತಿಯನ್ನು ಹಿಂದೂ- ಮುಸ್ಲಿಂ ಎಂದು ಭೇದಭಾವ ಮಾಡದೆ ಎಲ್ಲರೂ ಒಂದಾಗಿ ಪೂಜಿಸಿದರೆ ದೇಶದ ಭಾವೈಕ್ಯತೆ ಅಡಗಿದೆ ಎಂದರು.ಇತ್ತೀಚಿಗೆ ಜಿಲ್ಲೆಯಲ್ಲಿ ಕೆಲವು ಕಿಡಿಗೇಡಿಗಳು ಕೋಮು ಸೌಹಾರ್ದತೆಗೆ ಭಂಗ ತರುವ ಕೆಲಸ ಮಾಡುತ್ತಿದ್ದಾರೆ. ದೇಶದ ನಾವೆಲ್ಲರೂ ಹಿಂದೂ ಬಾಂಧವರೊಂದಿಗೆ ಸ್ನೇಹ-ಸೌಹಾರ್ಧತೆಯಿಂದ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಒಂದಾಗಿ ನೆಮ್ಮದಿಯಿಂದ ಜೀವನ ನಡೆಸುತ್ತಿವೆ ಎಂದರು.
ಜಿಲ್ಲೆಯ ನಾಗಮಂಗಲ ಹಾಗೂ ಮದ್ದೂರಿನಲ್ಲಿ ನಡೆದಿರುವ ಘಟನೆಯು ಇಡಿ ನಾಗರೀಕ ಸಮಾಜವೇ ತಲೆತಗ್ಗಿಸುವಂತಹದ್ದು. ಮಹಾಗಣಪತಿಯ ಮೂರ್ತಿ ಮೇಲೆ ಕಲ್ಲೆಸೆಯುವುದು ಘೋರ ಅಪರಾಧ. ಈ ವಿಚಾರದಲ್ಲಿ ಯಾರೇ ತಪ್ಪು ಮಾಡಿದರೂ ಕೂಡ ತಕ್ಕ ಶಿಕ್ಷೆ ಆಗಲೇಬೇಕು ಎಂದರು.ಮುಸ್ಲಿಮರು ಬಹುಸಂಖ್ಯಾತ ಹಿಂದೂ ಬಾಂಧವರ ಭಾವನೆಗಳಿಗೆ ಧಕ್ಕೆಯನ್ನು ಉಂಟುಮಾಡದೆ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಬದುಕು ನಡೆಸುವುದನ್ನು ರೂಢಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಪೂಜಾ ಕಾರ್ಯಕ್ರಮದಲ್ಲಿ ಪಟ್ಟಣ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕಿ ಸುಮಾರಾಣಿ, ಗ್ರಾಮಾಂತರ ಠಾಣೆ ಆರಕ್ಷಕ ನಿರೀಕ್ಷಕ ಆನಂದೇಗೌಡ, ಪುರಸಭೆ ಮಾಜಿ ಅಧ್ಯಕ್ಷ ನಟರಾಜ್, ಹಿಂದೂಪರ ಸಂಘಟನೆಗಳ ಕಾರ್ಯಕರ್ತರಾದ ಭಾಸ್ಕರ್, ಬಾಲು, ಮುರುಗೇಶ್, ಸುಭಾನ್, ಮುಸ್ಲಿಂ ಬ್ಲಾಕ್ ಇಕ್ಬಾಲ್, ಅಜ್ಮತುಲ್ಲಾ ಶರೀಫ್, ಸಲ್ಲೂ,, ಜಮೀರ್ ಖಾನ್, ಸೈಯದ್ ರಿಯಾಜ್, ಬಶೀರ್ ಅಹಮದ್, ಸೈಯ್ಯದ್ ರಿಯಾಜ್ ನಲ್ಲಿ, ಉದಯಫ್ ಕೇರಿ, ಸೈಯದ್ ಇರ್ಫಾನ್, ಆಯಾಜ್ ಶರೀಫ್, ನವೀದ್ ಅಹಮದ್, ಸೈಯದ್ ಜಮೀಲ್, ಜಮೀಲ್ ಅಹಮದ್, ಸೈಯದ್ ಕಲೀಲ್ ಸೇರಿದಂತೆ ನೂರಾರು ಮುಸ್ಲಿಂ ಬಾಂಧವರು ಭಾಗವಹಿಸಿ ಪ್ರಸಾದ ವಿತರಿಸಿ ಕೋಮು ಸೌಹಾರ್ದತೆಯನ್ನು ಮೆರೆದರು.