ಚಿತ್ರದುರ್ಗ ಜಿಲ್ಲಾ ಯಾದವ ಗೊಲ್ಲ ಸಂಘಕ್ಕೆ ಶನಿವಾರ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷರಾಗಿ ಮೀಸೆ ಮಹಾಲಿಂಗಪ್ಪ, ಉಪಾಧ್ಯಕ್ಷ ಕಿರಣಕುಮಾರ್ ಆಯ್ಕೆಯಾದ ಹಿನ್ನೆಲೆ ಅಭಿನಂದಿಸಲಾಯಿತು.
ಶನಿವಾರ ನಡೆದ ಚುನಾವಣೆಯಲ್ಲಿ ಆಯ್ಕೆ । ಒಂದು ಮತದ ಅಂತರದಲ್ಲಿ ಗೆದ್ದ ಮೀಸೆಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗ ಜಿಲ್ಲಾ ಗೊಲ್ಲರ (ಯಾದವ) ಸಂಘವು ಮರಳಿ ಮೀಸೆ ಮಹಲಿಂಗಪ್ಪ ಸುಪರ್ದಿಗೆ ಒಳಪಟ್ಟಿದೆ. ಶನಿವಾರ ನಡೆದ ಸಂಘದ ಅಧ್ಯಕ್ಷ ಸ್ಥಾನ ಸೇರಿದಂತೆ ಇತರೆ ಪದಾಧಿಕಾರಿ ಹುದ್ದೆ ಚುನಾವಣೆಯಲ್ಲಿ ಮೀಸೆ ಮಹಲಿಂಗಪ್ಪ ಗುಂಪು ಜಯ ಸಾಧಿಸಿ ಸಂಘವನ್ನು ವಶಕ್ಕೆ ಪಡೆದಿದೆ.ನಗರದ ರಂಗಯ್ಯನ ಬಾಗಿಲು ಸಮೀಪದ ಗೊಲ್ಲ ಸಂಘದ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ ನಡೆದ ಪದಾಧಿಕಾರಿಗಳ ಚುನಾವಣೆ ಸ್ಪಷ್ಟವಾಗಿ ಮೀಸೆ ಮಹಾಲಿಂಗಪ್ಪ ಬಣದ ಆಡಳಿತವನ್ನು ಸ್ವೀಕರಿಸಿದೆ. ಮೀಸೆ ಮಹಾಲಿಂಗಪ್ಪ ಬಣವನ್ನು ಮಣಿಸಲು ಭಾರೀ ಪ್ರಯತ್ನಗಳು ನಡೆದಿದ್ದವು. ಹಾಲಿ-ಮಾಜಿ ಶಾಸಕರು, ಪ್ರಭಾವಿಗಳು ರಂಗಪ್ರವೇಶ ಮಾಡಿದ್ದರು. ಅಂತಿಮವಾಗಿ ಮೀಸೆ ಮಹಲಿಂಗಪ್ಪ ಅವರ ಗುಂಪು ಎಂಟು ಸ್ಥಾನ ಹಾಗೂ ಅವರ ವಿರೋಧಿ ಗುಂಪು ಏಳು ಸ್ಥಾನ ಪಡೆಯುವಲ್ಲಿ ಮಾತ್ರ ಶಕ್ತವಾಗಿತ್ತು.
ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮೀಸೆ ಮಹಾಲಿಂಗಪ್ಪ, ಉಪಾಧ್ಯಕ್ಷ-ಕಿರಣಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ರಾಮಲಿಂಗ ಯಾದವ್, ಖಜಾಂಚಿಯಾಗಿ ಬೂದಿಹಳ್ಳಿ ರಾಜಣ್ಣ ಗೆಲುವು ಸಾಧಿಸಿದ್ದಾರೆ. ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಸದಸ್ಯರು, ಬೆಂಬಲಿಗರು ಸಂಭ್ರಮಿಸಿದರು.ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಎಲ್ಲ ಸ್ಥಾನಗಳಿಗೂ ಎರಡು ಬಣದವರು ಸ್ಪರ್ಧಿಸಿದ್ದು, ಮೀಸೆ ಮಹಾಲಿಂಗಪ್ಪ ಗುಂಪು ಗೆಲುವು ಸಾಧಿಸಿತು.ಮೇ 17ರಂದು 15 ನಿರ್ದೇಶಕ ಸ್ಥಾನಗಳಿಗೆ ಮತದಾನ ನಡೆದಿದ್ದು, ಇಡೀ ಜಿಲ್ಲೆಯನ್ನೇ ತನ್ನಡೆ ಗಮನಿಸುವ ರೀತಿ, ಎಂಎಲ್‍ಎ, ಎಂಪಿ ಚುನಾವಣೆ ರೀತಿ ಮತದಾನ ನಡೆದಿತ್ತು. ಮೀಸೆ ಮಹಾಲಿಂಗಪ್ಪ ಅವರ ಬಣವನ್ನು ಸೋಲಿಸಲು ಮಾಜಿ ಶಾಸಕ ಎ.ವಿ.ಉಮಾಪತಿ ಸೇರಿ ಹಾಲಿ-ಮಾಜಿ ಶಾಸಕರು, ಪ್ರಭಾವಿಗಳು, ಹಣವಂತರು ಅಖಾಡಕ್ಕೆ ಇಳಿದಿದ್ದರು. 2,424 ಮತದಾರರನ್ನು ಹೊಂದಿರುವ ಜಿಲ್ಲಾ ಸಂಘದ 15 ನಿರ್ದೇಶಕರ ಸ್ಥಾನಕ್ಕೆ 34 ಮಂದಿ ಸ್ಪರ್ಧಿಸಿದ್ದು, ತೀವ್ರ ಪೈಪೋಟಿ ನೀಡಿದ್ದರು. ಅಂತಿಮವಾಗಿ ಮೀಸೆ ಮಹಾಲಿಂಗಪ್ಪ ಬಣ 8 ಸ್ಥಾನಗಳನ್ನು ಪಡೆಯುವ ಮೂಲಕ ಮೇಲುಗೈ ಸಾಧಿಸಿತ್ತು.
ಗೆದ್ದ ಬಳಿಕ ಬೆಂಬಲಿಗರು, ಅಭಿಮಾನಿಗಳು, ಸಂಘದ ಸದಸ್ಯರು, ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಮೀಸೆ ಮಹಾಲಿಂಗಪ್ಪ, ವಿದ್ಯಾರ್ಥಿ ದೆಸೆಯಲ್ಲಿಯೇ ಸಮುದಾಯದ ಪರ ಹೋರಾಟ ನಡೆಸಿಕೊಂಡು ಬಂದಿದ್ದು, ತಿಂಗಳು ಗಟ್ಟಲೇ ಜೈಲುವಾಸ ಅನುಭವಿಸಿದ್ದೇ. ಅದರ ಫಲ ಜಿಪಂ ಹಾಗೂ ಯಾದವ ಸಂಘದ ಜಿಲ್ಲಾಧ್ಯಕ್ಷನಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿತ್ತು ಎಂದರು.ಸಂಘದ ಕಟ್ಟಡ ಕೆಡವಿ ಬೃಹತ್ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದ್ದೆ. ಎಲ್ಲ ಪ್ರಕ್ರಿಯೆಗಳು ನಡೆಯುತ್ತಿದ್ದವು. ಸರ್ಕಾರದಿಂದ ಅನುದಾನ ಕೂಡ ಬಿಡುಗಡೆ ಆಗಿತ್ತು. ಕಟ್ಟಡ ನಿರ್ಮಾಣದ ಹೊಣೆಗಾರಿಕೆಯನ್ನು ನಿರ್ಮಿತಿ ಕೇಂದ್ರಕ್ಕೆ ಜಿಲ್ಲಾಡಳಿತವೇ ವಹಿಸಿತ್ತು. ಆದರೆ, ಕಟ್ಟಡ ನಿರ್ಮಾಣ ವಿಳಂಬ ಮತ್ತು ಅದರಲ್ಲಿನ ಅವ್ಯವಹಾರಕ್ಕೆ ನಾನೇ ಕಾರಣವೆಂದು ಕೆಲವರು ಸುಳ್ಳು ಆರೋಪ ಮಾಡಿದರು. ಸಂಘದಲ್ಲಿ ಕೋಟ್ಯಂತರ ರು. ಅವ್ಯವಹಾರ ನಡೆದಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು ಎಂದರು.
ಮತದಾರರಲ್ಲಿ ಗೊಂದಲ ಏರ್ಪಡಿಸುವ ಪ್ರಯತ್ನ ನಡೆಸಿದರು. ಆದರೂ ಮತದಾರರು ನನ್ನನ್ನು ದಾಖಲೆ ಮತಗಳಲ್ಲಿ ಗೆಲ್ಲಿಸಿದರು. ಅವರ ಭರವಸೆಗೆ ಚ್ಯುತಿ ಬಾರದ ರೀತಿ ಕೆಲಸ ನಿರ್ವಹಿಸುವೆ. ಮುಖ್ಯವಾಗಿ ಕಟ್ಟಡ ನಿಮಾರ್ಣಕ್ಕೆ ಜನಪ್ರತಿನಿಧಿಗಳಿಂದ ಅನುದಾನ ತಂದು ಪೂರ್ಣಗೊಳಿಸುವೆ. ಈ ವಿಷಯದಲ್ಲಿ ಪರ-ವಿರೋಧ ಎಂಬುದನ್ನು ಮರೆತು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮುದಾಯದ ಪ್ರಗತಿಗೆ ಶ್ರಮಿಸುವೆ ಎಂದು ತಿಳಿಸಿದರು.ನಿರ್ದೇಶಕರಾದ ಕೆ.ಆರ್.ಹಳ್ಳಿ ರವಿ, ಈರಣ್ಣ ಈಶ್ವರಗೆರೆ, ಸಿ.ತಿಮ್ಮಣ್ಣ, ಚಿಕ್ಕಣ್ಣ, ಮುಂಗಸವಳ್ಳಿ ಪ್ರಕಾಶ್, ಬಿ.ಡಿ.ಬಸವರಾಜ್, ಅಶೋಕ್‍ಕುಮಾರ್, ಎ.ಚಿತ್ತಯ್ಯ, ಆಕರ್ಶ ಯಾದವ್ ಇತರರು ಉಪಸ್ಥಿತರಿದ್ದರು.