ಪರಸ್ಪರ ನಂಬಿಕೆಯೊಂದಿಗೆ ಸಾಂಗತ್ಯ ಜೀವನ ನಡೆಬೇಕು. ಬೆಣಕಲ್ಲ ಗ್ರಾಮ ಭಾವೈಕ್ಯತೆಗೆ ಹೆಸರುವಾಸಿ
ಕುಕನೂರು: ಇತ್ತೀಚಿನ ದಿನಗಳಲ್ಲಿ ದಾಂಪತ್ಯ ಜೀವನದಲ್ಲಿ ಬಿರುಕು ಮೂಡುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿರುವುದು ವಿಷಾದನೀಯವಾಗಿದ್ದು, ಗಂಡ ಹೆಂಡತಿಯರು ಪರಸ್ಪರ ಹೊಂದಾಣಿಕೆ ಜತೆಗೆ ಪ್ರೀತಿ ವಿಶ್ವಾಸ ಹೊಂದಿದಾಗ ದಾಂಪತ್ಯ ಜೀವನ ಶಾಶ್ವತವಾಗಿ ಗಟ್ಟಿಯಾಗಿರುತ್ತದೆ ಎಂದು ಕುಕನೂರಿನ ಅನ್ನದಾನೀಶ್ವರ ಶಾಖಾಮಠದ ಶ್ರೀ ಮಹಾದೇವ ಸ್ವಾಮೀಜಿ ಹೇಳಿದರು.
ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಶ್ರೀಗುಡ್ಡದ ಬಸವೇಶ್ವರ ಹಾಗೂ ಶ್ರೀಅನ್ನದಾನೀಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಪರಸ್ಪರ ನಂಬಿಕೆಯೊಂದಿಗೆ ಸಾಂಗತ್ಯ ಜೀವನ ನಡೆಬೇಕು. ಬೆಣಕಲ್ಲ ಗ್ರಾಮ ಭಾವೈಕ್ಯತೆಗೆ ಹೆಸರುವಾಸಿ. ಗ್ರಾಮದ ಈ ಪುಣ್ಯದ ಫಲದಿಂದ ಹಲವಾರು ಧಾರ್ಮಿಕ ಕಾರ್ಯ ಜರುಗುತ್ತವೆ. ಇಂತಹ ಧಾರ್ಮಿಕ ಸ್ಥಳದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಜೋಡಿಗಳು ಬದುಕಿನಲ್ಲಿ ನಲಿವು ಕಾಣಬೇಕು ಎಂದರು.ಶ್ರೀಶರಣ ಬಸವೇಶ್ವರ ಪುರಾಣ ಪ್ರವನಚ ಮಂಗಳಗೊಂಡಿತು. ಯಲಬುರ್ಗಾದ ಶ್ರೀಬಸವಲಿಂಗೇಶ್ವರ ಶಿವಾಚಾರ್ಯರು, ಶ್ರೀಸಿದ್ದೇಶ್ವರ ಶಿವಾಚಾರ್ಯರು, ಶ್ರೀಚಿದಾನಂದ ಸ್ವಾಮೀಜಿ ಹಾಗೂ ಗ್ರಾಮಸ್ಥರಿದ್ದರು. ಅನ್ನಸಂತರ್ಪಣೆ ಜರುಗಿತು.
ಅದ್ಧೂರಿ ರಥೋತ್ಸವ:ತಾಲೂಕಿನ ಬೆಣಕಲ್ಲ ಗ್ರಾಮದಲ್ಲಿ ಗುಡ್ಡದ ಬಸವೇಶ್ವರ ಮಹಾರಥೋತ್ಸವ ಅದ್ಧೂರಿಯಾಗಿ ಜರುಗಿತು. ಭಕ್ತರು ರಥಕ್ಕೆ ಉತ್ತತ್ತಿ, ಬಾಳೆ ಹಣ್ಣು ಅರ್ಪಿಸಿ ಭಕ್ತಿ ಮರೆದರು.ನಾನಾ ಗ್ರಾಮಗಳಿಂದ ಅಪಾರ ಪ್ರಮಾಣದಲ್ಲಿ ಭಕ್ತರು ಆಗಮಿಸಿದ್ದರು. ರಥೋತ್ಸವದುದ್ದಕ್ಕೂ ಭಕ್ತರು ಗುಡ್ಡದ ಬಸವೇಶ್ವರ ಮಹಾರಾಜಕೀ ಜೈ ಎಂಬ ಜಯಘೋಷ ಕೂಗಿದರು.