ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ/ಮದ್ದೂರು
ಬುಧವಾರ ನಡೆಯಲಿರುವ ಸಾಮೂಹಿಕ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಮುಸಲ್ಮಾನರು ದೂರ ಇರುವುದು ಒಳ್ಳೆಯದು. ಪ್ರಚೋದನೆ ನೀಡುವವರನ್ನೂ ಪೊಲೀಸರಿಗೆ ಹಿಡಿದುಕೊಡುವಂತೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಗಣೇಶ ವಿಸರ್ಜನೆ ಸಂಬಂಧ ಶಾಂತಿಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮೆರವಣಿಗೆ ಸಾಗುವಾಗ ಘೋಷಣೆ ಕೂಗಿದರೆ ಆ ಕಡೆ ತಿರುಗಿಯೂ ನೋಡಬೇಡಿ. ಸಾಧ್ಯವಾದರೆ ದೂರದಿಂದ ಮೆರವಣಿಗೆ ನೋಡಿ ಸಂತೋಷ ಪಡಿ. ಒಳ್ಳೆಯದನ್ನು ಮಾಡುವ ಮನಸ್ಸಿದ್ದರೂ ಅಲ್ಲಿಗೆ ಹೋಗಬೇಡಿ. ಒಳ್ಳೆಯದನ್ನು ಮಾಡಲು ಹೋಗಿ ಅಲ್ಲಿ ಇನ್ನೊಂದು ಆಗಬಹುದು. ಹಾಗಾಗಿ ಗಣೇಶೋತ್ಸವದಿಂದ ದೂರ ಉಳಿಯುವಂತೆ ಮುಸ್ಲಿಂ ಮುಖಂಡರಿಗೆ ಹೇಳಿದರು.ನಾಗಮಂಗಲದಲ್ಲಿ ಈ ಬಾರಿ ಗಣೇಶೋತ್ಸವ ಸಮಯದಲ್ಲಿ ಮುಸ್ಲಿಮರು ಅರ್ಧದಿನ ಅಂಗಡಿ ಮುಂಗಟ್ಟುಗಳನ್ನೇ ಮುಚ್ಚಿದ್ದರು. ಇದರಿಂದ ಗಣೇಶ ವಿಸರ್ಜನೆ ಶಾಂತಿಯುತವಾಗಿ ನಡೆಯಿತು. ಅದೇ ರೀತಿ ಮದ್ದೂರಿನಲ್ಲಿರುವ ಮುಸಲ್ಮಾನರೂ ಬುಧವಾರದ ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಸಹಕರಿಸಬೇಕು. ಯಾರಾದರೂ ಪ್ರಚೋದನೆ ನೀಡಲು ಮುಂದಾದರೆ, ಪ್ರಚೋದನೆ ನೀಡಲು ಬರುವವರನ್ನೂ ನೀವೇ ಪೊಲೀಸರಿಗೆ ಹಿಡಿದುಕೊಡುವಂತೆ ಸೂಚಿಸಿದರು.
ನಿಮ್ಮಲ್ಲಿ ಸೌಹಾರ್ದತೆಯನ್ನು ಕಾಪಾಡಿಕೊಂಡು ಹೋಗಬಹುದೆಂಬ ಮನಸ್ಸಿದ್ದರೂ ನಿಮ್ಮ ಮಕ್ಕಳಲ್ಲಿ ಆ ಮನಸ್ಸು ಇಲ್ಲದಿರಬಹುದು. ಅವರಿಗೂ ತಿಳಿವಳಿಕೆ ಹೇಳಿ ಶಾಂತಿಯನ್ನು ಕದಡದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಿದರು.ಈಗಾಗಲೇ ಕೆರಗೋಡು, ನಾಗಮಂಗಲ, ಈಗ ಮದ್ದೂರಿನಲ್ಲಿ ಸಂಘರ್ಷಗಳು ನಡೆದಿವೆ. ಈ ಜಿಲ್ಲೆಯಲ್ಲಿ ಮತ್ತೊಮ್ಮೆ ಗಲಭೆ ಮರುಕಳಿಸಬಾರದು. ಜಿಲ್ಲಾಧಿಕಾರಿ, ಆರಕ್ಷಕ ಅಧೀಕ್ಷಕರು ಇದರ ಜವಾಬ್ದಾರಿ ತೆಗೆದುಕೊಳ್ಳಬೇಕು. ಹಿಂದೂ, ಮುಸ್ಲಿಂ ಸಮುದಾಯದವರು ಪರಸ್ಪರ ಸಹಕಾರ ಕೊಡಬೇಕು. ಪ್ರಚೋದನೆ ಮಾಡುವವರನ್ನ ದೂರವಿಡುವಂತೆ ಹೇಳಿದರು.
ಯಾರೇ ತಪ್ಪು ಮಾಡಿದ್ದರೂ ಕಟ್ಟು ನಿಟ್ಟಿನ ಕ್ರಮ ಆಗಲಿದೆ. ವಿರೋಧ ಪಕ್ಷದವರು ಸತ್ಯ ಒಪ್ಪಿಕೊಂಡರೆ ಅವರಿಗೆ ಕೆಲಸವೇ ಇರುವುದಿಲ್ಲ. ಏನಾದರೂ ಎಳೆಯಬೇಕು ಎಂದು ವಿರೋಧ ಪಕ್ಷದವರು ನೋಡುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ಪೊಲೀಸರ ಕಾರ್ಯವೈಖರಿಯನ್ನು ಹೊಗಳಿ, ವಿಪಕ್ಷದಲ್ಲಿದ್ದಾಗ ತೆಗಳುತ್ತಿದ್ದಾರೆ ಎಂದು ದೂಷಿಸಿದರು.ಮದ್ದೂರು ಶಾಸಕ ಉದಯ್ ವಾರಕ್ಕೆ ಎರಡು ಮೂರು ದಿನ ಸ್ಥಳೀಯರಿಗೆ ಸಿಗುತ್ತಿದ್ದರು. ಈಗ ಮಗಳ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ. ಆದರೆ, ಉದಯ್ ಕಾಣೆಯಾಗಿದ್ದಾರೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಂಗ್ಯ ಮಾಡುತ್ತಿದ್ದಾರೆ. ನಾನು ಘಟನೆ ನಡೆದ ಸ್ಥಳಕ್ಕೆ ಹೋಗಿದ್ದೆ. ತಪ್ಪು ನಡೆದಿರುವುದು ನಿಜ. ಸ್ಥಳೀಯ ಪೊಲೀಸರು, ಜನಪ್ರತಿನಿಧಿಗಳು, ಮುಖಂಡರು ಎಚ್ಚರಿಕೆ ವಹಿಸಿದರೆ ಇಂತಹ ಘಟನೆಗಳು ನಡೆಯುವುದಿಲ್ಲ ಎಂದರು.
ಮದ್ದೂರಿನಲ್ಲಿ ಎಂದೂ ಇಂತಹ ಘಟನೆ ನಡೆಯದಿದ್ದರಿಂದ ಮುನ್ನೆಚ್ಚರಿಕೆ ವಹಿಸುವಲ್ಲಿ ಪೊಲೀಸರು ಎಡವಿದ್ದಾರೆ. ಘಟನೆ ಬೆನ್ನಲ್ಲೇ ಯಾವುದೇ ಮುಲಾಜಿಗೆ ಒಳಗಾಗದೆ ಕ್ರಮ ತೆಗೆದುಕೊಳ್ಳಲಾಗಿದೆ. ಹಿಂದೂ-ಮುಸ್ಲಿಮರು ಪರಸ್ಪರ ಸೌಹಾರ್ದತೆ ಜೀವನ ನಡೆಸಬೇಕು. ಮತ್ತೆಂದಿಗೂ ಎರಡೂ ಸಮುದಾಯಗಳ ನಡುವೆ ಕಲಹ ಏರ್ಪಡದಂತೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದರು.ಸಭೆಯಲ್ಲಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಆರಕ್ಷಕ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ಮದ್ದೂರು ನಗರಸಭೆ ಅಧ್ಯಕ್ಷೆ ಕೋಕಿಲಾ, ಉಪಾಧ್ಯಕ್ಷ ಪ್ರಸನ್ನ ಇತರರಿದ್ದರು.
ಕಾಂಗ್ರೆಸ್ ಕಾರ್ಯಕರ್ತರ ಸಭೆಯಂತಿದ್ದ ಶಾಂತಿ ಸಭೆಕನ್ನಡಪ್ರಭ ವಾರ್ತೆ, ಮಂಡ್ಯ
ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಪುರದ ಖಾಸಗಿ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಶಾಂತಿಸಭೆಯಿಂದ ದೂರ ಉಳಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸಭೆಯನ್ನು ಬಹಿಷ್ಕರಿಸಿದ್ದರು. ಇದರ ಪರಿಣಾಮ ಸಭೆ ಕಾಂಗ್ರೆಸ್ ಕಾರ್ಯಕರ್ತರ ಸಭೆಯಂತೆ ಕಂಡುಬಂದಿತು.ನಿರೀಕ್ಷೆಯಂತೆ ಸಭೆಗೆ ಬಿಜೆಪಿ, ಹಿಂದೂ ಮುಖಂಡರು ಹಾಗೂ ಕೆಲವು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಗೈರುಹಾಜರಾಗಿದ್ದರು. ಮುಸ್ಲಿಂ ಸಮುದಾಯದ ಮುಖಂಡರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಧಿಕಾರಿಗಳಿಗಷ್ಟೇ ಸೀಮಿತವಾಗಿ ಸಭೆ ನಡೆಯಿತು.
ಮಧ್ಯಾಹ್ನ 3 ಗಂಟೆಗೆ ನಡೆಯಬೇಕಿದ್ದ ಶಾಂತಿಸಭೆಯನ್ನು 45 ನಿಮಿಷ ವಿಳಂಬವಾಗಿ ಆರಂಭಿಸಿದರೂ ಹಿಂದೂಪರ ಸಂಘಟನೆಗಳ ಯಾವೊಬ್ಬ ಮುಖಂಡರೂ ಸಭೆಗೆ ಆಗಮಿಸದಿದ್ದರಿಂದ ಸಭೆ ಆಗಮಿಸಿದ್ದ ಕಾರ್ಯಕರ್ತರು, ಮುಸ್ಲಿಮರೊಂದಿಗೆ ಸಭೆ ನಡೆಸಿ ಮುಕ್ತಾಯಗೊಳಿಸಿದರು.ಸಭೆ ನಡೆಸುವ ವಿಷಯ ಬಹುತೇಕ ಮಂದಿಗೆ ತಿಳಿಸಿಲ್ಲ. ಘಟನೆ ನಡೆದ ಸ್ಥಳದ ಪ್ರದೇಶದ ಜನರಿಗೆ ಶಾಂತಿಸಭೆಯ ವಿಷಯ ಗೊತ್ತಿಲ್ಲ. ಶಾಂತಿ ಕದಡಿದವರ ಕಿಡಿಗೇಡಿಗಳ ವಿರುದ್ಧ ಪ್ರತಿಭಟಿಸಿದರೆ ಅಮಾಯಕರ ಮೇಲೂ ಎಫ್‌ಐಆರ್ ದಾಖಲಿಸಿದ್ದಾರೆ. ಇಂತಹ ಸಮಯದಲ್ಲಿ ಎಂತಹ ಶಾಂತಿಸಭೆ ಇವರು ನಡೆಸೋದು ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದರು.ಶಾಂತಿ ಸಭೆಗೆ ನಾವು ಹೋಗುವುದಿಲ್ಲ: ಡಾ.ಇಂದ್ರೇಶ್
ಕನ್ನಡಪ್ರಭ ವಾರ್ತೆ ಮದ್ದೂರುಉಸ್ತುವಾರಿ ಸಚಿವರು ಒಂದೆರೆಡು ಕಲ್ಲೆಸೆದಿದ್ದಾರೆ ಅಂತಾರೆ. ಗೃಹ ಸಚಿವರು ಸಣ್ಣ ಘಟನೆ ಅಂತಾರೆ. ಘಟನೆ ನಡೆಯದಂತೆ ತಡೆಗಟ್ಟಬೇಕಿತ್ತು. ಈಗ ಸಭೆ ಮಾಡ್ರಿ ಏನು ಪ್ರಯೋಜನ. ಹಾಗಾಗಿ ಸಚಿವರು ಕರೆದಿರುವ ಶಾಂತಿ ಸಭೆಗೆ ಹೋಗದಿರಲು ನಿರ್ಧರಿಸಿದ್ದೇವೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಇಂದ್ರೇಶ್ ಸ್ಪಷ್ಟಪಡಿಸಿದರು.
ಇದೇ ವೇಳೆ ಸೋಮವಾರ ಘಟನೆ ಖಂಡಿಸಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿದ ಅವರು, ಪ್ರಕರಣ ದಾಖಲಿಸುತ್ತಾರೆ ಎಂಬುದು ನಮಗೆ ಮೊದಲೇ ಗೊತ್ತಿತ್ತು. ನ್ಯಾಯ ಕೇಳಲು ಹೋದವರ ಮೇಲೆ ಅನ್ಯಾಯ ಮಾಡಿದ್ದಾರೆ. ನಮ್ಮವರ ಮೇಲೆಯೇ ದೂರು ದಾಖಲಿಸಿದ್ದಾರೆ. ಮುಂದೆ ಮತ್ತಷ್ಟು ಜನರ ವಿರುದ್ಧವೂ ಎಫ್‌ಐಆರ್ ಹಾಕುತ್ತಾರೆ ಎಂದು ಪೊಲೀಸರ ನಡೆಗೆ ಖಂಡಿಸಿದ ಡಾ.ಇಂದ್ರೇಶ್, ಪ್ರಸ್ತುತ ೫೦೦ ಜನರ ಮೇಲೆ ಎಫ್‌ಐಆರ್ ದಾಖಲಿಸಿದ್ದು, ಬಿಜೆಪಿ ಲೀಗಲ್ ಟೀಂ ಅವರ ಜೊತೆ ಇರುತ್ತೆ ಎಂದು ಭರವಸೆ ನೀಡಿದರು.ಶಾಂತಿ ಕಾಪಾಡುವ ಭರವಸೆ ಹುಸಿ: ಡಾ.ಕುಮಾರಕನ್ನಡಪ್ರಭ ವಾರ್ತೆ ಮಂಡ್ಯ/ಮದ್ದೂರು
ಯಾವುದೇ ಹಿಂದೂ-ಮುಸ್ಲಿಮರ ಹಬ್ಬಗಳು ನಡೆಯುವ ಮುನ್ನ ಶಾಂತಿ ಸಭೆಯನ್ನು ನಡೆಸುತ್ತೇವೆ. ಅದರಲ್ಲಿ ಅಹಿತಕರ ಘಟನೆಗಳಿಗೆ ಆಸ್ಪದ ನೀಡುವುದಿಲ್ಲವೆಂದು ಭರವಸೆ ನೀಡುತ್ತೀರಿ. ಆದರೆ, ಆ ಭರವಸೆ ಹುಸಿಯಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ವಿಷಾದಿಸಿದರು.ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿ, ಯಾವುದೇ ಧರ್ಮದ ಜನರ ಧಾರ್ಮಿಕ ಭಾವನೆಗಳಿಗೆ ಯಾರೂ ಧಕ್ಕೆ ತರಬಾರದು. ಶಾಂತಿಯನ್ನು ಕದಡುವವರು ಸಂಸ್ಕಾರವಂತರಲ್ಲ. ಅವರು ಸಮಾಜದಲ್ಲಿ ಬದುಕುವುದಕ್ಕೆ ಯೋಗ್ಯರೂ ಅಲ್ಲ. ಸಾಮರಸ್ಯವನ್ನು ಕಾಪಾಡುವ ಹೊಣೆಗಾರಿಕೆ ಪ್ರತಿಯೊಬ್ಬರದ್ದಾಗಿದೆ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚುವವರಿಗೆ ಕಾನೂನು ಪಾಠ ಕಲಿಸಲಿದೆ. ಮಂಡ್ಯ ಕೃಷಿ ಮತ್ತು ಅಭಿವೃದ್ಧಿಯಲ್ಲಿ ಬೆಳವಣಿಗೆ ಕಾಣಬೇಕು. ಇಲ್ಲಿ ಧರ್ಮ ಧರ್ಮಗಳ ನಡುವೆ ಯುದ್ಧ ಇರಬಾರದು. ಮಕ್ಕಳು ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡುತ್ತಿದ್ದರೆ ಅವರನ್ನು ತಿದ್ದಿ ಸರಿದಾರಿಗೆ ತರುವ ಹೊಣೆಗಾರಿಕೆ ತಂದೆ-ತಾಯಿಗಳದ್ದಾಗಿದೆ ಎಂದರು.ಯಾರು ಏನು ಹೇಳಿದರು?ಕಲ್ಲು ತೂರಾಟ ಯಾರೇ ಕಿಡಿಗೇಡಿಗಳು ಮಾಡಿದ್ದರೂ ಅವರಿಗೆ ಶಿಕ್ಷೆ ಆಗಬೇಕು. ಇದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಸಂಪೂರ್ಣ ತನಿಖೆ ಮಾಡಬೇಕು. ಮದ್ದೂರು ಪಟ್ಟಣದಲ್ಲಿ ಗಾಂಜಾ ಮಾರಾಟ ಹೆಚ್ಚಾಗಿದೆ. ಇದರಿಂದಾಗಿಯೇ ಘಟನೆ ನಡೆದಿದೆ. ಈ ಬಗ್ಗೆ ತನಿಖೆಯಾಗಬೇಕು.
- ಆಸೀಫ್ ಪಾಷ, ಮುಸ್ಲಿಂ ಮುಖಂಡಮದ್ದೂರಿನಲ್ಲಿ ಇಂತಹ ಘಟನೆ ಹಿಂದೆಂದೂ ನಡೆದಿರಲಿಲ್ಲ. ಗಣೇಶ ಉತ್ಸವಗಳಲ್ಲಿ ಮುಸಲ್ಮಾನರು ಬಂದು ಪ್ರಸಾದ ಸ್ವೀಕರಿಸಿದ್ದಾರೆ. ಪ್ರತಿಷ್ಠಾಪನೆಗೆ-ವಿಸರ್ಜನೆಗೆ ಸಹಕಾರವನ್ನೂ ನೀಡಿದ್ದಾರೆ. ಈಗ ನಡೆದಿರುವ ಘಟನೆ ಆತಂಕ ಮೂಡಿಸಿದೆ. ಘಟನೆ ಹಿಂದೆ ಯಾರಿದ್ದರೂ ಶಿಕ್ಷೆಯಾಗಬೇಕು. ಸಾಮೂಹಿಕ ಗಣೇಶ ಮೂರ್ತಿ ವಿಸರ್ಜನೆಗೆ ಎಲ್ಲರೂ ಸಹಕರಿಸಬೇಕು. ಎಲ್ಲರೂ ಶಾಂತಿಯುತವಾಗಿ ಪಾಲ್ಗೊಳ್ಳಬೇಕು.- ಮಹದೇವಪ್ಪ, ಸ್ಥಳೀಯಶಾಂತಿ ಸಭೆಗೆ ಕೆಲವರು ಬಂದಿಲ್ಲ. ಇಲ್ಲಿ ಬಂದಿರುವವರಿಗೆ ಅಲ್ಲಿ ನಡೆದಿರೋ ವಿಚಾರ ಗೊತ್ತಿಲ್ಲ. ಜೊತೆಗೆ ಇಂದಿನ ಶಾಂತಿಸಭೆಗೆ ಕೆಲವರನ್ನ ಕರೆದಿಲ್ಲ. ನಾವು ಏರಿಯಾದಲ್ಲಿ ಸಹೋದರರ ರೀತಿಯಲ್ಲಿ ಎಲ್ಲರೂ ಇದ್ದೇವೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಕೆಲವರು ತಪ್ಪು ಮಾಡದೇ ಇರುವವರ ವಿರುದ್ಧ ಕೂಡ ಎಫ್‌ಐಆರ್ ಮಾಡಲಾಗಿದೆ. ತಪ್ಪು ಮಾಡಿದವರು ತಪ್ಪಿಸಿಕೊಂಡಿದ್ದಾರೆ. ತಪ್ಪು ಮಾಡದೇ ಇರುವ ಕೆಲವು ಮುಸ್ಲಿಂರನ್ನ ಬಂಧಿಸಿದ್ದಾರೆ.
- ರಮೇಶ್, ಸ್ಥಳೀಯ ನಿವಾಸಿ