ಮುತ್ಸದ್ದಿ ನಾಯಕ ಶ್ರೀನಿವಾಸ ಪ್ರಸಾದ್ ದಲಿತ ಸೂರ್ಯ: ಅಭಿಮಾನಿಗಳು

| Published : Apr 30 2024, 02:04 AM IST

ಮುತ್ಸದ್ದಿ ನಾಯಕ ಶ್ರೀನಿವಾಸ ಪ್ರಸಾದ್ ದಲಿತ ಸೂರ್ಯ: ಅಭಿಮಾನಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಬಸವಲಿಂಗಪ್ಪ ಅವರ ಬೂಸಾ ಚಳವಳಿಯ ವೇಳೆ ಹೋರಾಟಗಾರರಾಗಿ ಬೆಳಕಿಗೆ ಬಂದ ವಿ.ಶ್ರೀನಿವಾಸ್ ಪ್ರಸಾದ್, 24ನೇ ವರ್ಷಕ್ಕೆ ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಿ ಸೋಲುಂಡು, ನಂತರದ ಚುನಾವಣೆಗಳಲ್ಲಿ ಗೆಲುವು ಸಾಧಿಸಿ, ಸ್ವಾಭಿಮಾನಿ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದರು

ಕನ್ನಡಪ್ರಭ ವಾರ್ತೆ ತುಮಕೂರು

ಹಿರಿಯ, ಮುತ್ಸದ್ಧಿ ರಾಜಕಾರಣಿ ಶ್ರೀನಿವಾಸ ಪ್ರಸಾದ್ ದಲಿತ ಸೂರ್ಯ ಎಂದು ದಲಿತ ಮುಖಂಡ ಸಿ. ಭಾನುಪ್ರಕಾಶ್ ಬಣ್ಣಿಸಿದರು.

ನಗರದ ಟೌನ್‌ಹಾಲ್ ಮುಂಭಾಗದಲ್ಲಿ ಇಂದು ನಿಧನರಾದ ಮುತ್ಸದ್ದಿ ರಾಜಕಾರಣಿ ವಿ.ಶ್ರೀನಿವಾಸ್ ಪ್ರಸಾದ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಶ್ರೀನಿವಾಸ್ ಪ್ರಸಾದ್ ಅವರ ಭಾವಚಿತ್ರದ ಮುಂದೆ ಮೇಣದ ಬತ್ತಿ ಹಚ್ಚಿ, ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಚಾಮರಾಜನಗರ ಲೋಕಸಭಾ ಕ್ಷೇತ್ರದ ಸದಸ್ಯ,ಮಾಜಿ ಸಚಿವ, ಸ್ವಾಭಿಮಾನದ ಪ್ರತೀಕ ವಿ.ಶ್ರೀನಿವಾಸ್ ಪ್ರಸಾದ್ ರ ನಿಧನ ಇಡೀ ನಾಡಿಗೆ, ಅದರಲ್ಲಿಯೂ ದಲಿತರ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ವಿದ್ಯಾರ್ಥಿ ನಾಯಕರಾಗಿ ಗುರುತಿಸಿಕೊಂಡು, ಬಸವಲಿಂಗಪ್ಪ ಅವರ ಬೂಸಾ ಚಳವಳಿಯ ವೇಳೆ ಹೋರಾಟಗಾರರಾಗಿ ಬೆಳಕಿಗೆ ಬಂದ ವಿ.ಶ್ರೀನಿವಾಸ್ ಪ್ರಸಾದ್, 24ನೇ ವರ್ಷಕ್ಕೆ ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಿ ಸೋಲುಂಡು, ನಂತರದ ಚುನಾವಣೆಗಳಲ್ಲಿ ಗೆಲುವು ಸಾಧಿಸಿ, ಸ್ವಾಭಿಮಾನಿ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದರು ಎಂದರು.

ಏಳು ಬಾರಿ ಸಂಸದ ಸ್ಥಾನಕ್ಕೆ ಸ್ಪರ್ಧಿಸಿ, ಐದು ಬಾರಿ ಸಂಸದರಾಗಿ ಆಯ್ಕೆಯಾದವರು. ಕೇಂದ್ರದ ರೈಲ್ವೆ, ನಾಗರಿಕ ಸರಬರಾಜು ಸಚಿವರಾಗಿ ಕೆಲಸ ಮಾಡಿದ್ದಲ್ಲದೆ,೨೦೧೩ರಿಂದ ೨೦೧೬ವರೆಗೆ ರಾಜ್ಯದ ಸಿದ್ದರಾಮಯ್ಯ ಸರಕಾರದಲ್ಲಿ ಕಂದಾಯ ಸಚಿವರಾಗಿ ಕೆಲಸ ಮಾಡಿ,ಅಪಾರ ಜನಮನ್ನಣೆ ಗಳಿಸಿದವರು.ಬಾಬಾ ಸಾಹೇಬರು ಎಳೆದು ತಂದ ಶ್ರೀನಿವಾಸ ಪ್ರಸಾದ್ ಓರ್ವ ದಲಿತ ಸೂರ್ಯ ಎಂದರು.

ವಕೀಲ ರಂಗಧಾಮಯ್ಯ ಮಾತನಾಡಿ, ವಿ.ಶ್ರೀನಿವಾಸ್ ಪ್ರಸಾದ್ ಹಿರಿಯ ಮುತ್ಸದ್ದಿ ರಾಜಕಾರಣಿ, 29 ವರ್ಷಗಳ ಕಾಲ ಸುಧೀರ್ಘ ಕಾಲ ರಾಜಕಾರಣ ಮಾಡಿದವರು. ತಮ್ಮ ಸಂಸದ ಅವಧಿಯಲ್ಲಿ 7 ಜನ ಪ್ರಧಾನ ಮಂತ್ರಿಗಳ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿ ಹೆಸರು ಪಡೆದವರು. ಚಾಮರಾಜನಗರ ತಾಲೂಕು ಬದನವಾಳು ಘಟನೆಯಲ್ಲಿ ನೊಂದ ದಲಿತರ ಪರವಾಗಿ ದ್ವನಿ ಎತ್ತಿ, ಸ್ವಾಭಿಮಾನದ ರಾಜಕಾರಣಿ ಎನಿಸಿಕೊಂಡವರು. ಯಾರೊಂದಿಗೂ ಹಗೆತನವಿಲ್ಲದ, ಎಲ್ಲ ನಾಯಕರೊಂದಿಗೆ ಪ್ರೀತಿ ವಿಶ್ವಾಸದಿಂದಲೇ ರಾಜಕಾರಣ ಮಾಡಿದವರು. ಪ್ರಸ್ತುತ ದೇಶಕ್ಕೆ ಬುದ್ದನ ಕರುಣೆ ಮತ್ತು ಪ್ರೀತಿ ಮುಖ್ಯ ಎಂಬುದನ್ನು ಅರಿತ ಶ್ರೀನಿವಾಸಪ್ರಸಾದ್,ಸಿದ್ದರಾಮಯ್ಯ ಅವರನ್ನು ಮನೆಗೆ ಕರೆಯಿಸಿ, ಅತಿಥ್ಯ ನೀಡುವ ಮೂಲಕ ಪ್ರೀತಿ ಹಂಚುವ ಕೆಲಸ ಮಾಡಿದ್ದರು. ಇದು ಇತರೆ ದಲಿತ ರಾಜಕಾರಣಿಗಳಿಗೆ ಮಾದರಿ ಎಂದರು.

ಕಾರ್ಯಕ್ರಮದಲ್ಲಿ ರೆಡ್ಸ್ ರಂಗಯ್ಯ, ಹೆಗ್ಗೆರೆ ಕೃಷ್ಣಪ್ಪ, ಎನ್.ಕೆ.ನಿಧಿಕುಮಾರ್, ಚಲವಾದಿ ಶೇಖರ್, ಗುರುಪ್ರಸಾದ್, ಗಿರೀಶ್, ಸಿದ್ದಲಿಂಗಯ್ಯ,ರಾಮಾಂಜೀ, ಪ್ರತಾಪ್, ರುದ್ರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.