ಮೂಲಭೂತ ಹಕ್ಕುಗಳ ಬಗ್ಗೆ ಕಡ್ಡಾಯವಾಗಿ ತಿಳಿದುಕೊಳ್ಳಬೇಕು: ಜಮೀರ್ ಆಹಮ್ಮದ್

| Published : Feb 20 2024, 01:46 AM IST

ಸಾರಾಂಶ

ಸಂವಿಧಾನದ ಪೀಠಿಕೆ ಮತ್ತು ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಕಡ್ಡಾಯವಾಗಿ ತಿಳಿದುಕೊಳ್ಳಬೇಕು

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಸಂವಿಧಾನದ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಸಂವಿಧಾನದ ಪೀಠಿಕೆ ಮತ್ತು ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಕಡ್ಡಾಯವಾಗಿ ತಿಳಿದುಕೊಳ್ಳಬೇಕು ಎಂದು ಅಳವಾರ ಕೊಡಗು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಮೀರ್ ಆಹಮ್ಮದ್ ಹೇಳಿದರು.ಸಮಾಜ ಕಲ್ಯಾಣ ಇಲಾಖೆ, ಪಟ್ಟಣ ಪಂಚಾಯಿತಿ ವತಿಯಿಂದ ಸೋಮವಾರ ಜೇಸಿ ವೇದಿಕೆಯಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾ ಪ್ರಯುಕ್ತ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ವಿಶ್ವದ ಅತ್ಯಂತ ವಿವರವಾದ ಸಂವಿಧಾನ ಭಾರತದ್ದಾಗಿದೆ. ಸೂಕ್ಷ್ಮ ವಿವರಗಳನ್ನು ಹೊಂದಿರುವ ಸಂವಿಧಾನವಾಗಿದೆ. ಭಾರತದ ಸಂವಿಧಾನ ರಚಿಸಿದ ಕೀರ್ತಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಅನೇಕ ವಿದ್ವಾಂಸರು ಸಲಹೆ ನೀಡಿದ್ದಾರೆ. ಅನೇಕರು ಸಂವಿಧಾನಕ್ಕೆ ತಕರಾರು ತೆಗೆದಿದ್ದರು. ಆದರೆ ಅಂಬೇಡ್ಕರ್ ಅವರು ತಮ್ಮ ಅಗಾಧವಾದ ಜ್ಞಾನವನ್ನು ಸಂವಿಧಾನ ರಚಿಸಲು ಧಾರೆಯೆರೆದರು. ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್‌ನಂತಹ ದೇಶಗಳ ಸಂವಿಧಾನವನ್ನು ಓದಿಕೊಂಡಿದ್ದರು. ಸಂವಿಧಾನ ಆಶಯದಂತೆ ಭಾರತದ ಪ್ರತಿಯೊಬ್ಬ ಪ್ರಜೆಗೂ ಸಾಮಾಜಿಕ, ಆರ್ಥಿಕ, ರಾಜಕೀಯ ಹಕ್ಕುಗಳು ಸಿಕ್ಕಿವೆ. ಭಾರತವು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯವಾಗಿದೆ. ಎಲ್ಲಾ ನಾಗರಿಕರಿಗೆ ನ್ಯಾಯ, ಸ್ವಾತಂತ್ರ್ಯ, ಸಮಾನತೆಯನ್ನು ಭದ್ರಪಡಿಸುವ ಮತ್ತು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು ಭ್ರಾತೃತ್ವವನ್ನು ಉತ್ತೇಜಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಸಂವಿಧಾನ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ರಕ್ಷಿತಾ, ರೇಷ್ಮಾ (ದ್ವಿತೀಯ), ಸಮೀಕ್ಷಾ (ತೃತೀಯ), ಪ್ರೌಢಶಾಲಾ ವಿಭಾಗದಲ್ಲಿ ಮೌನ(ಪ್ರ), ಸಿರಿ(ದ್ವಿ) ಸೂರ್ಯ(ತೃ) ಅವರಿಗೆ ಬಹುಮಾನ ವಿತರಿಸಲಾಯಿತು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ ಸಂವಿಧಾನ ಪ್ರಸ್ತಾವನೆ ಬೋಧಿಸಿದರು.

ತಹಸೀಲ್ದಾರ್ ನವೀನ್ ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಬಿಇಒ ಭಾಗ್ಯಮ್ಮ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ, ಸಿಡಿಪಿಒ ವಿಮಲ, ಪ್ರಮುಖರಾದ ಎಚ್.ಬಿ. ಜಯಮ್ಮ, ಎಸ್.ಡಿ.ವಿಜೇತ, ಡಿ.ಎಸ್. ನಿರ್ವಾಣಪ್ಪ, ಜಯಪ್ಪ ಹಾನಗಲ್, ಬಿ.ಇ. ಜಯೇಂದ್ರ, ಜಯಂತಿ ಶಿವಕುಮಾರ್, ಶೀಲಾ ಡಿಸೋಜ, ಪಿ.ಕೆ.ಚಂದ್ರು, ಎಚ್.ಎ.ನಾಗರಾಜ್. ಟಿ.ಈ.ಸುರೇಶ್ ಮತ್ತಿತರರು ಇದ್ದರು.

ಕಕ್ಕೆಹೊಳೆ ಜಂಕ್ಷನ್‌ನಿಂದ ಜಾಗೃತಿ ಜಾಥಾದ ಟ್ಯಾಬ್ಲ್ಯೋ ಮೆರವಣಿಗೆ ನಡೆಯಿತು. ವಿದ್ಯಾರ್ಥಿಗಳ ಬ್ಯಾಂಡ್, ನಗಾರಿ, ಅಟೋ ರ‍್ಯಾಲಿ ಆಕರ್ಷಿಸಿತು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಜೇಸಿ ವೇದಿಕೆ ಮುಂಭಾಗ ಇ. ರಾಜು ತಂಡದವರಿಂದ ನಾಟಕ, ಗಾಯನ ನಡೆಯಿತು.