ಧರ್ಮದ ಕಾಲಂನಲ್ಲಿ ಲಿಂಗಾಯಿತ ಬರೆಸಲು ಮಠಾಧಿಪತಿಗಳ ಕರೆ

| Published : Sep 21 2025, 02:00 AM IST

ಸಾರಾಂಶ

ಚಿಕ್ಕಮಗಳೂರು, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಜಾತಿಗಳ ಪಟ್ಟಿಯಲ್ಲಿ ಬಹಳ ಗೊಂದಲ ಇದೆ. ಹಾಗಾಗಿ ವೀರಶೈವ ಲಿಂಗಾಯಿತ ಸಮುದಾಯದವರು ಧರ್ಮದ ಕಾಲಂನಲ್ಲಿ ಲಿಂಗಾಯಿತ ಎಂಬುದಾಗಿ ಬರೆಸಬೇಕು ಎಂದು ಬಸವತತ್ತ್ವ ಪೀಠದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಕರೆ ನೀಡಿದರು.

- ಉಪ ಜಾತಿಗಳ ಜತೆಗೆ ಲಿಂಗಾಯಿತ ಸೇರಿಸಿ ಬರೆಸಬೇಕು, ಬಸವ ಸಂಸ್ಕೃತಿ ಅಭಿಯಾನ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಜಾತಿಗಳ ಪಟ್ಟಿಯಲ್ಲಿ ಬಹಳ ಗೊಂದಲ ಇದೆ. ಹಾಗಾಗಿ ವೀರಶೈವ ಲಿಂಗಾಯಿತ ಸಮುದಾಯದವರು ಧರ್ಮದ ಕಾಲಂನಲ್ಲಿ ಲಿಂಗಾಯಿತ ಎಂಬುದಾಗಿ ಬರೆಸಬೇಕು ಎಂದು ಬಸವತತ್ತ್ವ ಪೀಠದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಕರೆ ನೀಡಿದರು.

ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಸಮೀಕ್ಷೆಯ 11ನೇ ಕಾಲಂನಲ್ಲಿ ಯಾವ ಧರ್ಮ ಎಂಬುದಾಗಿ ಕೇಳಲಾಗಿದೆ. ಅಲ್ಲಿ ಲಿಂಗಾಯಿತ ಎಂದು ಬರೆಸಬೇಕು. ಒಳ ಪಂಗಡಗಳ ಹೆಸರು ಬರೆಸುವಾಗ ಲಿಂಗಾಯಿತ ಸೇರಿಸಿ ಬರೆಸಬೇಕು. ಉದಾಹರಣೆಗೆ ಗಾಣಿಗ ಲಿಂಗಾಯಿತ, ನೋಳಂಬ ಲಿಂಗಾಯಿತ ಎಂಬುದಾಗಿ ಬರೆಸಬೇಕು ಎಂದು ಹೇಳಿದರು.

ಹಿಂದೂ ಧರ್ಮ ವಿಶ್ವದಲ್ಲೆಡೆ ವಿಶಾಲವಾಗಿ ಬೆಳೆದಿದೆ. ವೀರಶೈವ, ಲಿಂಗಾಯಿತ ಒಂದೇ ಎಂಬುದನ್ನು ಎಲ್ಲರೂ ಆರ್ಥ ಮಾಡಿಕೊಳ್ಳಬೇಕು. ಸಮೀಕ್ಷೆಗೆ ಬರುವವರು ಪೆನ್ಸಿಲ್‌ನಲ್ಲಿ ನಮ್ಮ ಎದುರು ಬರೆದು, ಸಹಿ ಮಾಡಿಕೊಂಡರೆ ಸಹಿ ಹಾಕ ಬೇಡಿ, ಪೆನ್ನಿನಲ್ಲಿ ಬರೆದಿರುವುದನ್ನು ಓದಿ ಖಚಿತಪಡಿಸಿಕೊಂಡು ನಂತರದಲ್ಲಿ ಸಹಿ ಮಾಡಿ. ಕಾರಣ ನೆರೆಯ ಶಿವಮೊಗ್ಗದಲ್ಲಿ ಈ ಹಿಂದೆ ಪೆನ್ನಿಲ್‌ನಲ್ಲಿ ಬರೆದು ನಂತರದಲ್ಲಿ ಪೆನ್ನಿನಲ್ಲಿ ಬರೆಯುವಾಗ ವ್ಯತ್ಯಾಸ ಮಾಡಿರುವುದು ಗಮನಕ್ಕೆ ಬಂದಿತ್ತು ಎಂದು ತಿಳಿಸಿದರು.

ಚಿಕ್ಕಮಗಳೂರು ಬರೀ ಕಾಫಿಯ ನಾಡು ಮಾತ್ರವಲ್ಲ, ಶರಣ ಪರಂಪರೆಯ ನಾಡು, ಶಿವ ಶರಣರ ನಾಡು ಎಂದ ಶ್ರೀಗಳು, ಶಿವ ಶರಣರು, ಬಸವಣ್ಣನವರ ಅನುಯಾಯಿಗಳಾದ ನಾವು ಭದ್ರವಾಗಿದ್ದೇವೆ ಎಂಬುದನ್ನು ಅಕ್ಟೋಬರ್‌ 5 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಸಾಬೀತುಪಡಿಸಬೇಕು ಎಂದು ಹೇಳಿದರು.

ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಈ ನಾಡಿಗೆ ಕೊಡುಗೆ ನೀಡಿದ್ದರೆ, 19ನೇ ಶತಮಾನದಲ್ಲಿ ಬುದ್ಧ, ಅಂಬೇಡ್ಕರ್‌ ಅಪಾರ ಕೊಡುಗೆ ನೀಡಿದ್ದಾರೆ. ಸಮ ಸಮಾಜ ನಿರ್ಮಾಣಕ್ಕಾಗಿ ಅಂಬೇಡ್ಕರ್‌ ಹೋರಾಟ ಮಾಡಿದ್ದರೆ, ಕನ್ನಡ ವಚನ ಸಾಹಿತ್ಯ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದ್ದಾರೆ ಎಂದರು.

ಬಸವಣ್ಣನವರ ವಿಚಾರಧಾರೆಗಳು. ವಚನಗಳು, ಸಾಹಿತ್ಯ ಇಂದಿಗೂ ಪ್ರಸ್ತುತವಾಗಿವೆ. ಬಸವ ಸಂಸ್ಕೃತಿ ಉಳಿಸಿ, ಅವರ ತತ್ತ್ವಗಳು ಪ್ರತಿ ಮನೆಗೆ ತಲುಪಿಸುವ ಕೆಲಸ ಆಗಬೇಕು. ಇದರಲ್ಲೂ ಯುವ ಪೀಳಿಗೆಗೆ ಮುಟ್ಟಿಸುವ ಕೆಲಸ ಆಗಬೇಕು ಎಂದ ಅವರು, ಪ್ರಪಂಚ ಇರುವವರೆಗೆ ಬಸವಣ್ಣನ ವಚನಗಳು ಇರುತ್ತವೆ ಎಂದು ಹೇಳಿದರು.

ಬಸವಣ್ಣನವರ ಅನುಭವ ಮಂಟಪ ಒಂದೇ ಜಾತಿ, ಧರ್ಮಕ್ಕೆ ಸೀಮಿತವಾಗಿರಲಿಲ್ಲ. ಎಲ್ಲಾ ಜಾತಿಯವರಿಗೂ ಸಮಾನ ಅವಕಾಶ ನೀಡಲಾಗುತ್ತಿತ್ತು. ಎಲ್ಲಾ ಸಮುದಾಯದವರನ್ನು ಸರಿ ಸಮಾನವಾಗಿ ಕಾಣಲಾಗುತ್ತಿತ್ತು. ಈಗಿನ ರಾಜ್ಯ ಸರ್ಕಾರ ಬಸವೇಶ್ವರರು ಸಾಂಸ್ಕೃತಿಕ ರಾಯಭಾರಿ ಎಂಬುದಾಗಿ ಕರೆದಿದೆ ಎಂದರು.

ಬೇರೆ ಧರ್ಮದವರನ್ನು ನೋವಿಸುವವರು ಶರಣರಲ್ಲ, ಮನುಷ್ಯ ಸೇರಿದಂತೆ ಎಲ್ಲಾ ಪ್ರಾಣಿಗಳ ಲೇಸನ್ನು ಬಯಸುವವರು ನಿಜವಾದ ಶರಣರು. ನಮ್ಮ ಧರ್ಮವನ್ನು ಗೌರವಿಸುವ ಜತೆಗೆ ಬೇರೆ ಧರ್ಮವನ್ನು ಗೌರವಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ. ಬಸವಲಿಂಗ ಪಟ್ಟದೇವರು, ಸಾಣೇಹಳ್ಳಿ ಮಠದ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಯಳನಾಡು ಮಠದ ಜ್ಞಾನ ಪ್ರಭು ದೇಶಿ ಕೇಂದ್ರ ಸ್ವಾಮೀಜಿ, ಪುಷ್ಪಗಿರಿ ಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಸಿಂದಿಗೆರೆ ಮಠದ ಶ್ರೀ ಶಿವಶಂಕರ ಶಿವಯೋಗಿ ಸ್ವಾಮೀಜಿ ಹಾಗೂ ಲಿಂಗಾಯಿತ ಸಮುದಾಯ ಮುಖಂಡರು ಉಪಸ್ಥಿತರಿದ್ದರು.

ಮುದಗಲ್‌ ಕಲ್ಯಾಣಾಶ್ರಮದ ಶ್ರೀ ಮಹಾಂತ ಸ್ವಾಮೀಜಿ, ಭದ್ರಾವತಿ ಚಿಂತಕಿ ಗಂಗಾಬಿಕೆ ಬಸವರಾಜ್ ಉಪನ್ಯಾಸ ನೀಡಿದರು. ಬಸವ ಸಂಸ್ಕೃತಿ ಅಭಿಯಾನ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಎನ್‌. ಚಿದಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಭಿಯಾನದ ಹಿನ್ನಲೆಯಲ್ಲಿ ನಗರದ ತಾಲೂಕು ಕಚೇರಿಯಿಂದ ಕುವೆಂಪು ಕಲಾಮಂದಿರದ ವರೆಗೆ ಮೆರವಣಿಗೆ ನಡೆಸಲಾಯಿತು.

20 ಕೆಸಿಕೆಎಂ 5ಬಸವ ಸಂಸ್ಕೃತಿ ಅಭಿಯಾನದ ಹಿನ್ನಲೆಯಲ್ಲಿ ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು, ಶಾಸಕ ಎಚ್‌.ಡಿ. ತಮ್ಮಯ್ಯ ಹಾಗೂ ವೀರಶೈವ ಲಿಂಗಾಯಿತ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.