ಸಂಭ್ರಮದಿಂದ ನಡೆದ ಮುತ್ತುರಾಯಸ್ವಾಮಿ ಬ್ರಹ್ಮರಥೋತ್ಸವ

| Published : Mar 24 2025, 12:31 AM IST

ಸಾರಾಂಶ

ಮೂರು ದಿನಗಳ ನಡೆಯುವ ಮುತ್ತುರಾಯಸ್ವಾಮಿ ದೇವರ ಹಬ್ಬದ ಅಂಗವಾಗಿ ಶನಿವಾರ ರಾತ್ರಿ ಇಡೀ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಎತ್ತುಗಳ ಮೂಲಕ ಬಂಡಿ ಉತ್ಸವ, ಮುತ್ತುರಾಯಸ್ವಾಮಿ ಉತ್ಸವ ಮೂರ್ತಿಯನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ರಕ್ಷಕ, ಶಕ್ತಿ ದೇವಾಲಯ ಮುತ್ತುರಾಯಸ್ವಾಮಿ ದೇವರ ಬ್ರಹ್ಮ ರಥೋತ್ಸವ ಹಾಗೂ ಬಂಡಿ ಉತ್ಸವವು ಸಡಗರ ಸಂಭ್ರಮದಿಂದ ನಡೆಯಿತು.

ಮೂರು ದಿನಗಳ ನಡೆಯುವ ಮುತ್ತುರಾಯಸ್ವಾಮಿ ದೇವರ ಹಬ್ಬದ ಅಂಗವಾಗಿ ಶನಿವಾರ ರಾತ್ರಿ ಇಡೀ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಎತ್ತುಗಳ ಮೂಲಕ ಬಂಡಿ ಉತ್ಸವ, ಮುತ್ತುರಾಯಸ್ವಾಮಿ ಉತ್ಸವ ಮೂರ್ತಿಯನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಲಾಯಿತು. ಪಟಾಕಿ, ಮದ್ದು,ಗುಂಡು ಸಿಡಿಸಿ ಸಂಭ್ರಮಿಸಿದರು. ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.

ಪಟ್ಟಣದ ಅಗ್ರಹಾರ ಬಡಾವಣೆ, ಅಂಬೇಡ್ಕರ್ ನಗರದ ಎಲ್ಲಾ ವರ್ಗದ ಜನರು ಒಟ್ಟಿಗೆ ಸೇರಿ ಮುತ್ತುರಾಯಸ್ವಾಮಿ ದೇವರ ಬ್ರಹ್ಮ ರಥೋತ್ಸವ ಹಾಗೂ ಬಂಡಿ ಉತ್ಸವ ಮತ್ತು ಹಬ್ಬವನ್ನು ಅತ್ಯಂತ ಭಕ್ತಿಯಿಂದ ಆಚರಿಸಿದರು.

ಉತ್ಸವದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳನ್ನು ತಳಿರು ತೋರಣಗಳಿಂದ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಮಹಿಳೆಯರು ಮನೆ, ದೇವಾಲಯದ ಆವರಣದಲ್ಲಿ ಬಗೆಬಗೆಯ ಬಣ್ಣದ ರಂಗೋಲಿಯಿಟ್ಟು ಸಂಭ್ರಮಿಸಿದರು. ರಥೋತ್ಸವದಲ್ಲಿ ಭಾಗವಹಿಸಿದ್ದ ಮಹಿಳೆಯರು, ಯುವತಿಯರು ತಲೆಯ ಮೇಲೆ ಪೂರ್ಣ ಕುಂಭ ಕಳಸವನ್ನು ಹೊತ್ತು, ಬಾಯಿ ಬೀಗ ಹಾಕಿಸಿಕೊಳ್ಳುವ ಮೂಲಕ ಹರಕೆ ಹೊತ್ತು ಭಕ್ತಿ ಪ್ರದರ್ಶಿಸಿದರು. ರಥೋತ್ಸವಕ್ಕೆ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಉಚಿತವಾಗಿ ನೀರು, ಮಜ್ಜಿಗೆ, ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಶಾಸಕ ಎಚ್.ಟಿ.ಮಂಜು, ಗ್ರಾಮದ ಯಜಮಾನರಾದ ಹೆಗ್ಗಡಿ ಕೃಷ್ಣೇಗೌಡ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್. ರವೀಂದ್ರಬಾಬು, ಸದಸು ಪ್ರಮೋದ್ ಕುಮಾರ್, ಮುಡಾ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್, ಕಡಲೆಕಾಯಿ ಕೃಷ್ಣಪ್ಪ, ಥಿಯೇಟರ್ ಚಂದ್ರಣ್ಣ, ಪಟೇಲ್ ಚಂದ್ರಣ್ಣ, ಶಿವಣ್ಣ, ಯಜಮಾನ ವೆಂಕಟಣ್ಣ, ನಿವೃತ್ತ ಶಿಕ್ಷಕ ಬಾಲಕೃಷ್ಣ, ಜವರಯ್ಯ, ಹಣ್ಣು ರಾಮಣ್ಣ, ಪುರಸಭಾ ಮಾಜಿ ಸದಸ್ಯರಾದ ಕೆ.ಆರ್.ಹೇಮಂತ್ ಕುಮಾರ್, ಕೆ.ಟಿ.ಚಕ್ರಪಾಣಿ, ಕಸಬಾ ಸೊಸೈಟಿ ಅಧ್ಯಕ್ಷ ಪುರುಷೋತ್ತಮ್, ಹನುಮಂತು, ದೇವಾಲಯದ ಪ್ರಧಾನ ಅರ್ಚಕರು ಮುತ್ತುರಾಜ್, ಅಗ್ರಹಾರ ಹಾಗೂ ಅಂಬೇಡ್ಕರ್ ನಗರದ ಯುವಕರು ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.