ಜನಪ್ರತಿನಿಧಿ, ಅಧಿಕಾರಿಗಳು ಒಂದೇ ಗಾಡಿಯ ಎರಡು ಚಕ್ರಗಳಂತೆ । ಪಂಚಾಯತ್‌ ರಾಜ್ ದಿನಾಚರಣೆ ಹಾಗೂ ಬೇಸಿಗೆ ಬೆಸುಗೆ ಸಮಾರೋಪ ಸಮಾರಂಭ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಗ್ರಾಮೀಣಾಭಿವೃದ್ಧಿ ಗುರಿ ಸಾಧಿಸಲು ಜನಪ್ರತಿನಿಧಿ, ಅಧಿಕಾರಿಗಳು ಒಂದೇ ಗಾಡಿಯ ಎರಡು ಚಕ್ರಗಳಂತೆ ಸಮನ್ವಯ ದಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಎಚ್‌.ಡಿ.ತಮ್ಮಯ್ಯ ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಜಿಪಂ ಹಾಗೂ ಜಿಲ್ಲಾಡಳಿತದಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಪಂಚಾಯತ್‌ರಾಜ್ ದಿನಾಚರಣೆ ಹಾಗೂ ಬೇಸಿಗೆ ಬೆಸುಗೆ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಪಂಚಾಯತ್ ರಾಜ್ ವ್ಯವಸ್ಥೆ ಪ್ರಜಾಪ್ರಭುತ್ವದ ಅಡಿಪಾಯ. ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆ ಸರ್ಕಾರ ಜಾರಿಗೆ ತಂದ ಅಧಿಕಾರ ವಿಕೇಂದ್ರೀಕರಣದ ಮಾದರಿ ದೇಶಕ್ಕೇ ದಾರಿ ದೀಪವಾಯಿತು. ನಂತರ 73 ಮತ್ತು 74ನೇ ಸಂವಿಧಾನ ತಿದ್ದುಪಡಿ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಗೆ ಸಂವಿಧಾನಾತ್ಮಕ ಮಾನ್ಯತೆ ದೊರೆತಿದೆ ಎಂದು ತಿಳಿಸಿದರು.ಸ್ಥಳೀಯ ಸಂಸ್ಥೆಗಳಿಂದ ಬೆಳೆದು ಬಂದ ಜನಪ್ರತಿನಿಧಿಗಳಿಗೆ ಗ್ರಾಪಂ, ನಗರಸಭೆ ಹಾಗೂ ಪುರಸಭೆಗಳ ಅಧಿಕಾರಿಗಳು ಎದುರಿಸುವ ಸವಾಲುಗಳ ಅರಿವು ಹೆಚ್ಚು. ಆದ್ದರಿಂದ ಜನಸೇವೆ ಮತ್ತಷ್ಟು ಪರಿಣಾಮಕಾರಿಯಾಗಲು ಆಡಳಿತ ವ್ಯವಸ್ಥೆ ಮತ್ತು ಜನಪ್ರತಿನಿಧಿಗಳ ನಡುವೆ ಉತ್ತಮ ಹೊಂದಾಣಿಕೆ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಚಿಕ್ಕಮಗಳೂರು ಜಿಲ್ಲೆ ಸತತ ಎರಡನೇ ವರ್ಷ ತೆರಿಗೆ ಸಂಗ್ರಹಣೆಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿರುವುದು ಅಧಿಕಾರಿ ಮತ್ತು ಸಿಬ್ಬಂದಿ ಪರಿಶ್ರಮದ ಪ್ರತಿಫಲ ಎಂದು ಶ್ಲಾಘಿಸಿದರು.


ಜಿಲ್ಲಾ ಪಂಚಾಯಿತಿ ಸಿಇಒ ಕೀರ್ತನಾ ನೇತೃತ್ವದಲ್ಲಿ ಜಿಲ್ಲೆಹಲವು ವಿನೂತನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ ಎಂದು ಪ್ರಶಂಸಿಸಿದರು.‘ಬೇಸಿಗೆ ಬೆಸುಗೆ’ ಕಾರ್ಯಕ್ರಮದಿಂದ ಗ್ರಾಮೀಣ ಮಕ್ಕಳಿಗೆ ಹಾಡುಗಾರಿಕೆ, ಮಿಮಿಕ್ರಿ, ಚದುರಂಗ, ಚಿತ್ರಕಲೆ, ವ್ಯಕ್ತಿತ್ವ ವಿಕಸನ ಸೇರಿದಂತೆ ವಿವಿಧ ಕೌಶಲ್ಯ ಕಲಿಯುವ ಅವಕಾಶ ದೊರೆತಿದೆ. ಈ ಹಿಂದೆ ನಗರ ಮಕ್ಕಳಿಗೆ ಮಾತ್ರ ಸೀಮಿತವಾಗಿದ್ದ ಇಂತಹ ಚಟುವಟಿಕೆ ಗ್ರಾಮೀಣ ಮಕ್ಕಳಿಗೂ ತಲುಪಿಸಿರುವುದು ಶ್ಲಾಘನೀಯ ಬೆಳವಣಿಗೆ ಎಂದರು.

ಗ್ರಾಮೀಣ ಭಾಗದಲ್ಲಿ ಆರಂಭಿಸಿರುವ ಗ್ರಂಥಾಲಯ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುವ ಯುವಕರು ದಿನಪತ್ರಿಕೆ ಹಾಗೂ ಪುಸ್ತಕಗಳನ್ನು ನಿರಂತರವಾಗಿ ಓದುವ ಅಭ್ಯಾಸ ಬೆಳೆಸಿಕೊಳ್ಳ ಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಎಸ್‌ಐಆರ್ ಸೇರಿದಂತೆ ವಿವಿಧ ಸರ್ಕಾರಿ ಕಾರ್ಯಕ್ರಮ ಅನುಷ್ಠಾನದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಶಸ್ತಿ ಪಡೆದ ಪಂಚಾಯಿತಿ ಅಲ್ಲಿಯೇ ನಿಲ್ಲದೆ ಮುಂದಿನ ವರ್ಷ ಇನ್ನಷ್ಟು ಉತ್ತಮ ಸಾಧನೆ ಮಾಡುವ ಗುರಿಯೊಂದಿಗೆ ಕೆಲಸ ಮಾಡಬೇಕು. ಅಧಿಕಾರಿ ಹಾಗೂ ಸಿಬ್ಬಂದಿ ಕೆಲಸದ ಒತ್ತಡದ ನಡುವೆಯೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಯೋಗ ಹಾಗೂ ಪ್ರಾಣಾಯಾಮವನ್ನು ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಕೇಂದ್ರ ಪರಿಸರ ಮಾಲಿನ್ಯ ಮೌಲ್ಯಮಾಪನ ಮಂಡಳಿ ಅಧ್ಯಕ್ಷ ಎ.ಎನ್.ಮಹೇಶ್, ಭಾರತ ಸ್ವಾತಂತ್ರ್ಯ ನಂತರ ಜಾರಿಗೆ ಬಂದ ಪಂಚಾಯತ್ ರಾಜ್ ವ್ಯವಸ್ಥೆಯಿಂದ ದೇಶದಲ್ಲಿ ಕ್ರಾಂತಿ ಕಾರಕ ಬದಲಾವಣೆ ಆಗಿದೆ. ಆದರೆ, ಇತ್ತೀಚೆಗೆ ಪಂಚಾಯತ್‌ರಾಜ್ ವ್ಯವಸ್ಥೆ ಅಧಿಕಾರ ಮೊಟುಕುಗೊಳಿಸುತ್ತಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.

ಜಿಪಂ, ಮಂಡಲ ಪಂಚಾಯಿತಿಗಳಿದ್ದಾಗ ಗಟ್ಟಿಯಾಗಿಯೇ ಇದ್ದ ಈ ವ್ಯವಸ್ಥೆ ಇತ್ತೀಚೆಗೆ ಸಡಿಲಗೊಂಡಿದೆ. ಅದನ್ನು ಶಾಸನ ಸಭೆಗಳು ಕಿತ್ತುಕೊಂಡಿವೆ ಎಂದು ಬೇಸರ ವ್ಯಕ್ತಪಡಿಸಿದರು.

ತರೀಕೆರೆ ಶಾಸಕ ಶ್ರೀನಿವಾಸ್ ಮಾತನಾಡಿ ಗ್ರಾಮೀಣ ಮಕ್ಕಳಿಗೂ ‘ಬೇಸಿಗೆ ಬೆಸುಗೆ’ ಕಾರ್ಯಕ್ರಮ ತಲುಪಿಸಿರುವುದು ಶ್ಲಾಘನೀಯ ಸಾಧನೆ ಎಂದರು. ಮುಂದಿನ ವರ್ಷದಿಂದ ಈ ಕಾರ್ಯಕ್ರಮ ರಾಜ್ಯಾದ್ಯಂತ ವಿಸ್ತರಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

ಮಕ್ಕಳ ಮೇಲಿನ ದೌರ್ಜನ್ಯ, ಶಾಲಾ ಡ್ರಾಪ್‌ಔಟ್ ಹಾಗೂ ಹದಿಹರೆಯದ ಸಮಸ್ಯೆಗಳನ್ನು ತಡೆಗಟ್ಟಲು ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

ಕಾಡಾ ಯೋಜನೆ, ಎನ್‌ಆರ್‌ಇಜಿಎ ಸಹಯೋಗದ ನೀರು ನಿರ್ವಹಣಾ ಕಾರ್ಯಕ್ರಮ ಹಾಗೂ ಇ-ಸ್ವತ್ತು ಯೋಜನೆಗಳಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಿದೆ. ಪಿಡಿಒಗಳು ಹಾಗೂ ಅಧಿಕಾರಿಗಳು ಜನಸ್ನೇಹಿ ಆಡಳಿತ ನೀಡುವ ಮೂಲಕ ಗ್ರಾಮೀಣಾಭಿವೃದ್ಧಿಗೆ ಇನ್ನಷ್ಟು ಶ್ರಮಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಮಾತನಾಡಿ, ‘ಬೇಸಿಗೆ ಬೆಸುಗೆ’ ಹಾಗೂ ‘ಭದ್ರಬಾಲ್ಯ’ ಕಾರ್ಯಕ್ರಮ ಮಕ್ಕಳ ಸೃಜನಶೀಲತೆ ವೃದ್ಧಿಸುವ ಜೊತೆಗೆ ಬಾಲ್ಯವಿವಾಹ, ಹದಿಹರೆಯದ ಗರ್ಭಧಾರಣೆ ಹಾಗೂ ಶಾಲಾ ಡ್ರಾಪ್‌ಔಟ್ ಸಮಸ್ಯೆ ಗಳನ್ನು ತಡೆಯುವಲ್ಲಿ ಪರಿಣಾಮಕಾರಿ ಪಾತ್ರ ವಹಿಸುತ್ತಿವೆ ಎಂದು ತಿಳಿಸಿದರು.

ಸಾಧನೆ ತೋರಿದ ಅಧಿಕಾರಿ ಸಿಬ್ಬಂದಿ ಹಾಗೂ ಬೇಸಿಗೆ ಬೆಸುಗೆ ಶಿಬಿರದ ಕಾರ್ಯಕರ್ತರನ್ನು ಕಾರ್ಯಕ್ರಮದಲ್ಲಿ ಗೌರವಿಸ ಲಾಯಿತು. ಭಾರತೀಯ ಸೇನೆ ನಿವೃತ್ತ ಉಪ ಮುಖ್ಯಸ್ಥ ಬಗ್ಗವಳ್ಳಿರಾಜು, ಜಿಪಂ ಉಪಕಾರ್ಯದರ್ಶಿ ರಾಜಗೋಪಾಲ್, ಜಿ.ಪಂ. ಉಪಕಾರ್ಯದರ್ಶೀ ಗೌರವ ಕುಮಾರ್ ಶೆಟ್ಟಿ ಮೊದಲಾದವರಿದ್ದರು.

-- ಬಾಕ್ಸ್‌ --ಪರಿಶ್ರಮವೇ ಸಾಧನೆಗೆ ಕಾರಣ

ಚೈತ್ರೋತ್ಸವ, ಭದ್ರಬಾಲ್ಯ, ಬೇಸಿಗೆ ಬೆಸುಗೆ ಮತ್ತಿತರೆ ಅನೇಕ ಯೋಜನೆ ಅನುಷ್ಠಾನ ಮಾಡುವಲ್ಲಿ ನಮ್ಮ ಗ್ರಾಮ ಪಂಚಾಯಿತಿ ಅಧಿಕಾರಿಗಳ ಪರಿಶ್ರಮ ಹೆಚ್ಚು, ಇದಕ್ಕೆ ಜನಪ್ರತಿನಿಧಿಗಳು ಕೈಜೋಡಿಸಿದ್ದಾರೆ. ತೆರಿಗೆ ವಸೂಲಿಯಲ್ಲಿ ನಮ್ಮ ಜಿಲ್ಲೆ ಶೇ.100ಸಾಧನೆ ಮಾಡಿದೆ. ಇದಕ್ಕೆ ಪಂಚಾಯತ್‌ರಾಜ್ ಇಲಾಖೆ ಅಧಿಕಾರಿ ಸಿಬ್ಬಂದಿಯ ಅವಿರತ ಪರಿಶ್ರಮವೇ ಕಾರಣ ಎಂದು ಜಿಪಂ ಸಿಇಒ ಎಚ್‌.ಎಸ್‌.ಕಿರ್ತನಾ ಮೆಚ್ಚಿಗೆ ವ್ಯಕ್ತಪಡಿಸಿದರು.