ಮಠಗಳು ಕೇವಲ ಒಂದು ಗ್ರಾಮಕ್ಕೆ, ಒಂದು ಜಾತಿಗೆ ಸೀಮಿತವಲ್ಲ‌. ಮಠಗಳು ನಡೆದಾಡುವ ದೇವಾಲಯಗಳು.

ಮರಿಯಮ್ಮನಹಳ್ಳಿ: ಮಠಗಳು ಕೇವಲ ಒಂದು ಗ್ರಾಮಕ್ಕೆ, ಒಂದು ಜಾತಿಗೆ ಸೀಮಿತವಲ್ಲ‌. ಮಠಗಳು ನಡೆದಾಡುವ ದೇವಾಲಯಗಳು. ಅವು ಸರ್ವವ್ಯಾಪಿಯಾದವುಗಳು ಎಂದು ಜಿ.ನಾಗಲಾಪುರ ಗ್ರಾಮದ ಶ್ರೀಗುರು ಒಪ್ಪತ್ತೇಶ್ವರ ಮಠದ ನಿರಂಜನಪ್ರಭು ಶ್ರೀ ಹೇಳಿದರು.

ಅವರು ಫೆ.26ರಂದು ಶ್ರೀಮಠದಲ್ಲಿ ನಡೆಯುವ ರಥೋತ್ಸವದ ಪ್ರಯುಕ್ತ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಮಠಗಳು ಆಯಾ ಮಠದ ಸ್ವಾಮೀಜಿಗಳಿಂದ ಬೆಳೆಯುವುದಿಲ್ಲ. ಭಕ್ತರೆಲ್ಲರೂ ಕೂಡಿಕೊಂಡು ಬೆಳೆಸಬೇಕು. ದೇವಾಲಯಗಳು ಒಂದು ಗ್ರಾಮಕ್ಕೆ ಸೀಮಿತವಾದರೆ ಮಠಗಳು ತನ್ನ ಪರಿಧಿಯ ಎಲ್ಲ ಊರುಗಳಿಗೆ ಸಂಬಂಧಿಸಿದ್ದು, ಸಾಮಾಜಿಕ, ಧಾರ್ಮಿಕವಾಗಿ ಸೇವೆ ಸಲ್ಲಿಸುವ ಸಂಚಾರಿ ದೇವಾಲಯಗಳು ಎಂದರು.

ಒಪ್ಪತ್ತೇಶ್ವರಸ್ವಾಮಿ ರಥೋತ್ಸವದ ಅಂಗವಾಗಿ ಫೆ.18ರಿಂದ ಆರಂಭಗೊಳ್ಳುವ ಶಿವಾನುಭವ ಭೋದಾಮೃತ ಕಾರ್ಯಕ್ರಮಕ್ಕೆ ಹಿರಿಯರು ತಮ್ಮೊಂದಿಗೆ ಮಕ್ಕಳನ್ನು ಕರೆತನ್ನಿ, ಯುವಕರು ಕಡ್ಡಾಯವಾಗಿ ಪಾಲ್ಗೊಂಡು ಪ್ರವಚನ ಆಲಿಸಬೇಕು ಎಂದರು.

ಫೆ.22ರಂದು ಲಿಂ.ಜಗದ್ಗರು ಸಂಗನಬಸವೇಶ್ವರ ಪೂಜಾ ಮಂದಿರ ಮತ್ತು ಲಿಂ.ಮರಿಮಹಾಂತೇಶ್ವರ ಅತಿಥಿ ಗೃಹದ ಉದ್ಘಾಟನೆಯೊಂದಿಗೆ ದಾನಿಗಳಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಫೆ.18ರಿಂದ ಫೆ.24ರವರೆಗೆ ಪ್ರತಿದಿನ ಪ್ರವಚನ ನಡೆಯಲಿದೆ. ಈ ಪ್ರವಚನದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಭಾಗವಹಿಸಬೇಕು ಎಂದು ಅವರು ಹೇಳಿದರು.

ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಗ್ರಾಮಗಳಿಗೆ ತೆರಳಿ ದುಶ್ಚಟಗಳು ಹಾಗೂ ಮದ್ಯಪಾನ ತಡೆಯಲು ಪಾದಯಾತ್ರೆ ಮಾಡುವುದಾಗಿ ಅವರು ಹೇಳಿದರು.

ಎಲ್ಲ ಗ್ರಾಮಗಳ ಭಕ್ತರು ಕೂಡಿಕೊಂಡು ಜಾತ್ರೆಯನ್ನು ಯಶಸ್ವಿಗೊಳಿಸಿ, ನಿಮ್ಮಿಂದ ಸಾಧ್ಯವಾದ ಸೇವೆಯನ್ನು ಸಲ್ಲಿಸಲು ಸ್ವಾಮೀಜಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಜಿ.ನಾಗಲಾಪುರ, ಬ್ಯಾಲಕುಂದಿ, ಗರಗ, ಗೊಲ್ಲರಹಳ್ಳಿ, ಡಣಾಯಕನಕೆರೆ, ಮರಿಯಮ್ಮನಹಳ್ಳಿ, ಗುಂಡಾ, ಅಯ್ಯನಹಳ್ಳಿ, ನಂದಿಬಂಡೆ, ವ್ಯಾಸನಕೆರೆ, ವೆಂಕಟಾಪುರ, ಹನುಮನಹಳ್ಳಿ, ಹಾರುವನಹಳ್ಳಿ, ಚಿಲಕನಹಟ್ಟಿ, ತಿಮ್ಮಾಲಾಪುರ, ಪೋತಲಕಟ್ಟೆ ಸೇರಿದಂತೆ ಇತರೆ ಗ್ರಾಮಗಳು ಭಕ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.ಮರಿಯಮ್ಮನಹಳ್ಳಿ ಸಮೀಪದ ಜಿ.ನಾಗಲಾಪುರ ಗ್ರಾಮದ ಒಪ್ಪತ್ತೇಶ್ವರಸ್ವಾಮಿ ಮಠದ ಆವರಣದಲ್ಲಿ ನಡೆದ ಫೆ.26ರಂದು ಒಪ್ಪತ್ತೇಶ್ವರಸ್ವಾಮಿ ರಥೋತ್ಸವದ ಪೂರ್ವಭಾವಿ ಸಭೆಯಲ್ಲಿ ನಿರಂಜನಪ್ರಭು ಶ್ರೀ

ಮಾತನಾಡಿದರು.